ಪುಂಜಾಲಕಟ್ಟೆ: ಜೀವನದಿ ನೇತ್ರಾವತಿಗೆ ಶಂಭೂರುನಲ್ಲಿ ನಿರ್ಮಿಸ ಲಾದ ಎಎಂಆರ್ ಡ್ಯಾಂನಲ್ಲಿ ನೀರು ನಿಲುಗಡೆಯಿಂದ ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಸರಪಾಡಿ, ಮಠದಬೆಟ್ಟು ಪರಿಸರದಲ್ಲಿ ಕೃಷಿಭೂಮಿಯಲ್ಲಿ ನೀರು ನಿಂತು ಅಪಾರ ನಷ್ಟ ಭೀತಿಯಿದೆ ಎಂದು ರೈತರು ಆರೋಪಿಸಿದ್ದಾರೆ. ಮಠದಬೆಟ್ಟುವಿನ ಹರೀಶ್ ಅವರ ಸಹಿತ ಹಲವಾರು ಮಂದಿ ರೈತರ ಅಡಿಕೆ ತೋಟದಲ್ಲಿ ಕಳೆದ 18 ದಿನಗಳಿಂದ ನೀರು ನಿಂತಿದ್ದು, ಸಸಿಗಳು ಕೊಳೆಯುವ ಹಂತಕ್ಕೆ ತಲುಪಿವೆ. ಹರೀಶ್ ಅವರ ತೋಟದ 800 ವಿವಿಧ ಪ್ರಾಯದ ಅಡಿಕೆ ಸಸಿ, ಮರಗಳು, ಗದ್ದೆ ನೀರಿನಿಂದ ಮುಳುಗಡೆಯಾಗಿವೆ ಎಂದು ಅವರು ದೂರಿದ್ದಾರೆ. ಸರಪಾಡಿ ಪರಿಸರದಲ್ಲೂ ಕೆಲವರ ಕೃಷಿ ಭೂಮಿ ಮುಳುಗಡೆಯಾಗಿದೆ. ತೋಟ ಹಾಗೂ ಮುಳುಗಡೆ ಪ್ರದೇಶದಲ್ಲಿ ತೋಡುಗಳು ನೀರಿನಿಂದ ಆವೃತವಾಗಿ ರುವುದರಿಂದ ತೋಡು ದಾಟಿ ತಮ್ಮ ಗದ್ದೆ, ತೋಟಗಳಿಗೆ ಸಂಪರ್ಕ ಸಾಧಿಸಲು ಅಸಾಧ್ಯವಾಗಿ ಕೃಷಿ ಕಾರ್ಯ ಸ್ಥಗಿತ ಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಕಾರಣವೇನು?
ಮಳೆನೀರಿನಿಂದ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾದರೂ ಈ ಭಾಗದ ಕೃಷಿ ಭೂಮಿಯಲ್ಲಿ ನೀರು ಯಥಾಸ್ಥಿತಿಯಲ್ಲಿ ನಿಂತಿತ್ತು. ಈ ಪರಿಸ್ಥಿತಿ ಉಂಟಾಗಲು ಶಂಭೂರು ಎಎಂಆರ್ ಅಣೆಕಟ್ಟು ಎತ್ತರ ಏರಿಕೆ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಣೆಕಟ್ಟಿನ ಈಗಿರುವ ಎತ್ತರವನ್ನು ಮತ್ತೆ 3 ಅಡಿಯಷ್ಟು ಏರಿಕೆ ಮಾಡಿರುವ ಶಂಕೆ ವ್ಯಕ್ತಪಡಿಸಿರುವ ಸರಪಾಡಿ ಗ್ರಾಮ ಸ್ಥರು, ಇದರ ಪರಿಣಾಮವಾಗಿ ಕೃಷಿ ಭೂಮಿಯಲ್ಲಿ ನೀರು ನಿಲ್ಲಲು ಕಾರಣ ಎಂದು ಆರೋಪಿಸಿದ್ದಾರೆ. ಡ್ಯಾಂನಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ ಅದನ್ನು ಹೊರ ಬಿಡಲಾಗುತ್ತಿದ್ದರೂ ಸರಪಾಡಿ- ಮಠದಬೆಟ್ಟು ಪರಿಸರದಲ್ಲಿ ನದಿ ತೀರದ ಅಡಿಕೆ ತೋಟ, ಗದ್ದೆಯಲ್ಲಿ ನೀರು ಕಡಿಮೆಯಾಗುತ್ತಿಲ್ಲ ಎಂದು ಕೃಷಿಕರು ತಿಳಿಸಿದ್ದಾರೆ.
ಈ ಹಿಂದೆ ಇದೇ ಪರಿಸ್ಥಿತಿ ಉಂಟಾದಾಗ ಮುಳುಗಡೆಯಾದ ಆಯ್ದ ಕೆಲವು ಸಂತ್ರಸ್ತ ರೈತರಿಗೆ ಮಾತ್ರ ಪರಿಹಾರ ನೀಡಲಾಗಿತ್ತು. ಆದರೆ ತಮ್ಮನ್ನು ಕೈಬಿಟ್ಟಿರುವುದಾಗಿ ಹರೀಶ್ ಆರೋಪಿಸಿದ್ದಾರೆ.
ಇಲಾಖೆ ಕ್ರಮ ಕೈಗೊಳ್ಳಲಿ
ಇಂತಹ ಸಮಸ್ಯೆಗಳು ಪುನರಾವರ್ತನೆಗೊಳ್ಳುವುದರಿಂದ ತಾತ್ಕಾಲಿಕ ಪರಿಹಾರಗಳಿಂದ ಪ್ರಯೋಜನವಿಲ್ಲ. ಕೃಷಿಭೂಮಿ ಮುಳುಗಡೆ ಬಗ್ಗೆ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡಿ ಪರಿಹಾರ ದೊರಕಿಸಿಕೊಡುವಲ್ಲಿ ಸಂಬಂಧಿತ ಇಲಾಖೆ ಕ್ರಮ ಕೈಗೊಳ್ಳಬೇಕು.
– ಧನಂಜಯ ಶೆಟ್ಟಿ
ಗ್ರಾ.ಪಂ. ಸದಸ್ಯ, ಸರಪಾಡಿ