Advertisement

ಮತ್ತೆ ಬಂದ ವಿನೋದ್‌ ಆಳ್ವ

11:24 AM Feb 05, 2018 | |

ಕನ್ನಡದ ನಟ ವಿನೋದ್‌ ಆಳ್ವ ಮತ್ತೆ ಬಂದಿದ್ದಾರೆ. ಹೌದು, ಬಹಳ ವರ್ಷಗಳ ಬಳಿಕ ಅವರೀಗ “ಪ್ರೇಮಯುದ್ಧ’ ಎಂಬ ಚಿತ್ರದ ಮೂಲಕ ಪುನಃ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಅಬ್ಬಯ್ಯನಾಯ್ಡು ಅವರು 1986 ರಲ್ಲಿ ವಿನೋದ್‌ ಆಳ್ವ ಅವರನ್ನು ನಾಯಕರನ್ನಾಗಿಸಿ “ತವರು ಮನೆ’ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದರು. ಮೊದಲ ಬಾರಿಗೆ ಹೀರೋ ಆಗಿ ಕಾಣಿಸಿಕೊಂಡ ವಿನೋದ್‌ ಆಳ್ವ ನಟಿಸಿದ ಆ ಚಿತ್ರ ಶತದಿನ ಆಚರಿಸಿತ್ತು.

Advertisement

ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಈವರೆಗೆ ಸುಮಾರು 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹೀರೋ ಆಗಿ, ಸುಮಾರು 60 ಚಿತ್ರಗಳಲ್ಲಿ ಪೋಷಕ ಕಲಾವಿದರಾಗಿ ನಟಿಸಿರುವ ವಿನೋದ್‌ ಆಳ್ವ, “ಪ್ರೇಮಯುದ್ಧ’ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕನ್ನಡದಲ್ಲಿ ನಟಿಸುತ್ತಿದ್ದಾರೆ. ವಿನೋದ್‌ ಆಳ್ವ ಅವರು ಬೆಂಗಳೂರು, ಹೈದರಾಬಾದ್‌, ಚೆನ್ನೈ ಮತ್ತು ಮುಂಬೈನಲ್ಲಿ ಮನೆಗಳನ್ನು ಹೊಂದಿದ್ದಾರೆ.

ಎಲ್ಲಾ ಕಡೆ ಉದ್ಯಮ ನಡೆಸುವ ಮೂಲಕ ಓಡಾಡುತ್ತಿದ್ದಾರೆ. ಪುತ್ತೂರಿನಲ್ಲಿ ಅವರ ಫಾಮ್‌ಹೌಸ್‌ ಕೂಡ ಇದೆ. ಆಗಾಗ ಬೆಂಗಳೂರಿಗೆ ಬರುವ ವಿನೋದ್‌ ಆಳ್ವ, ಈಗ ತಮ್ಮ ಇಬ್ಬರು ಮಕ್ಕಳನ್ನೂ ಸಹ ಚಿತ್ರರಂಗಕ್ಕೆ ಪರಿಚಯಿಸಲು ವೇದಿಕೆ ಅಣಿಗೊಳಿಸುತ್ತಿದ್ದಾರೆ. 19 ಮತ್ತು 18 ವರ್ಷದ ಅಯಾಗ್‌ ಮತ್ತು ಅನಗ್‌ ಎಂಬ ಇಬ್ಬರು ಗಂಡು ಮಕ್ಕಳಿಗೆ ಸಿನಿಮಾ ಮೇಲೆ ಆಸಕ್ತಿ ಇರುವುದರಿಂದ ವಿನೋದ್‌ ಕೂಡ ಮಕ್ಕಳ ಆಸೆಗೆ ಒತ್ತಾಸೆಯಾಗಿ ನಿಂತಿದ್ದಾರೆ.

ಹಾಗಂತ ಇಬ್ಬರು ಮಕ್ಕಳನ್ನು ಸುಮ್ಮನೆ ಚಿತ್ರರಂಗಕ್ಕೆ ತರುತ್ತಿಲ್ಲ. ಅವರಿಗೆ ಪಕ್ಕಾ ತಯಾರಿ ಕೊಡಿಸಿಯೇ ಕಾಲಿಡಿಸುತ್ತಿದ್ದಾರೆ. ಮುಂಬೈನ ರೋಷನ್‌ ತನೇಜ ಅವರ ನಟನಾ ಶಾಲೆಯಲ್ಲಿ ಕಲಿತಿದ್ದಾರೆ. ಸಿನಿಮಾ ಹೀರೋ ಆಗೋಕೆ ಏನೆಲ್ಲಾ ತಯಾರಿ ಇರಬೇಕೋ ಅದೆಲ್ಲವನ್ನೂ ಪಕ್ವಗೊಳಿಸಿಯೇ ವಿನೋದ್‌ ಆಳ್ವ ತಮ್ಮ ಮಕ್ಕಳನ್ನು ಕ್ಯಾಮೆರಾ ಮುಂದೆ ನಿಲ್ಲಿಸಲು ಅಣಿಯಾಗಿದ್ದಾರೆ.

ಮುಂಬೈ ಅಷ್ಟೇ ಅಲ್ಲ, ನ್ಯೂಯಾರ್ಕ್‌ ಆ್ಯಕ್ಟಿಂಗ್‌ ಸ್ಕೂಲ್‌ನಲ್ಲೂ ಮಕ್ಕಳಿಗೆ ತರಬೇತಿ ಕೊಡಿಸಿದ್ದಾರೆ ಆಳ್ವ. ಅಪ್ಪನಂತೆಯೇ ಮಕ್ಕಳೂ ಎತ್ತರದಲ್ಲಿ ಕಮ್ಮಿ ಏನಿಲ್ಲ. ಒಬ್ಬ ಮಗ 6.4 ಇದ್ದರೆ, ಇನ್ನೊಬ್ಬ ಮಗ 6.2 ಹೈಟ್‌ ಇದ್ದಾನೆ. ಇಬ್ಬರು ಮಕ್ಕಳಿಗಿರುವ ಸಿನಿಮಾ ಪ್ರೀತಿ ನೋಡಿ, ಅವರ ಆಸೆಗೆ ಸಾಥ್‌ ಕೊಡುತ್ತಿದ್ದೇನೆ. ಸದ್ಯಕ್ಕೆ ಇನ್ನಷ್ಟು ತಯಾರಿ ಮಾಡಿಕೊಳ್ಳುವಂತೆ ಹೇಳಿದ್ದೇನೆ.

Advertisement

2020 ರಲ್ಲಿ ಇಬ್ಬರೂ ಇಂಡಸ್ಟ್ರಿಗೆ ಬರಲಿದ್ದಾರೆ. ಒಬ್ಬ ಮಾಸ್‌, ಇನ್ನೊಬ್ಬ ಕ್ಲಾಸ್‌. ಹಾಗಾಗಿ ಆ್ಯಕ್ಷನ್‌ ಸಿನಿಮಾ ಒಬ್ಬ ಮಾಡಿದರೆ, ಇನ್ನೊಬ್ಬ ಕ್ಲಾಸ್‌ ಸಿನಿಮಾ ಮಾಡ್ತಾನೆ. ನಾನು ನಿರ್ಮಾಣ ಮಾಡುತ್ತಿಲ್ಲ. ಈಗಾಗಲೇ ಬೇರೆಯವರು ನಿರ್ಮಾಣ ಮಾಡಲು ರೆಡಿಯಾಗಿದ್ದಾರೆ. ಅದು ಬಿಗ್‌ಬಜೆಟ್‌ ಸಿನಿಮಾ ಆಗಲಿದೆ. ಕನ್ನಡ ಹಾಗು ತೆಲುಗು ಎರಡು ಭಾಷೆಯಲ್ಲೂ ಚಿತ್ರ ತಯಾರಾಗಲಿದೆ ಎಂಬುದು ಆಳ್ವ ಅವರ ಮಾತು.

ಹಾಗಾದರೆ, ವಿನೋದ್‌ ಆಳ್ವ ಅವರಿಗೆ ಕನ್ನಡದಿಂದ ಅವಕಾಶ ಬರುತ್ತಿಲ್ಲವೇ? ಈ ಪ್ರಶ್ನೆಗೆ ಉತ್ತರಿಸುವ ಆಳ್ವ, ಹಾಗೇನೂ ಇಲ್ಲ, ಅವಕಾಶ ಬರುತ್ತಿವೆ. ಆದರೆ, ನಾನು ಇಲ್ಲಿದ್ದುಕೊಂಡು ಮಾಡಲು ಸಾಧ್ಯವಾಗುತ್ತಿಲ್ಲ. ನನಗೆ ನನ್ನದೇ ಆದ ಬಿಜಿನೆಸ್‌ ಇದೆ.

ಅಲ್ಲೂ ನೋಡಿಕೊಳ್ಳಬೇಕು. ಹೈದರಾಬಾದ್‌, ಮುಂಬೈ ಅಂತ ಓಡಾಟ ಇರುವುದರಿಂದ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ, ಒಳ್ಳೆಯ ಕಥೆ ಮಿಸ್‌ ಮಾಡಿಕೊಂಡಿಲ್ಲ. ಇತ್ತೀಚೆಗೆ ಒಂದು ಚಿತ್ರದಲ್ಲಿ ನಟಿಸಿದ್ದೇನೆ. ಅದಿನ್ನೂ ಚಿತ್ರೀಕರಣವಾಗುತ್ತಿದೆ. ಒಳ್ಳೆಯ ಚಿತ್ರ ಬಂದರೆ ಖಂಡಿತ ಬಿಡೋದಿಲ್ಲ. ನಾನು ಕನ್ನಡಿಗ, ಕನ್ನಡ ಸಿನಿಮಾ ಬಿಡೋದುಂಟೆ ಎಂದು ಪ್ರಶ್ನಿಸಿ, ನಗು ಬೀರುತ್ತಾರೆ ವಿನೋದ್‌ ಆಳ್ವ.

Advertisement

Udayavani is now on Telegram. Click here to join our channel and stay updated with the latest news.

Next