Advertisement

ಆಗುಂಬೆ ಘಾಟಿ ರಸ್ತೆ ಸಮಸ್ಯೆಗೆ ಸಿಗುತ್ತಿಲ್ಲ ಮುಕ್ತಿ! ​​​​​​​

06:00 AM Jul 17, 2018 | Team Udayavani |

ಶಿವಮೊಗ್ಗ: ಕರಾವಳಿ ಹಾಗೂ ಮಲೆನಾಡಿನ ಪ್ರಮುಖ ಸಂಪರ್ಕ ಸೇತುವಾಗಿರುವ ಆಗುಂಬೆ ಘಾಟಿ ರಸ್ತೆ ಸಮಸ್ಯೆ ಇಂದು ನಿನ್ನೆಯದಲ್ಲ.

Advertisement

ಮಳೆಗಾಲದಲ್ಲಂತೂ ಘಾಟಿಯಲ್ಲಿ ಗುಡ್ಡ ಕುಸಿಯೋದು, ಸಂಚಾರ ಸ್ಥಗಿತಗೊಳ್ಳೋದು ಮಾಮೂಲಿ ಎನ್ನುವಂತಾಗಿದೆ. ಈ ವರ್ಷದಲ್ಲೇ ಘಾಟಿಯಲ್ಲಿ ಎರಡು ಬಾರಿ ಕುಸಿದಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ನಿರಂತರ ಮಳೆ, ಚರಂಡಿ ಬ್ಲಾಕ್‌, ವಾರ್ಷಿಕ ನಿರ್ವಹಣೆ ಕೊರತೆಯಿಂದ ಆಗುಂಬೆ ಘಾಟಿ ರಸ್ತೆಗಳು ಕುಸಿಯುತ್ತಿವೆ ಎಂಬುದು ತಜ್ಞರ ಅಭಿಮತ.

ಕಳೆದ ವರ್ಷ ಕೋಟ್ಯಂತರ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಉತ್ತಮ ರಸ್ತೆ ಮಾಡಿತ್ತು. ಅಂದಿನ ಶಿವಮೊಗ್ಗ ವಲಯ ಅಧೀಕ್ಷಕ ಬಿ.ಎಸ್‌.ಬಾಲಕೃಷ್ಣ ಅವರು ಕಾಳಜಿ ವಹಿಸಿ ಉತ್ತಮ ರಸ್ತೆಗೆ ಶ್ರಮಿಸಿದ್ದರು. ಪ್ರತಿವರ್ಷ ಮಳೆಗಾಲಕ್ಕೂ ಮುನ್ನ ಘಾಟಿ ಚರಂಡಿಗಳ ಸ್ವತ್ಛತೆ, ಗಿಡಗಂಟೆಗಳ ತೆರವು ಕಾರ್ಯ ಮಾಡುತ್ತಿತ್ತು. ಈ ರಸ್ತೆಯನ್ನು ಕಳೆದ ವರ್ಷ ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರಕ್ಕೆ ಹಸ್ತಾಂತರ ಮಾಡಿದ ನಂತರ ಈ ಕೆಲಸ ಆಗಿಲ್ಲ ಎನ್ನಲಾಗುತ್ತಿದೆ. 

ಬದಲಿ ಮಾರ್ಗ ದೂರ: ಗುಡ್ಡ ಕುಸಿತ ಮುಂದುವರಿದರೆ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಬಹುದು. ಹಾಗೇನಾದರೂ ಆದರೆ ಪ್ರಯಾಣ ದೂರ ಮತ್ತು ತ್ರಾಸದಾಯಕವಾಗಿರಲಿದೆ. ತೀರ್ಥಹಳ್ಳಿ ಯಿಂದ ಆಗುಂಬೆ ಮೂಲಕ ಉಡುಪಿ ತಲುಪಲು 93.2 ಕಿಮೀ ಆಗುತ್ತದೆ. ಅದೇ ನೀವು ಮಾಸ್ತಿಕಟ್ಟೆ, ಹುಲಿಕಲ್‌ ಘಾಟಿ ಮೂಲಕ ಹೋಗುವುದಾದರೆ 112 ಕಿಮೀ ಆಗುತ್ತದೆ. ಆದರೆ ಈ ರಸ್ತೆಯಲ್ಲಿ ಸರಕು ಸಾಗಣೆ ವಾಹನಗಳು ಹೆಚ್ಚಿರುತ್ತದೆ. ಜತೆಗೆ ರಸ್ತೆ ಕಿರಿದಾಗಿರುವುದರಿಂದ ಸಂಚಾರ ಬಲು ಕಷ್ಟ. ಜತೆಗೆ ರಸ್ತೆ ಕೂಡ ಅಭಿವೃದ್ದಿಯಾಗಿಲ್ಲ. ಶೃಂಗೇರಿ ಮೂಲಕ ಹೋಗುವುದಾದರೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ. 150 ಕಿಮೀ ಗೂ ಹೆಚ್ಚಿನ ದೂರವಾಗುತ್ತದೆ.

ದಿನಕ್ಕೆ 2 ಸಾವಿರಕ್ಕೂ ಹೆಚ್ಚು ವಾಹನ: ಈ ಘಾಟಿಯಲ್ಲಿ ಪ್ರತಿದಿನ 2000ಕ್ಕೂ ಹೆಚ್ಚು ವಾಹನಗಳು ಓಡಾಡುತ್ತವೆ. ಇದರಲ್ಲಿ ವೈದ್ಯಕೀಯ ಚಿಕಿತ್ಸೆಗೆ ಮಣಿಪಾಲ್‌ಗೆ ಹೋಗುವವರ ಸಂಖ್ಯೆ ಹೆಚ್ಚು. ರಜಾ ದಿನಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿರುತ್ತದೆ.

Advertisement

ಹೇಗಿರುತ್ತೆ ಘಾಟಿ ರಸ್ತೆ?
ರಸ್ತೆಯ ಒಂದು ಭಾಗದಲ್ಲಿ ಚರಂಡಿ ಇದ್ದರೆ, ಇಳಿಜಾರಿನ ಕಡೆ ಗುಡ್ಡ ಅಥವಾ ವಾಲ್‌ಗ‌ಳಿಗೆ ನೀರು ಇಂಗಿ ಹೋಗಲುಪೈಪ್‌ಗ್ಳನ್ನು ಹಾಕಲಾಗಿರುತ್ತದೆ. ಒಂದು ಭಾಗದ ನೀರು ಚರಂಡಿಯಲ್ಲಿ ಹರಿದು ಹೋದರೆ ಇನ್ನೊಂದು ಬದಿ ಗುಡ್ಡಕ್ಕೆ ಹಾಕಿರುವ ಪೈಪ್‌ ಮೂಲಕ ಹೊರ ಹೋಗುತ್ತದೆ. ಚರಂಡಿ ಬ್ಲಾಕ್‌ ಆದಾಗ ನೀರು ರಸ್ತೆ ಮೇಲೆ ಹರಿಯಲು ಶುರುವಾಗುತ್ತದೆ. ಆಗುಂಬೆಯಲ್ಲಿ ನಿರಂತರ ಮಳೆ ಇರುವುದರಿಂದ ನೀರು ರಸ್ತೆ ಹಾಗೂ ಭೂಮಿ ಒಳಗೆ ಇಳಿದು ಮಣ್ಣು ಸಡಿಲಗೊಳ್ಳಲು ಕಾರಣವಾಗಿದೆ ಎನ್ನುತ್ತಾರೆ ನಿವೃತ್ತ ಎಂಜಿನಿಯರ್‌ ಒಬ್ಬರು.

ಕರ್ನಾಟಕದ ಚಿರಾಪುಂಜಿ
ಕರ್ನಾಟಕದ ಚಿರಾಪುಂಜಿ ಎಂದು ಖ್ಯಾತಿಯಾಗಿರುವ ಆಗುಂಬೆಯಲ್ಲಿ ವಾರ್ಷಿಕ 7624 ಮಿಮೀ ಮಳೆಯಾಗುತ್ತದೆ. ಜೂನ್‌ನಲ್ಲಿ 1664 ಮಿಮೀ ಹಾಗೂ ಜುಲೈನಲ್ಲಿ 2647 ಮಿಮೀ ಸರಾಸರಿ ಮಳೆಯಾಗುತ್ತದೆ. ನಿರಂತರ ಮಳೆ ಸುರಿಯತ್ತಿರುವುದರಿಂದ ರಸ್ತೆ ಕೊನೆಗೆ ವಾಹನಗಳು ಹೋಗದಂತೆ ಮರಳು ಚೀಲ, ಕಲ್ಲುಗಳನ್ನು ಹಾಕಲಾಗಿದೆ. ತಳದಿಂದಲೇ ಮರಳಿನ ಚೀಲಗಳನ್ನು ಹಾಕಿ ಗಟ್ಟಿಗೊಳಿಸಬೇಕು. ಶಾಶ್ವತ ದುರಸ್ತಿಗೆ ಮಳೆ ಬಿಡಬೇಕು ಎನ್ನುತ್ತಾರೆ ಅಧಿಕಾರಿಗಳು.

ಎಲ್ಲೆಲ್ಲಿ ಕುಸಿತ?
ಆಗುಂಬೆ ಘಾಟಿಯ ಏಳನೇ ತಿರುವಿನಲ್ಲಿ ಜೂನ್‌ 27ರಂದು ಮೊದಲ ಬಾರಿ ಕುಸಿತ ಕಂಡಿತ್ತು ಹಾಗೂ ಸೂಯಾಸ್ತ ವೀಕ್ಷಣೆ ಗೋಪುರದ ಬಳಿ ಜುಲೈ 12ರಂದು ಕುಸಿತ ಕಂಡಿತ್ತು. 

14 ತಿರುವು
ಆಗುಂಬೆಯಲ್ಲಿ ಒಟ್ಟು 14 ತಿರುವುಗಳಿದ್ದು, ಶಿವಮೊಗ್ಗ ಲೋಕೋಪಯೋಗಿ ಇಲಾಖೆಯು 3 ಕಿಮೀ ರಸ್ತೆಯನ್ನು 3.9 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿ ಮಾಡಿತ್ತು. ಬಾಕಿ ಘಾಟಿ ಕೆಲಸವನ್ನು ಉಡುಪಿ ವಿಭಾಗದಿಂದ ಕೈಗೊಳ್ಳಲಾಗಿತ್ತು. ಈ ಕಾಮಗಾರಿಯಲ್ಲಿ ಟ್ರಾಫಿಕ್‌ ಸೇμr, ಕ್ರಾಷ್‌ ಬ್ಯಾಗೇಜ್‌, ಡಾಂಬರೀಕರಣ ಕೆಲಸ ಮಾಡಿ ರಾಷ್ಟ್ರೀಯ ಹೈವೇ ಪ್ರಾಧಿಕಾರಕ್ಕೆ ವಹಿಸಿಕೊಡಲಾಗಿತ್ತು.

ಶಾಶ್ವತ ಕಾಮಗಾರಿ
ಕೈಗೊಳ್ಳಲು ಸೂಚಿಸಲಾಗಿದೆ. ಮರಳು ಚೀಲಗಳನ್ನು ಹಾಕಿ ಒತ್ತಡ ತಡೆಯುವ ಕ್ರಮ ಕೈಗೊಳ್ಳಲಾಗಿದೆ.ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಪೊಲೀಸ್‌ ನಿಯೋಜಿಸಿ ಟ್ರಾಫಿಕ್‌ ಕಂಟ್ರೋಲ್‌ ಮಾಡಲಾಗುತ್ತಿದೆ.
– ಡಾ| ಎಂ.ಲೋಕೇಶ್‌, ಡೀಸಿ

ಆಗುಂಬೆ ಘಾಟಿಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ ನಂತರ ಅಗತ್ಯ ಕ್ರಮ  ಕೈಗೊಳ್ಳಲು ಸರ್ಕಾರದ ಜತೆ ಮಾತನಾಡಲಾಗುವುದು.
– ಅರಗ ಜ್ಞಾನೇಂದ್ರ, ಶಾಸಕ

– ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next