ಹೊಸದಿಲ್ಲಿ : ಉತ್ತರಪ್ರದೇಶದ ಸಹರಣಪುರದಲ್ಲಿ ನಡೆದ ದಲಿತ ವಿರೋಧಿ ಹಿಂಸೆಯ ಬಗ್ಗೆ ಸದನದಲ್ಲಿ ತಾನು ಮಾಡುತ್ತಿದ್ದ ಆಶು ಭಾಷಣವನ್ನು ಮೊಟಕುಗೊಳಿಸುವಂತೆ ಸಭಾಧ್ಯಕ್ಷರು ಸೂಚಿಸಿದ ಕೆಲವೇ ತಾಸುಗಳ ಒಳಗೆ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ತನ್ನ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.
ರಾಜ್ಯಸಭಾ ಅಧ್ಯಕ್ಷರಾಗಿರುವ ಹಮೀದ್ ಅನ್ಸಾರಿ ಅವರನ್ನು ಇಂದು ಮಂಗಳವಾರ ಸಂಜೆ ಭೇಟಿಯಾದ ಮಾಯಾವತಿ ರಾಜ್ಯಸಭಾ ಸದಸ್ಯತ್ವಕ್ಕೆ ತನ್ನ ರಾಜೀನಾಮೆಯನ್ನು ಅವರ ಕೈಗೆ ಒಪ್ಪಿಸಿದರು.
“ಇಂದು ಬೆಳಗ್ಗೆ ನಾನು ಸಹಾರಣಪುರದ ಶಬರೀಪುರದಲ್ಲಿ ದಲಿತರ ಮೇಲೆ ನಡೆದಿದ್ದ ದೌರ್ಜನ್ಯದ ವಿಷಯವನ್ನು ರಾಜ್ಯಸಭೆಯಲ್ಲಿ ಎತ್ತಲು ಬಯಸಿದ್ದೆ. ಆದರೆ ನಾನು ಮಾತನಾಡುವಾಗ ಆಳುವ ಪಕ್ಷದ ಸದಸ್ಯರು, ಸಚಿವರ ಸಹಿತವಾಗಿ, ನಡೆದುಕೊಂಡ ರೀತಿಯಿಂದ ಮತ್ತು ನನ್ನ ಭಾಷಣವನ್ನು ತಡೆದ ರೀತಿಯಿಂದ ನಾನು ಬೇಸುತ್ತು ಹೋದೆ”
”ನಾನು ಹೇಳಬಯಸಿರುವುದನ್ನು ನನಗೆ ಹೇಳಲು ಸಾಧ್ಯವಾಗಿಲ್ಲವೆಂದಾದರೆ ನಾನಿನ್ನು ಅಲ್ಲಿ ಇರಬೇಕಾಗಿಲ್ಲ ಎಂದು ಅನ್ನಿಸಿತು. ಹಾಗಾಗಿ ನಾನು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದೆ. ನಾನು ಈಗಷ್ಟೇ ರಾಜ್ಯ ಸಭೆಯ ಅಧ್ಯಕ್ಷ (ಹಮೀದ್ ಅನ್ಸಾರಿ) ಅವರನ್ನು ಭೇಟಿಯಾಗಿ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ” ಎಂದು ಮಾಯಾವತಿ ಅವರು ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಇದಕ್ಕೆ ಮೊದಲು ಮಾಯಾವತಿ ಅವರು ದಲಿತರ ಪರವಾಗಿ ಮಾತನಾಡಲು ಅವಕಾಶ ಸಿಗದ ಕಾರಣಕ್ಕೆ ತಾನು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಸದನದಲ್ಲೇ ಬೆದರಿಕೆ ಹಾಕಿದ್ದರು.