Advertisement

35 ವರ್ಷಗಳ ಬಳಿಕ ಬೆಳ್ಳೂರು ಬೈಲು ಜನರ ಕನಸು ನನಸು

01:43 PM Mar 07, 2018 | Team Udayavani |

ಬೆಳ್ತಂಗಡಿ : ಸುಮಾರು 35 ವರ್ಷಗಳ ಬಳಿಕ ಬೆಳ್ಳೂರು ಬೈಲು ಜನರ ಬೇಡಿಕೆ ಈಡೇರಿದೆ. ತಿಂಗಳೊಳಗಾಗಿ ಟೆಂಡರ್‌ ಪ್ರಕ್ರಿಯೆ ಮುಗಿಸಿ 4 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ಶಾಸಕ ಕೆ. ವಸಂತ ಬಂಗೇರ ತಿಳಿಸಿದರು. ಅವರು ಕಡಿರುದ್ಯಾವರ, ಇಂದಬೆಟ್ಟು ಗ್ರಾಮದ ಬೆಳ್ಳೂರುಬೈಲಿನ ಎತ್ತಿನಗಂಡಿ ಬಳಿ ನೇತ್ರಾವತಿ ನದಿಗೆ 4 ಕೋ. ರೂ. ವೆಚ್ಚದ ಸೇತುವೆ ಕಾಮ ಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಹಲವು ವರ್ಷಗಳಿಂದ ಸೇತುವೆ ನಿರ್ಮಾಣಕ್ಕೆ ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಇದೀಗ ಜನರ ಬಹುದಿನಗಳ ಬೇಡಿಕೆ ಈಡೇರಿದೆ ಎಂದರು.

Advertisement

ಡಯಾಲಿಸಿಸ್‌ ಯಂತ್ರ
ತಾ| ಆಸ್ಪತ್ರೆಯಲ್ಲಿ ಈಗಾಗಲೇ 3 ಡಯಾಲಿಸಿಸ್‌ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ. ಸದ್ಯದಲ್ಲೇ ಇನ್ನೊಂದು ಆರಂಭವಾಗಲಿದ್ದು, ವಾರಕ್ಕೆ 50 ಜನರಿಗೆ ಪ್ರಯೋಜನವಾಗಲಿದೆ ಎಂದರು.

ಐದು ಜನರಿದ್ದ ಕಾಲೇಜು
ತಾಲೂಕಿನ ಕಾಲೇಜು ಆರಂಭವಾಗುವಾಗ ಕೇವಲ 5 ವಿದ್ಯಾರ್ಥಿಗಳಿದ್ದರು. ತಾಲೂಕಿಗಾಗಿ ಮಂಜೂರು ಮಾಡಿಸಲಾಗಿತ್ತು. ಅಂದಿನ ಶಿಕ್ಷಣ ಮಂತ್ರಿ ಕಾಲೇಜು ಉದ್ಘಾಟನೆಗೆ ಒಪ್ಪಿರಲಿಲ್ಲ. ಕೊನೆಗೂ ಮನವೊಲಿಸಿ ಉದ್ಘಾಟನೆ ಮಾಡಿಸಲಾಗಿತ್ತು. ಇಂದು ತಾಲೂಕಿನ ಸುಮಾರು 900 ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ತಿಂಗಳೊಳಗೆ ಶಂಕುಸ್ಥಾಪನೆ
ಸುಮಾರು 40 ಕೋ. ರೂ. ಬಿಡುಗಡೆಯಾಗಿದ್ದು, ಎಲ್ಲ ಕಾಮಗಾರಿಗಳಿಗೂ ಮಾ. 30ರೊಳಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಬಳಿಕ ಕಾಮಗಾರಿ ಮುಂದುವರಿಯುತ್ತದೆ. ನೀತಿ ಸಂಹಿತೆ ಜಾರಿಯಾದಲ್ಲಿ ಶಂಕುಸ್ಥಾಪನೆ ನೆರವೇರಿಸಲು ಸಾಧ್ಯವಾಗುವುದಿಲ್ಲ ಎಂದರು.

ಉತ್ತಮ ಕೆಲಸದಿಂದ ಅಭಿವೃದ್ಧಿ
ಜನತೆ ಅಭಿವೃದ್ಧಿ ಕಾರ್ಯಗಳನ್ನು ಗಮನಿಸುತ್ತಾರೆ. ಉತ್ತಮ ಕೆಲಸ ಮಾಡಿದಲ್ಲಿ ಆಶೀರ್ವಚಿಸುತ್ತಾರೆ. ಸ್ಥಳೀಯ ಪ್ರದೇಶಗಳಾದ ಕೋಲೋಡಿ, ಬಾಂಜಾರು ಮತ್ತಿತರ ಕಡೆ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. ಕಳೆದ 4 ವರ್ಷ 10 ತಿಂಗಳ ಅವಧಿಯಲ್ಲಿ 1 ಸಾವಿರ ಕೋಟಿ ರೂ.ಗೂ ಅಧಿಕ ವೆಚ್ಚದ ಕಾಮಗಾರಿ ನಡೆಸಲಾಗಿದೆ ಎಂದು ತಿಳಿಸಿದರು.

Advertisement

ಸುದಿನ ವರದಿ ಫ‌ಲಶ್ರುತಿ
ಸೇತುವೆ ಬಗ್ಗೆ ಸುದಿನದಲ್ಲಿ ಹಲವು ಬಾರಿ ವರದಿ ಪ್ರಕಟಿಸಿ ಸೇತುವೆ ಮಂಜೂರಾತಿಗೆ ಒತ್ತಾಯಿಸಿ, ಅಧಿಕಾರಿಗಳು ಜನಪ್ರತಿನಿಧಿಗಳ ಗಮನ ಸೆಳೆಯಲಾಗಿತ್ತು.

ಬಂಗಾಡಿ ಸೊಸೈಟಿ ಅಧ್ಯಕ್ಷ ಲಕ್ಷ್ಮಣ ಗೌಡ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಚಾಯತ್‌ ಸದಸ್ಯೆ ಸೌಮ್ಯಲತಾ, ಪಿಡಬ್ಲ್ಯುಡಿ ಎಂಜಿನಿಯರ್‌ ಶಿವಪ್ರಕಾಶ್‌ ಅಜಿಲ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಸುಂದರ ಗೌಡ, ಮಂಜುನಾಥ್‌ ಕಾಮತ್‌, ಗ್ರಾಪಂ ಅಧ್ಯಕ್ಷೆ ವನಿತಾ ಸಾಲ್ಯಾನ್‌, ಉಪಾಧ್ಯಕ್ಷ ಸಂತೋಷ್‌ ಗೌಡ, ಇಬ್ರಾಹಿಂ, ಗ್ರಾಪಂ ಸದಸ್ಯರಾದ ನೋಣಯ್ಯ ಗೌಡ, ಯಶೋದಾ, ಶೋಭಾ, ರೇಣುಕಾ ಮೊದಲಾದವರಿದ್ದರು.

ಮುಂಡಾಜೆ ಯಂಗ್‌ ಚಾಲೆಂಜರ್ ನ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ನಾಮ ದೇವರಾವ್‌ ನಿರೂಪಿಸಿದರು. ಗ್ರಾಮ ಪಂಚಾಯತ್‌ ಸದಸ್ಯ ನೇಮಿರಾಜ್‌ ಗೌಡ ಸ್ವಾಗತಿಸಿದರು. 

ಅಪಪ್ರಚಾರಕ್ಕೆ ಕಿಡಿ
ನಾನು ಕೇವಲ ಶಂಕುಸ್ಥಾಪನೆ ಮಾಡುತ್ತೇನೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ರಸ್ತೆ, ಶಾಲೆ, ವಿದ್ಯುತ್‌, ನೀರು ಮತ್ತಿತರ ಸೌಲಭ್ಯಗಳನ್ನು ಕುಗ್ರಾಮಗಳಿಗೂ ತಲುಪಿಸಲಾಗಿದೆ. ಅಪಪ್ರಚಾರ ನಡೆಸುವವರು ಅಧಿಕಾರದಲ್ಲಿದ್ದಾಗ ತಾಲೂಕಿನಲ್ಲಿ ಎಷ್ಟು ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಶಾಸಕ ಕೆ. ವಸಂತ ಬಂಗೇರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next