ರಾಣೆಬೆನ್ನೂರು: ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ತಾಲೂಕಿನ ಶ್ರೀ ಅಡವಿ ಆಂಜನೇಯ ಬಡಾವಣೆಯ ಪ್ರಗತಿಪರ ರೈತ ಹಾಗೂ ಪಶುಪಾಲಕ ಶ್ರೀಧರ ಅವರ ಕ್ಷೇತ್ರಕ್ಕೆ ಭೇಟಿ ನೀಡಿ ಪಶುಗಳ ಸಕಾಣಿಕೆ ಮತ್ತು ಹಸಿ ಮೇವು ಬೆಳೆಯುವ ಕುರಿತು ಮಾಹಿತಿ ನೀಡಿದರು.
ಪಶು ವಿಜ್ಞಾನಿ ಡಾ| ಮಹೇಶ ಕಡಗಿ ಮಾತನಾಡಿ, ಬೆಳೆಗಳ ಬೇಸಾಯ ಮತ್ತು ಪಶುಪಾಲನೆ ಇವು ಮಿಶ್ರ ಬೇಸಾಯ ಪದ್ಧತಿಯ ಎರಡು ಪ್ರಮುಖ ಅಂಗಗಳಾಗಿದ್ದು, ಕೃಷಿ ಆದಾಯದ ಮಟ್ಟವನ್ನು ನಿರ್ಧರಿಸುತ್ತವೆ. ಹೈನೋದ್ಯಮದಲ್ಲಿ ಮೇವಿನ ಬೆಳೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೈನುಗಾರಿಕೆಯಲ್ಲಿ ಬರುವ ಒಟ್ಟು ಖರ್ಚಿನಲ್ಲಿ ಶೇ. 70 ರಿಂದ 80 ರಷ್ಟು ಪಶುಗಳಿಗೆ ಪೂರೈಸುವ ಆಹಾರದ್ದಾಗಿರುತ್ತದೆ ಎಂದು ತಿಳಿಸಿದರು.
ಒಟ್ಟು ಮೇವಿನಲ್ಲಿ ಶೇ. 70 ರಿಂದ 75 ಭಾಗ ಉತ್ತಮ ದರ್ಜೆಯ ಏಕದಳ ಹಸಿರು ಮೇವು ಹಾಗೂ ಶೇ. 25 ರಿಂದ 30 ಭಾಗ ಒಳ್ಳೆಯ ದ್ವಿದಳ ಹಸಿರು ಮೇವಾಗಿರಬೇಕು. ಜಾನುವಾರುಗಳಿಗೆ ಸಮತೋಲನ ಆಹಾರ ಒದಗಿಸಿದಂತಾಗುತ್ತದೆ. ಇದರಿಂದ ಪ್ರತಿ ದಿನ 5-6 ಲೀ. ವರೆಗೆ ಹಾಲನ್ನು ದಾಣಿ ಮಿಶ್ರಣವಿಲ್ಲದೆ ಪಡೆಯಬಹುದು ಮತ್ತು ಖರ್ಚು ಕಡಿಮೆಯಾಗುತ್ತದೆ. ಆದ್ದರಿಂದ ಮೇವಿನ ಬೆಳೆಗಳ ಸಾಗುವಳಿ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಅತೀ ಮುಖ್ಯವಾಗಿದೆ ಎಂದು ಹೇಳಿದರು.
ನೀರಾವರಿ ಅನುಕೂಲತೆ ಇಲ್ಲದ್ದಿರೂ ಮಳೆಯಾಶ್ರಿತ ಮೇವಿನ ಬೆಳೆ ಯೋಜನೆ ಹಾಕಿಕೊಂಡು ಒಂದು ಎಕರೆ ಪ್ರದೇಶದಲ್ಲಿ 3-5 ಹೈನು ದನಗಳನ್ನು ಸಾಕಬಹುದು. ಬಹು ವಾರ್ಷಿಕ ಮೇವಿನ ಜೋಳ ಒಂದು ಪೋಷಕಾಂಶಗಳುಳ್ಳ ಹಸಿರು ಮೇವಾಗಿದ್ದು, ಇದು ಮಳೆ ಆಶ್ರಿತ ಹೈನುಗಾರಿಕೆ ರೈತರಿಗೆ ವರದಾನವಾಗಿದೆ. ಈ ಬೆಳೆಯ ಕಾಂಡವು ಸಣ್ಣಗಾಗಿದ್ದು, ಕಟಾವು ಮಾಡಲು ಮತ್ತು ಪಶುಗಳಿಗೆ ಮೇಯಲು ಉತ್ತಮವಾಗಿರುತ್ತದೆ. ಈ ಬೆಳೆಯು ಹೆಚ್ಚು ಹಸಿರು ಎಲೆಗಳನ್ನು ಹೊಂದಿದ್ದು, ತುಂಬಾ ಎತ್ತರವಾಗಿ ಬೆಳೆಯುತ್ತದೆ ಎಂದು ತಿಳಿಸಿದರು.
ವಿಜ್ಞಾನಿ ಹಾಗೂ ಕೇಂದ್ರ ಮುಖ್ಯಸ್ಥ ಡಾ| ಅಶೋಕ ಪಿ. ಮಾತನಾಡಿ, ಅಧಿಕ ಇಳುವರಿ ಮತ್ತು ಸಮತೋಲನ ಪೌಷ್ಟಿಕ ಮೇವನ್ನು ಪಡೆಯಲು ಏಕ ಹಾಗೂ ಬಹು ವಾರ್ಷಿಕ ಮೇವಿನ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚಿನ ಹಾಲಿನ ಉತ್ಪನ್ನ ಪಡೆಯುವುದರ ಜೊತೆಗೆ ದಾಣಿ (ಹಿಂಡಿ) ಖರ್ಚನ್ನೂ ಸಹ ಕಡಿಮೆ ಮಾಡಬಹುದು. ಬಹು ವಾರ್ಷಿಕ ಮೇವಿನ ಬೆಳೆಗಳಲ್ಲಿ ಮುಖ್ಯವಾಗಿ ಬಹುವಾರ್ಷಿಕ ಮೇವಿನ ಜೋಳ ಸಿ.ಒ.ಎಫ್.ಎಸ್.-29 ಮತ್ತು ಸಿ.ಒ.ಎಫ್.ಎಸ್.-31 ತಳಿಗಳು ಮಳೆಯಾಧಾರಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಮೇವಿನ ಇಳುವರಿ ಕೊಡುವ ಬೆಳೆಗಳಿದ್ದು, ಈ ತಳಿಗಳು ಸುಮಾರು 4 ರಿಂದ 5 ವರ್ಷಗಳ ವರೆಗೆ ಉತ್ತಮ ಇಳುವರಿಯನ್ನು ನೀಡುತ್ತವೆ ಎಂದು ಹೇಳಿದರು.
ಒಂದು ಎಕರೆಗೆ ಸುಮಾರು 4 ಕೆ.ಜಿ. ಬೀಜ ಬೇಕಾಗುತ್ತದೆ. ಸಾಮಾನ್ಯ ಫಲವತ್ತಾದ ಭೂಮಿಯಲ್ಲಿ 30 ಸೆಂ.ಮೀ. ಸಾಲುಗಳಲ್ಲಿ ಬಿತ್ತುವುದು. ಬಿತ್ತನೆಯ ಆಳ 2-3 ಸೆಂ.ಮೀ. ಗಿಂತ ಹೆಚ್ಚಾಗಿರಬಾರದು. ಪೋಷಕಾಂಶಗಳ ನಿರ್ವಹಣೆಗಾಗಿ 50 ಕೆ.ಜಿ. ಯೂರಿಯಾ ಮತ್ತು 50 ಕೆ.ಜಿ. ಡಿ.ಎ.ಪಿ.ಮೂಲ ಗೊಬ್ಬರ ಮತ್ತು ಪ್ರತಿ ಕಟಾವಿನ ನಂತರ 50 ಕೆ.ಜಿ. ಯೂರಿಯಾ ಮೇಲು ಗೊಬ್ಬರ ನೀಡಬೇಕಾಗುತ್ತದೆ. ಮಳೆ ಬಾರದಿರುವ ಸಂದರ್ಭದಲ್ಲಿ 1-2 ಬಾರಿ ನೀರು ಹಾಯಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಬಿತ್ತಿದ 60-75 ದಿನಗಳಲ್ಲಿ ಮೊದಲ ಕಟಾವಿಗೆ ಬರುತ್ತದೆ. ತದನಂತರ ಉತ್ತಮ ಮಳೆಯಾದಲ್ಲಿ 45 ದಿನಗಳ ಅಂತರದಲ್ಲಿ ಕಟಾವು ಮಾಡಬಹುದು. ವರ್ಷದಲ್ಲಿ ಮಳೆಯಾಧಾರಿತ ಬೆಳೆಯಾಗಿ 4 ಕಟಾವುಗಳಿಂದ ಎಕರೆಗೆ ಸುಮಾರು 40 ರಿಂದ 60 ಟನ್ ವರೆಗೆ ಹಸಿರು ಮೇವು ಪಡೆಯಬಹುದು ಎಂದು ತಿಳಿಸಿದರು.