ಚನ್ನರಾಯಪಟ್ಟಣ: ತಾಲೂಕಿನ ಬಾಗೂರು ಹೋಬಳಿ ಬಿ. ಹೊನ್ನೇನಹಳ್ಳಿ ಗ್ರಾಮದ ರೈತ ಬೋರೇಗೌಡರ ಸ್ವಾಧೀನದಲ್ಲಿದ್ದ ಕೃಷಿ ಭೂಮಿಗೆ ಪ್ರವೇಶ ಮಾಡ ಬಾರದೆಂದು ಜಿಲ್ಲಾಡಳಿತ ಹೊರಡಿಸಿರುವ ಆದೇಶ ವನ್ನು ಪುನರ್ ಪರಿಶೀಲಿಸಬೇಕು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಗುರವಾರ ತಾಲೂಕು ಕಚೇರಿ ಮುಂದೆ ಧರಣಿ ನಡೆಸಿ ತಹಶೀಲ್ದಾರ್ ಜೆ.ಬಿ.ಮಾರುತಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಹಲವು ವರ್ಷದಿಂದ ಬಿ.ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್ 25, 30 ಹಾಗೂ 31ರಲ್ಲಿರುವ ಕೃಷಿ ಭೂಮಿ ಯನ್ನು ರೈತ ಬೋರೇಗೌಡ ಉಳುಮೆ ಮಾಡಿಕೊಂಡು ತಮ್ಮ ಬದಕು ಕಟ್ಟಿಕೊಂಡಿದ್ದರು. 1980ರಲ್ಲಿ ಉಳುವವನೇ ಭೂಮಿಯ ಒಡೆಯ ಕಾಯ್ದೆಯಂತೆ ಕೃಷಿ ಭೂಮಿ ಮಂಜೂರಾತಿ ಪಡೆದು, ತೆಂಗಿನ ಮರ ಬೆಳೆಸಿದ್ದು ಕೊಳವೆಬಾವಿ ಕೊರೆಸಿದ್ದಾರೆ.
ಕೆಲ ದಿನಗಳಿಂದ ಸಾರ್ವಜನಿಕ ಉದ್ದೇಶಕ್ಕಾಗಿ ಇದೇ ಕೃಷಿ ಭೂಮಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ ಎಂದರು. ಏಕಾ ಏಕಿ ಜಿಲ್ಲಾಡಳಿತ ಈ ರೀತಿ ಕೃಷಿ ಭೂಮಿ ತಮ್ಮ ವಶಕ್ಕೆ ಪಡೆದಿರುವ ಬಗ್ಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ನ್ಯಾಯಾಲಯ ರೈತರಪರ ಅದೇಶ ನೀಡಿತ್ತು. ಅನುಭವನದ ಆಧಾರದ ಮೇಲೆ ಕೃಷಿ ಭೂಮಿ ಮಂಜೂರಾತಿ ಮಾಡಬೇಕೆಂದು ಉಚ್ಚನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಆದರೆ ಗ್ರಾಮದ ಕೆಲವರು ಈ ಜಮೀನು ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.
ನ್ಯಾಯಾಲಯದಲ್ಲಿ ಮೊಕದ್ದಮೆ ಇರುವಾಗ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ರೈತನಿಗೆ ದ್ರೋಹ ಮಾಡುತ್ತಿದೆ. ಜಿಲ್ಲಾಡಳಿತದ ಆದೇಶವನ್ನು ಪುನರ್ ಪರಿಶೀಲಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಧರಣಿ ನಿರತ ರೈತ ಸಂಘದ ಸದಸ್ಯರು ಆಗ್ರಹಿಸಿದರು. ರೈತ ಸಂಘದ ಮುಖಂಡರಾದ ದೊಡ್ಡೇರಿ ಶ್ರೀಕಂಠ, ಶಿವೇಗೌಡ, ಬೋರೇಗೌಡ, ಲಕ್ಷ್ಮೇಗೌಡ ಮೊದಲಾದವರು ಧರಣಿ ನೇತೃತ್ವ ವಹಿಸಿದ್ದರು.