ಹೊಸದಿಲ್ಲಿ : ಒಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಎಚ್1ಬಿ ವೀಸಾ ನಿರ್ಬಂಧಿಸುವ ಕ್ರಮಕ್ಕೆ ಮುಂದಾಗಿರುವುದು ಭಾರತಕ್ಕೆ ನಡುಕ ಹುಟ್ಟಿಸಿದೆಯಾದರೆ ಇನ್ನೊಂದೆಡೆ ಸಿಂಗಾಪುರ ವೀಸಾ ನಿಮಯಗಳನ್ನು ಬಿಗುಗೊಳಿಸುತ್ತಿದ್ದು, ಕಳೆದ ಕೆಲವು ತಿಂಗಳಿಂದ, ಭಾರತೀಯ ಐಟಿ ವೃತ್ತಿಪರರಿಗೆ ನೀಡುತ್ತಿರುವ ವೀಸಾ ಪ್ರಮಾಣವನ್ನು ಸದ್ದಿಲ್ಲದೆ ಗಮನಾರ್ಹವಾಗಿ ಕಡಿಮೆ ಮಾಡುತ್ತಿದೆ.
“2106ರ ಆರಂಭದಿಂದಲೇ ಸಿಂಗಾಪುರ ವೀಸಾ ಸಮಸ್ಯೆ ಆರಂಭವಾಗಿದೆ. ಐಟಿ ವೃತ್ತಿಪರರಿಗೆ ವೀಸಾಗಳನ್ನು ಔಚಿತ್ಯಕ್ಕೆ ಅನುಗುಣವಾಗಿ ನೀಡಲಾಗುವುದು ಎಂಬ ಸಂದೇಶವನ್ನು ಸಿಂಗಾಪುರ ಬಹುತೇಕ ಎಲ್ಲ ಭಾರತೀಯ ಕಂಪೆನಿಗಳಿಗೆ ಈ ಹಿಂದೆಯೇ ರವಾನಿಸಿತ್ತು. ಇದರರ್ಥ ಸಿಂಗಾಪುರ ಸರಕಾರ ಐಟಿ ಉದ್ಯೋಗಗಳಿಗೆ ಸ್ಥಳೀಯ ಜನರನ್ನೇ ನೇಮಿಸಿಕೊಳ್ಳಲು ಬಯಸಿರುವುದು ಸ್ಪಷ್ಟವಿದೆ’ ಎಂದು ನ್ಯಾಸ್‌ಕಾಂ ಅಧ್ಯಕ್ಷ ಆರ್ ಚಂದ್ರಶೇಖರ್ ಅವರನ್ನು ಉಲ್ಲೇಖೀಸಿ ಎಂದು ಇಂದು ಸೋಮವಾರ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಭಾರತೀಯ ಐಟಿ ವೃತ್ತಿಪರರಿಗೆ ಸಿಂಗಾಪುರ ವೀಸಾ ಅನುಮತಿ ಸಿಗುತ್ತಿರುವುದು ಕಡಿಮೆಯಾಗುತ್ತಿರುವುದನ್ನು ಅನುಲಕ್ಷಿಸಿ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (ಸಿಇಸಿಎ) ಪರಾಮರ್ಶೆಯನ್ನು ಭಾರತ ತಡೆಹಿಡಿದಿದ್ದು ಸಿಂಗಾಪುರದ ವೀಸಾ ನಿಯಂತ್ರಣ ಕ್ರಮವು ವಾಣಿಜ್ಯ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಆರ್ಥಿಕ ಅಗತ್ಯಗಳ ಪರೀಕ್ಷೆ (ಇಎನ್‌ಟಿ) ಮೂಲಕ ಕೆಲವೊಂದು ಆರ್ಥಿಕ ಪೂರ್ವ-ಆವಶ್ಯಕತೆಗಳನ್ನು ಪೂರೈಸಬೇಕೆಂದು ಸಿಂಗಾಪುರದ ವೀಸಾ ಅಧಿಕಾರಿಗಳು ಒತ್ತಾಯಿಸುತ್ತಿರುವುದಾಗಿ ವರದಿ ತಿಳಿಸಿದೆ.
ಒಪ್ಪಿಕೊಂಡ ಸೇವೆಗಳಿಗೆ ಸಂಬಂಧಿಸಿದಂತೆ ಈ ಬಗೆಯ ಪರೀಕ್ಷೆಗಳನ್ನು ನಡೆಸುವ ಅಗತ್ಯವೇ ಇಲ್ಲ ಎಂಬುದನ್ನು ಸಮಗ್ರ ಆರ್ಥಿಕ ಸಹಕಾರ ಒಪ್ಪಂದದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿರುವ ಹೊರತಾಗಿಯೂ ಅಂತಹ ಪರೀಕ್ಷೆಗಳನ್ನು ಸಿಂಗಾಪುರದ ಅಧಿಕಾರಿಗಳು ನಡೆಸುವುದು ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ವರದಿ ಹೇಳಿದೆ.