Advertisement

ಒಂದೂವರೆ ವರ್ಷ ಕಳೆದರೂ ಕಾಮಗಾರಿ ಶುರುವಾಗಿಲ್ಲ

09:06 PM Dec 17, 2019 | Team Udayavani |

ಹುಣಸೂರು: ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಕೆಲವೆಡೆ ಬಂದಿರುವ ಅನುದಾನ ಬಳಕೆಯಾಗಿಲ್ಲ, ಹಲವೆಡೆ ಕಾಮಗಾರಿಯೇ ಆರಂಭಿಸಿಲ್ಲ, ಶೀಘ್ರ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರಗತಿಗೆ ವೇಗ ನೀಡುವುದಾಗಿ ನೂತನ ಶಾಸಕ ಎಚ್‌.ಪಿ.ಮಂಜುನಾಥ್‌ ಭರವಸೆ ನೀಡಿದರು. ತಾಲೂಕಿನ ಆಸ್ಪತ್ರೆ ಕಾವಲ್‌ ಹಾಗೂ ಉಯಿಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮತದಾರರಿಗೆ ಕೃತಜ್ಞತೆ ಅರ್ಪಿಸಿದ ನಂತರ ಕುಡಿನೀರು ಮುದ್ದನಹಳ್ಳಿ ಹಾಗೂ ಉಯಿಗೊಂಡನಹಳ್ಳಿಗಳಲ್ಲಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ, ಸಮಸ್ಯೆ ಆಲಿಸಿ ಅವರು ಮಾತನಾಡಿದರು.

Advertisement

ಮನೆಗಳಿಗೆ ಬೇಡಿಕೆ: ತಾಲೂಕಿನಲ್ಲಿ ಹೆಚ್ಚಾಗಿ ಮನೆಗಳಿಗೆ ಬೇಡಿಕೆ ಕೇಳಿ ಬರುತ್ತಿದೆ. ಇತ್ತೀಚೆಗೆ ಸರ್ಕಾರ‌ ಶಾಸಕರ ನೇತೃತ್ವದಲ್ಲಿ ಫಲಾನುಭವಿಗಳ ಆಯ್ಕೆ ಮಾಡಲಾಗುವುದೆಂದು ಪ್ರಕಟಿಸಿದ್ದರಿಂದಾಗಿ ಬೇಡಿಕೆ ಇಡುತ್ತಿದ್ದಾರೆ. ಮನೆ-ನಿವೇಶನಗಳ ಆಯ್ಕೆ ಆಯಾ ಗ್ರಾಮ ಪಂಚಾಯ್ತಿಗಳಿಗೆ ಅಧಿಕಾರ ನೀಡುವುದು ಒಳ್ಳೆಯದು, ಉಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಹಿಂದಿನ ಸರಕಾರದಲ್ಲಿದ್ದ ನಿಯಮಾವಳಿಯಂತೆ ಶಾಸಕರ ನೇತೃತ್ವದ ಸಮಿತಿಯನ್ನೇ ಮುಂದುವರಿಸಿದಲ್ಲಿ ಅರ್ಹ ಫಲಾನುಭವಿಗಳ ಆಯ್ಕೆಗೆ ನೆರವಾಗಲಿದೆ. ಈ ಬಗ್ಗೆ ಸರಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

ಈ ಭಾಗದಲ್ಲಿ ಹೆಚ್ಚಿನ ವಾಹನ ಸಂಚಾರವಿರುವ ಆಸ್ಪತ್ರೆ ಕಾವಲ್‌, ಕುಡಿನೀರುಮುದ್ದನಹಳ್ಳಿ ಮಾರ್ಗವಾಗಿ ಉಯಿಗೊಂಡನಹಳ್ಳಿ-ಹೊಸವಾರಂಚಿವರೆಗಿನ ರಸ್ತೆ ಡಾಂಬರೀಕರಣಕ್ಕೆ ಬೇಡಿಕೆ ಸಲ್ಲಿಸಿದ್ದು, ಮೊದಲ ಆದ್ಯತೆಯಾಗಿ ಪರಿಗಣಿಸಲಾಗುವುದು ಎಂದರು. ತಾಲೂಕಿನಲ್ಲಿ ಕಳೆದ ಒಂದೂವರೆ ವರ್ಷಗಳ ಹಿಂದಿನ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳೇ ಇನ್ನೂ ಪೂರ್ಣವಾಗಿಲ್ಲ, ಹಲವೆಡೆ ಕಾಮಗಾರಿಯೇ ಆರಂಭವಾಗಿಲ್ಲ, ಕೆಲವಕ್ಕೆ ಅನುದಾನ ಕೊರತೆ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಆಮೆ ವೇಗದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ವೇಗ ನೀಡುವುದಾಗಿ ತಿಳಿಸಿದರು.

ಸನ್ಮಾನ: ನೂತನ ಶಾಸಕರಿಗೆ ಎಲ್ಲಡೆ ಮಂಗಳವಾದ್ಯದೊಂದಿಗೆ ಅಭಿಮಾನಿಗಳು ಮೆರವಣಿಗೆ ನಡೆಸಿದರು. ಮಹಿಳೆಯರು ಆರತಿ ಎತ್ತಿದರೆ, ಪಟಾಕಿ ಸಿಡಿಸಿ, ಹೂ ಮಳೆಗೈದು, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಎಂ.ಬಿ.ಸುರೇಂದ್ರ, ತಾಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮೇಗೌಡ, ಗ್ರಾಪಂ ಅಧ್ಯಕ್ಷ ರವಿ, ಮಾಜಿ ಅಧ್ಯಕ್ಷ ಆರ್‌.ಸ್ವಾಮಿ, ಸದಸ್ಯ ದಿನೇಶ, ದೇವರಾಜ್‌, ಮಹದೇವ್‌, ಕಾಂಗ್ರೆಸ್‌ ಅಧ್ಯಕ್ಷ ನಾರಾಯಣ್‌, ಮಾಜಿ ಅಧ್ಯಕ್ಷ ಬಿಳಿಕೆರೆ ಬಸವರಾಜು, ಮುಖಂಡರಾದ ವಸಂತಕುಮಾರ್‌, ಅಸ್ವಾಳುಕ ಕೆಂಪೇಗೌಡ, ರಾಜು ಶಿವರಾಜ್‌, ವಕೀಲ ಪುಟ್ಟರಾಜು, ದಿಲೀಪ್‌, ಮಹದೇವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಪಿಡಿಒಗೆ ಶಾಸಕರ ತರಾಟೆ: ಉಯಿಗೊಂಡನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ತೇಜೇಂದ್ರನಾಥವರ ಪ್ರಸಾದ್‌ ಬಡವರು ನಿರ್ಮಿಸಿಕೊಂಡಿರುವ ಶೌಚಾಲಯದ ಬಿಲ್‌ ಮಾಡಲು ಲಂಚ ಕೇಳುತ್ತಾರೆ. ಖಾತೆ ಬದಲಾವಣೆ, ನಮೂನೆ 9 ಆ್ಯಂಡ್‌ 11ಕಲಂಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಯಾವುದೇ ಕೆಲಸ ಮಾಡಿಕೊಡಲು ಹಣವಿಲ್ಲದೆ ಕೆಲಸವಾಗುತ್ತಿಲ್ಲವೆಂಬ ಗ್ರಾಮಸ್ಥರ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಗ್ರಾಪಂನಿಂದ ಹಿಡಿದು ಕಂದಾಯ ಇಲಾಖೆ, ನಗರಸಭೆಗಳಲ್ಲಿ ಬಡವರನ್ನು ಸತಾಯಿಸುವುದು, ತೊಂದರೆ ನಿಡುವುದು ಸಹಿಸಲು ಸಾಧ್ಯವಿಲ್ಲ, ಕೆಲಸ ಮಾಡದವರ ವಿರುದ್ಧ ಕಠಿಣ ಕ್ರಮ ಎದುರಿಸಬೇಕಾಗಲಿದೆ. ಪಿಡಿಒ ಕಾರ್ಯವೈಖರಿ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ತಾಪಂ ಇಒ ಗಿರೀಶ್‌ ಅವರಿಗೆ ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next