Advertisement

ಏರ್‌ ಶೋ: ಯೋಧರ ಸಾಹಸಕ್ಕೆ ನಿಬ್ಬೆರಗಾದ ಜನ

11:50 AM Oct 14, 2018 | Team Udayavani |

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಂಭ್ರಮ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ದಸರೆಯ ಅಂಗವಾಗಿ ಶನಿವಾರ ನಡೆದ ವೈಮಾನಿಕ ಪ್ರದರ್ಶನದ ಪೂರ್ವಭಾವಿ ತಾಲೀಮು ಮೈಸೂರಿಗರ ಮನರಂಜಿಸಿತು. ಬಾನೆತ್ತರದಿಂದ ಸ್ಕೈಡೈವಿಂಗ್‌ ನಡೆಸಿದ ಯೋಧರ ಸಾಹಸದ ಜತೆಗೆ ಇಂಡಿಯನ್‌ ಏರ್‌ಫೋರ್ಸ್‌ನ ಎರಡು ಯುದ್ಧ ವಿಮಾನಗಳು ಏರ್‌ಶೋ ಆಕರ್ಷಣೆ ಹೆಚ್ಚಿಸಿತು. 

Advertisement

ದಸರಾ ಮಹೋತ್ಸವದ ಅಂಗವಾಗಿ ಶನಿವಾರ ನಗರದ ಬನ್ನಿಮಂಟದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ವೈಮಾನಿಕ ಪ್ರದರ್ಶನದ ತಾಲೀಮಿನಲ್ಲಿ ವಾಯುಪಡೆ ಸೈನಿಕರ ಸಾಹಸಮಯ ಪ್ರದರ್ಶನ ನೋಡುಗರ ಮೆಚ್ಚುಗೆ ಪಡೆಯಿತು.

ಸುಡುಬಿಸಿಲಿನ ನಡುವೆಯೂ ಪಂಜಿನ ಕವಾಯತು ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಕಮಾಂಡೋಗಳು ನಡೆಸಿಕೊಟ್ಟ ಸಾಹಸ ಪ್ರದರ್ಶನಕ್ಕೆ ಮನಸೋತರು. ದಸರೆಯ ಅಂಗವಾಗಿ ಆಯೋಜಿಸಿರುವ ಏರ್‌ ಶೋ ಅ.14ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಮೈಸೂರು ನಗರದ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ನಗರದ ಜನತೆಗೆ ಮತ್ತಷ್ಟು ಮನರಂಜನೆ ನೀಡಲಿದೆ. 

ಆಕರ್ಷಕ ಸ್ಕೈ ಡೈವಿಂಗ್‌: ಏರ್‌ ಶೋ ತಾಲೀಮಿನಲ್ಲಿ ಏರ್‌ಡೆವಿಲ್ಸ್‌, ಆಕಾಶ ಗಂಗಾ ತಂಡಗಳಿಂದ ನಡೆಸಿಕೊಟ್ಟ ಸಾಹಸಮಯ ಪ್ರದರ್ಶನ ನೋಡುಗರಿಗೆ ರಸದೌತಣ ನೀಡಿತು. ಗಜಾನಂದ್‌ ಯಾದವ್‌ ನೇತೃತ್ವದ ತಂಡದ ಯೋಧರು ಅಂದಾಜು 8,000 ಅಡಿ ಎತ್ತರದಿಂದ ಸ್ಕೈಡೈವಿಂಗ್‌ ಮಾಡುವ ಮೂಲಕ ಎಲ್ಲರ ಚೆಪ್ಪಾಳೆ ಗಿಟ್ಟಿಸಿಕೊಂಡರು.

ಆರಂಭದಲ್ಲಿ ನಾಲ್ವರು ಯೋಧರು ಆಕಾಶಗಂಗಾ ತಂಡದ ಧ್ವಜದೊಂದಿಗೆ ಯಶಸ್ವಿಯಾಗಿ ಸ್ಕೈಡೈವಿಂಗ್‌ ಮಾಡುವ ಮೂಲಕ ನೋಡುಗರ ಆಕರ್ಷಣೆ ಹೆಚ್ಚಿಸಿದರು. ಇದಾದ ಕೆಲಹೊತ್ತಿನ ಐವರು ಯೋಧರು ಬಾನಂಗಳದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಾ ಬಾನೆತ್ತರದಿಂದ ಸ್ಕೈಡೈವಿಂಗ್‌ ನಡೆಸಿ ಮಿಂಚಿದರು. ಆಕರ್ಷಕ ಸ್ಕೈಡೈವಿಂಗ್‌ ಪ್ರದರ್ಶಿಸಿದ ವಾಯುಸೇನೆಯ ಯೋಧರ ಸಾಹಸಕ್ಕೆ ಮನಸೋತ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆ, ಹರ್ಷೋದ್ಘಾರದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. 

Advertisement

ಸ್ಲಿಥರಿಂಗ್‌ ಪ್ರದರ್ಶನ: ವೈಮಾನಿಕ ಪ್ರದರ್ಶನದ ತಾಲೀಮಿನ ಆರಂಭದಲ್ಲಿ ಗರುಡ ಕಮಾಂಡೋ ತಂಡದ 13 ಮಂದಿ ಯೋಧರು ಸ್ಲಿಥರಿಂಗ್‌ ಪ್ರದರ್ಶನದಿಂದ ಎಲ್ಲರನ್ನು ರಂಜಿಸಿದರು. ಪಂಜಿನ ಕವಾಯತು ಮೈದಾನದ ಮಧ್ಯಭಾಗಕ್ಕೆ ಆಗಮಿಸಿದ್ದ ಹೆಲಿಕಾಪ್ಟರ್‌ನಿಂದ 13 ಯೋಧರು ಹಗ್ಗದ ಮೂಲಕ 50 ಅಡಿಗಳ ಎತ್ತರರಿಂದ ಭೂಮಿಗೆ ಇಳಿದು ಗಮನ ಸೆಳೆದರು.

ಇದಕ್ಕೂ ಮುನ್ನ ಏರ್‌ ಶೋ ತಾಲೀಮು ಆರಂಭವಾಗುತ್ತಿದ್ದಂತೆ ಭಾರೀ ಸದ್ದು ಮಾಡುತ್ತಾ ಪಂಜಿನ ಕವಾಯತು ಮೈದಾನದತ್ತ ಆಗಮಿಸಿದ ಹೆಲಿಕಾಫ್ಟರ್‌ನಿಂದ 115 ಅಡಿ ಎತ್ತರದಿಂದ ಪುಷ್ಪಾರ್ಚನೆ ಮಾಡಲಾಯಿತು. ವೈಮಾನಿಕ ಪ್ರದರ್ಶನದ ತಾಲೀಮಿನಲ್ಲಿ ಏರ್‌ಫೋರ್ಸ್‌ನ ಎರಡು ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಯಿತು. 

ಧೂಳೆಬ್ಬಿಸಿದ ಹೆಲಿಕಾಪ್ಟರ್‌: ಸೈನಿಕರ ಸಾಸಹ ಹಾಗೂ ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಳ್ಳಲೆಂದು ಸಾವಿರಾರು ಮಂದಿ ಪಂಜಿನ ಕವಾಯತು ಮೈದಾನದಲ್ಲಿ ಜಮಾಯಿಸಿದ್ದರು. ಈ ವೇಳೆ ತಾಲೀಮಿನಲ್ಲಿ ಗರುಡ ಕಮಾಂಡೋ ತಂಡದ 13 ಯೋಧರನ್ನು ಹೊತ್ತುಬಂದ ಹೆಲಿಕಾಪ್ಟರ್‌ ಮೈದಾನದಲ್ಲಿ ಧೂಳೆಬ್ಬಿಸಿತು.

ಹೆಲಿಕಾಪ್ಟರ್‌ ಮೈದಾನದ ಮಧ್ಯಭಾಗಕ್ಕೆ ಆಗಮಿಸುತ್ತಿದ್ದಂತೆ ಮೈದಾನದ ತುಂಬೆಲ್ಲಾ ಧೂಳು ಆವರಿಸಿತು. ಹೀಗಾಗಿ ಏರ್‌ ಶೋ ವೀಕ್ಷಿಸಲು ಮೈದಾನದಲ್ಲಿ ಕುತೂಹಲದಿಂದ ಕಾದುಕುಳಿತಿದ್ದ ಪ್ರತಿಯೊಬ್ಬರೂ ಧೂಳಿನಿಂದ ಪಾರಾಗಲು ಮೈದಾನ ಬಿಟ್ಟು ಓಡಿದರು. 

Advertisement

Udayavani is now on Telegram. Click here to join our channel and stay updated with the latest news.

Next