ನವದೆಹಲಿ: ಭಾರತೀಯ ರೈಲ್ವೆ ಪ್ರವಾಸಿಗರು ಮತ್ತು ಪ್ರಯಾಣಿಕರ ಸಂಚಾರದಲ್ಲಿ ಪ್ರಮುಖ ಪಾತ್ರವಹಿಸಿದೆ. ಅದೇ ರೀತಿ ಸರಕು ವ್ಯವಹಾರದಲ್ಲಿಯೂ ಅತ್ಯುತ್ತಮ ಗುರಿಯನ್ನು ಸಾಧಿಸಿರುವುದಾಗಿ ವರದಿ ತಿಳಿಸಿದೆ.
ರೈಲ್ವೆಯ ಅಧಿಕೃತ ಅಂಕಿಅಂಶದ ಪ್ರಕಾರ, 2024ರ ಮಾರ್ಚ್ 15ರವರೆಗೆ ಆರಂಭಿಕವಾಗಿ ಭಾರತೀಯ ರೈಲ್ವೆ ಸರಕು ಲೋಡಿಂಗ್ ನಲ್ಲಿ 1,500 ಮೆಟ್ರಿಕ್ ಟನ್ ಗಳನ್ನು ದಾಟುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. 2022-23ನೇ ಆರ್ಥಿಕ ವರ್ಷದಲ್ಲಿ 1,512 ಮೆಟ್ರಿಕ್ ಟನ್ ಸರಕು ಲೋಡಿಂಗ್ ಆಗಿತ್ತು.
2023-2024ನೇ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆಯ ಒಟ್ಟು ಆದಾಯ 2.40 ಲಕ್ಷ ಕೋಟಿ ರೂಪಾಯಿ. ಮತ್ತೊಂದೆಡೆ 2023-24ನೇ ಸಾಲಿನಲ್ಲಿ ಭಾರತೀಯ ರೈಲ್ವೆಯ ಒಟ್ಟು ಖರ್ಚು 2.26 ಲಕ್ಷ ಕೋಟಿ ರೂಪಾಯಿ ಎಂದು ವರದಿ ತಿಳಿಸಿದೆ.
2023-24ನೇ ಸಾಲಿನಲ್ಲಿ ಭಾರತೀಯ ರೈಲ್ವೆಯಲ್ಲಿ ಬರೋಬ್ಬರಿ 648 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದರು. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 52 ಕೋಟಿಯಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ವರ್ಷದ ಪ್ರಯಾಣಿಕರ ಸಂಖ್ಯೆ 596 ಕೋಟಿ ಎಂದು ಅಂಕಿಅಂಶ ವಿವರಿಸಿದೆ.
ಸಂಚಾರ ಮಾರ್ಗದಲ್ಲಿ ರೈಲ್ವೆ ಪ್ರಮುಖ ಪಾತ್ರವಹಿಸಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ 5,100 ಕಿಲೋ ಮೀಟರ್ ನೂತನ ಹಳಿಯನ್ನು ನಿರ್ಮಿಸಿದ್ದು, ಪ್ರತಿದಿನ 14 ಕಿಲೋ ಮೀಟರ್ ಗಿಂತಲೂ ಹೆಚ್ಚು ಹಳಿ ನಿರ್ಮಾಣ ಕಾರ್ಯ ಮಾಡಲಾಗಿತ್ತು.