ಬೀಜಿಂಗ್: ಚೀನದಲ್ಲಿ ಜನ ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಬಳಸುವ ಒಂದು ಔಷಧಕ್ಕಾಗಿ ಆಫ್ರಿಕಾದ ಕತ್ತೆಗಳ ಮಾರಣಹೋಮವಾಗುತ್ತಿದೆ!
ಹೀಗೆಂದು ಇಂಗ್ಲೆಂಡ್ ಮೂಲದ ಡಾಂಕೀ ಸ್ಯಾಂಕುcಯರಿ ಎಂಬ ಸಾಮಾಜಿಕ ದತ್ತಿ ಸಂಸ್ಥೆಯ ಅಧಿಕಾರಿ ಸೈಮನ್ ಪೋಪ್ ಮಾಹಿತಿ ನೀಡಿದ್ದಾರೆ.
ಇದಕ್ಕೆಲ್ಲ ಆಧಾರ ಒದಗಿಸಿದ್ದು ಚೀನದ ಟೀವಿ ಕಾರ್ಯಕ್ರಮ “ಎಂಪ್ರಸ್ಸೆಸ್ ಆಫ್ ಪ್ಯಾಲೇಸ್’. ಇದು 2011ರಲ್ಲಿ ಚೈನೀಸ್ ಟೀವಿಯಲ್ಲಿ ಮೊದಲ ಬಾರಿ ಪ್ರಸಾರವಾಗಿತ್ತು!
ಈ ಶೋ ನಡೆಯುವ ಹೊತ್ತಿನಲ್ಲಿ ಕೆಲವು ಸ್ತ್ರೀಯರು, ಈಗ ಇಜಿಯಾವೊ ತೆಗೆದುಕೊಳ್ಳೋಣ ಎನ್ನುತ್ತಾರೆ. ಇಜಿಯಾವೊ ಒಂದು ಔಷಧ. ಇದನ್ನು ಸೌಂದರ್ಯ ಸಾಧನವಾಗಿ ಬಳಸಲ್ಪಡುತ್ತದೆ. ಕೆಲವೊಮ್ಮೆ ಟಾನಿಕ್ ರೂಪದಲ್ಲಿ ತೆಗೆದುಕೊಳ್ಳುತ್ತಾರೆ. ಇದು ಗೊತ್ತಾಗಿದ್ದೇ ತಡ ಏಕಾಏಕಿ ಇಡೀ ಚೀನದಲ್ಲಿ ಇಜಿಯಾವೊಗೆ ವಿಪರೀತ ಬೇಡಿಕೆ ಹೆಚ್ಚಾಯಿತು. ಇದನ್ನು ತಯಾರಿಸುವುದು ಕತ್ತೆ ಚರ್ಮದ ಮೂಲಕ.
ಒಂದು ವರ್ಷಕ್ಕೆ 50 ಲಕ್ಷ ಕತ್ತೆಗಳು ಇಜಿಯಾವೊ ತಯಾರಿಸುವುದಕ್ಕೆ ಬೇಕಾಗುತ್ತವೆ. ಚೀನಾದಲ್ಲೇನೋ ಹಾಗೂ ಹೀಗೂ 20 ಲಕ್ಷ ಕತ್ತೆಗಳನ್ನು ಹೊಂದಿಸಬಹುದು. ಬಾಕಿ 30 ಲಕ್ಷ ಕತ್ತೆಗಳಿಗಾಗಿ ಆಫ್ರಿಕಾ ದೇಶಗಳ ಮೇಲೆ ಕಣ್ಣು ಹಾಕಲಾಯಿತು. ಕೊಟ್ಟರೆ ಸರಿ, ಇಲ್ಲವಾದರೆ ಕದ್ದಾದರೂ ಕತ್ತೆಗಳನ್ನು ಸಾಗಿಸುವ ಕೆಲಸ ಶುರುವಾಗಿದೆ. ಇದರಿಂದ ಆಫ್ರಿಕಾದಲ್ಲಿ ರಾತ್ರೋರಾತ್ರಿ ಕತ್ತೆಗಳು ನಾಪತ್ತೆಯಾಗಿ ಅನಾಥಶವಗಳಾಗಿ ಬಿದ್ದಿರುವ ಘೋರದೃಶ್ಯಗಳು ಕಾಣಿಸುತ್ತಿವೆ. ಈ ಭಯಾನಕ ಎಲ್ಲೆಡೆ ಸುದ್ದಿಯಾಗಿವೆ.