Advertisement

ಸುಳ್ಳುಗಾರ ಮೋದಿ; ಪ್ರಧಾನಿ ವಿರುದ್ಧ ರಾಹುಲ್‌ ಗಾಂಧಿ ಟೀಕಾ ಪ್ರಹಾರ

06:00 AM Apr 27, 2018 | Team Udayavani |

ಕುಮಟಾ/ಅಂಕೋಲಾ: “”ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದಿದ್ದ ನರೇಂದ್ರ ಮೋದಿ, ದಿನವೊಂದಕ್ಕೆ ಕೇವಲ 450 ಮಂದಿಗೆ ಮಾತ್ರ ಉದ್ಯೋಗ ಒದಗಿಸಿದ್ದಾರೆ. ಮೋದಿಯವರು ಇಡೀ ದೇಶಕ್ಕೆ ಕೊಡುವಷ್ಟು ಉದ್ಯೋಗವನ್ನು ಕರ್ನಾಟಕದಲ್ಲಿ ಸಿದ್ದರಾಮಯ್ಯನವರೇ ಕೊಡುತ್ತಾರೆ” ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು.

Advertisement

ಗುರುವಾರ ಉತ್ತರಕನ್ನಡದ ಕುಮಟಾದಲ್ಲಿ ರೋಡ್‌ ಶೋ ನಡೆಸಿದ ಅವರು, “”ರಫೆಲ್‌ ವಿಮಾನ ಖರೀದಿ, ನೀರವ್‌ ಮೋದಿ, ಲಲಿತ್‌ ಮೋದಿ ಮುಂತಾದವರ ಬಗ್ಗೆ ಯಾಕೆ ಪ್ರಧಾನಿ ಮೋದಿ ಒಂದೇ ಒಂದು ಶಬ್ದ ಮಾತನಾಡುತ್ತಿಲ್ಲ? ಎಂದು ಕಿಡಿಕಾರಿದರು. ಅಲ್ಲದೆ, ಬಿಜೆಪಿ ಏನನ್ನೇ ಮಾಡಿದರೂ ಶ್ರೀಮಂತರಾದ ಐದೈತ್ತು ಉದ್ಯಮಪತಿಗಳಿಗಾಗಿ ಮಾಡುತ್ತದೆ. ಆದರೆ ಕಾಂಗ್ರೆಸ್‌ ಹಾಗಲ್ಲ, ಜನಸಾಮಾನ್ಯರಿಗಾಗಿ ಕೆಲಸ ಮಾಡುತ್ತದೆ” ಎಂದರು.

“”ಸಿದ್ದರಾಮಯ್ಯ ಪ್ರೀತಿ ಹಾಗೂ ಸಹೋದರತ್ವದಿಂದ ಕೆಲಸ ಮಾಡುತ್ತಾರೆ. ಬಿಜೆಪಿಯವರು ಜಾತಿ, ಧರ್ಮ ಒಡೆದು ವಿಕಾಸದ ಮಾತನಾಡುತ್ತಾರೆ. ನೋಟ್‌ಬ್ಯಾನ್‌, ಗಬ್ಬರ್‌ಸಿಂಗ್‌ ಟ್ಯಾಕ್ಸ್‌ನಿಂದ ವಿಕಾಸ ಸಿಕ್ಕಿದೆಯೇ?” ಎಂದು ಪ್ರಶ್ನಿಸಿದರು ರಾಹುಲ್‌.

“”ಮೋದಿ ಪ್ರಮುಖ 15 ಉದ್ಯಮೊಗಳ, 1.5 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ರೈತರ ಸಾಲಮನ್ನಾ ಮಾಡಿ ಎಂದರೆ ಮೋದಿ ಹಾಗೂ ಜೇಟಿÉ ಪಾಲಿಸಿ ಇಲ್ಲ ಎನ್ನುತ್ತಾರೆ. ಅವರ ಪಾಲಿಸಿ ಏನಿದ್ದರೂ ಸಿರಿವಂತರಿಗಾಗಿ. ಕಾಂಗ್ರೆಸ್‌ ಪಕ್ಷ 70,000 ಕೋಟಿ ರೂ. ಸಾಲ ಮನ್ನಾ ಮಾಡಿದೆ. ಸಿದ್ದರಾಮಯ್ಯನವರು 8,000 ಕೋಟಿ ರೂ. ರೈತರ ಸಾಲಮನ್ನಾ ಮಾಡಿದ್ದಾರೆ. ನಿಮ್ಮ ಹಣ ನಿಮಗೆ ಸಿಗಬೇಕು. ರೈತರು, ಮಹಿಳೆಯರ, ಬಡವರ ಕೈಸೇರಬೇಕು. ಕಾರಣ, ಅಬಲರು, ಬಡವರ ಪರವಾದ ಸರಕಾರ ತನ್ನಿ” ಎಂದು ಮನವಿ ಮಾಡಿದರು.

ಸಂವಿಧಾನ ಚೌಕಟ್ಟು ಹಾಳುಗೆಡವಲು ಯತ್ನ
ಬಿಜೆಪಿ ದೇಶದ ಸಾಮಾಜಿಕ ಸೌಹಾರ್ದತೆ ಹಾಗೂ ಸಾವಿಧಾನಿಕ ಚೌಕಟ್ಟನ್ನು ಹಾಳುಗೆಡಹಲು ಹೊರಟಿದೆ ಎಂದು ರಾಹುಲ್‌ ಗಾಂ ಧಿ ಆರೋಪಿಸಿದ್ದಾರೆ.

Advertisement

ಅಂಕೋಲಾದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ರೋಡ್‌ ಶೋ ನಡೆಸಿದ ರಾಹುಲ್‌, ಮೋದಿ ರೈತ ಮತ್ತು ಕಾರ್ಮಿಕರ ವಿರೋಧಿ.ರೈತರ ಸಂಕಷ್ಟಗಳು ಅರ್ಥವಾಗದು. ರೈತರ ಸಾಲ ಮನ್ನಾ ಮಾಡಿ ಎಂದು ಪ್ರಧಾನಿ ಕಚೇರಿಗೆ ಹೋಗಿದ್ದೆ. ಆಗ ಅವರು ರೈತರ ಸಾಲ ಮನ್ನಾ ನಮ್ಮ ಆದ್ಯತೆಯಲ್ಲ ಎಂದರು. ಕರ್ನಾಟಕದಲ್ಲಿ ರೈತರು, ಕಾರ್ಮಿಕರು, ಗೂಡಂಗಡಿಕಾರರು, ವ್ಯಾಪಾರಿಗಳು ಕಷ್ಟಪಟ್ಟು ದುಡಿಯುತ್ತೀರಿ. ಆದರೆ ದೇಶದ ಹಣ ದೋಚಿ ವಿದೇಶಕ್ಕೆ ಪರಾರಿಯಾದವರನ್ನು ಮೋದಿ ರಕ್ಷಿಸುತ್ತಾರೆ ಎಂದು ಆರೋಪಿಸಿದರು.

ಮೋದಿ ಹೇಳಿದ್ದು ಇದೇ ಸುಳ್ಳು…
ರಸ್ತೆ ಬದಿ ನಿಂತಿದ್ದ ಮಹಿಳೆಯರನ್ನು ನಿಮ್ಮ ಖಾತೆಗೆ 15 ಲಕ್ಷ ರೂ. ಬಂದಿದೆಯಾ ಎಂದು ರಾಹುಲ್‌ ಪ್ರಶ್ನಿಸಿದರು. ಅದಕ್ಕೆ ಮಹಿಳೆಯರಿಂದ ಇಲ್ಲ ಎಂಬ ಉತ್ತರ ಬಂತು. ಇದೇ ನೋಡಿ ಮೋದಿ ಹೇಳಿದ ಸುಳ್ಳು. ಅವರು ಮಾತನ್ನು ಉಳಿಸಿಕೊಂಡಿಲ್ಲ. ಅಲ್ಲದೇ, ನೋಟ್‌ ಬ್ಯಾನ್‌ ಮಾಡಿದರು. ನಿಮ್ಮ ಹಣ, ನಿಮ್ಮ ಬೆವರಿನ ಹಣ ನಿಮಗೆ ಸಿಗದಂತೆ ಮಾಡಿದರು. ಇದು ಕೇಂದ್ರ ಸರ್ಕಾರವನ್ನು ನಡೆಸುವ ರೀತಿಯೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next