ನವದೆಹಲಿ: ಇತ್ತೀಚೆಗೆ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭರ್ಜರಿ ಜಯಗಳಿಸಿದ ನಂತರ ಇದೀಗ ಮುಂದಿನ ವರ್ಷ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸುವುದಾಗಿ ಘೋಷಿಸುವ ಮೂಲಕ ಅಲ್ಲಿಯೂ ಅದೃಷ್ಟಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ.
ಇದನ್ನೂ ಓದಿ:ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ ಹಿಜಾಬ್ ಕುರಿತ ಹೈಕೋರ್ಟ್ ತೀರ್ಪು
2023ರಲ್ಲಿ ರಾಜಸ್ಥಾನ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇಲ್ಲಿ ಕಳೆದ ಎರಡು ದಶಕಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆಯುತ್ತಿತ್ತು. ರಾಜಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಮತದಾರರು ಯಾವಾಗಲೂ ಒಂದೋ ಕಾಂಗ್ರೆಸ್ ಪಕ್ಷಕ್ಕೆ ಇಲ್ಲವೇ ಬಿಜೆಪಿಗೆ ಮತ ಚಲಾಯಿಸುತ್ತಿದ್ದಾರೆ. 1977ರಿಂದ 1980ರವರೆಗೆ ರಾಜಸ್ಥಾನದಲ್ಲಿ ಭೈರೋನ್ ಸಿಂಗ್ ಶೇಖಾವತ್ ನೇತೃತ್ವದ ಜನತಾ ಪಕ್ಷ ಎರಡೂವರೆ ವರ್ಷಗಳ ಕಾಲ ಆಡಳಿತ ನಡೆಸಿತ್ತು ಎಂದು ವರದಿ ವಿವರಿಸಿದೆ.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಪರ್ಯಾಯ ಪಕ್ಷಕ್ಕೆ ಆದ್ಯತೆ ನೀಡುವಂತೆ ರಾಜಸ್ಥಾನದಲ್ಲಿಯೂ ಆಮ್ ಆದ್ಮಿ ಪಕ್ಷ ಅಖಾಡಕ್ಕಿಳಿಯಲಿದೆ ಎಂದು ಆಪ್ ನ ದೇವೇಂದ್ರ ಶಾಸ್ತ್ರಿ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಪಂಜಾಬ್ ನಂತೆ ರಾಜಸ್ಥಾನದಲ್ಲಿಯೂ ವಿದ್ಯುತ್ ದರ ದುಬಾರಿಯಾಗಿದೆ ದೆಹಲಿ ಮತ್ತು ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ವಿದ್ಯುತ್ ಗೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದೆ. ರಾಜಸ್ಥಾನದಲ್ಲಿಯೂ ಕೂಡಾ ನಾವು ಸಮಸ್ಯೆ ಪರಿಹರಿಸಲಿದ್ದೇವೆ ಎಂದು ಶಾಸ್ತ್ರಿ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿಯೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತೇವೆ. ರಾಜಸ್ಥಾನದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಪ್ ಸ್ಪರ್ಧಿಸಲಿದೆಯೇ ಎಂಬುದನ್ನು ಶೀಘ್ರದಲ್ಲಿಯೇ ಪಕಕ್ಷ ನಿರ್ಧರಿಸಲಿದೆ. ಈ ಬಗ್ಗೆ ಪಕ್ಷದ ಉಸ್ತುವಾರಿ ಸಂಜಯ್ ಸಿಂಗ್ ರಾಜಸ್ಥಾನಕ್ಕೆ ಭೇಟಿ ನೀಡಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ದೇವೇಂದ್ರ ಶಾಸ್ತ್ರಿ ಹೇಳಿದರು.
2018ರ ಡಿಸೆಂಬರ್ ನಲ್ಲಿ ನಡೆದಿದ್ದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 108 ಸ್ಥಾನಗಳಲ್ಲಿ, ಕಾಂಗ್ರೆಸ್ ಪಕ್ಷ 108 ಸ್ಥಾನಗಳಲ್ಲಿ, ಬಿಜೆಪಿ 71, ಇತರರು 13 ಮಂದಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್ ರಾಜಸ್ಥಾನ ಮುಖ್ಯಮಂತ್ರಿಯಾಗಿದ್ದಾರೆ.