ವಿಜಯಪುರ: ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಸಂಜೆ ಕೊಳವೆ ಬಾವಿಗೆ ಬಿದ್ದಿದ್ದ ಮಗು ಸಾತ್ವಿಕನನ್ನು ಸತತ 21 ಗಂಟೆ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ಹೊರತೆಗೆಯುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ.
ಗುರುವಾರ ಬೆಳಿಗ್ಗೆ ಮಗು ಕೊಳವೆ ಬಾವಿಗೆ ಬಿದ್ದ ಸ್ಥಳಕ್ಕೆ ತಲುಪಿದ್ದ ರಕ್ಷಣಾ ಕಾರ್ಯಾಚರಣೆ ತಂಡ ಮಧ್ಯದಲ್ಲಿ ಎದುರಾದ ಕಲ್ಲುಗಳ ತೊಡಕುಗಳ ಸಮಸ್ಯೆ, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ.
ಗುರುವಾರ ಮಧ್ಯಾಹ್ನ 2-15 ರ ಸುಮಾರಿಗೆ 14 ತಿಂಗಳ ಮಗು ಸಾತ್ವಿಕನನ್ನು ಸುರಕ್ಷಿತವಾಗಿ ಹೊರ ತೆಗೆಯುವಲ್ಲಿ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಅಗ್ನಿಶಾಮಕ ಸೇವಾ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಯಶಸ್ವಿಯಾಗಿದೆ.
ಮಗುವನ್ನು ಕೊಳವೆ ಬಾವಿಯಿಂದ ಸುರಕ್ಷಿತವಾಗಿ ಹೊರ ತೆಗೆಯುತ್ತಲೇ ಸ್ಥಳದಲ್ಲಿ ಸನ್ನದ್ಧ ಸ್ಥಿತಿಯಲ್ಲಿದ್ದ ಆರೋಗ್ಯ ಸೇವಾ ಸಿಬ್ಬಂದಿ ಆಂಬ್ಯುಲೆನ್ಸ್ ಮೂಲಕ ಇಂಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ಯೋಚಿಸಲಾಗಿದೆ.