Advertisement

ಸಮಾನತೆ ತತ್ವ ಸಾರಲು ಮಾತಾಜಿ ಸಲಹೆ

11:30 AM Jul 26, 2017 | Girisha |

ಬಸವನಬಾಗೇವಾಡಿ: 12ನೇ ಶತಮಾನದಲ್ಲಿ ಬಸವಣ್ಣ ಸೇರಿದಂತೆ ಇತರ ಶರಣರು ಸಮಾಜದಲ್ಲಿ ಸಮಾನತೆ ತರಲು ಯತ್ನಿಸಿದರು. ಅಂತಹ ಮಹಾತ್ಮರ ವಿಚಾರಗಳನ್ನು ತಿಳಿಸಿಕೊಂಡು ಇಂದು ಸಮಾಜದಲ್ಲಿ ಸಮಾನತೆ ತತ್ವ ಸಾರಬೇಕಿದೆ ಎಂದು ಅತ್ತೀವೇರಿ ಬಸವಧಾಮ ಬಸವೇಶ್ವರ ಮಾತಾಜಿ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಂಜೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಹಾಗೂ ರಾಷ್ಟ್ರೀಯ ಬಸವಸೈನ್ಯದ ಸಹಯೋಗದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿರುವ ಬಸವತತ್ವ ದರ್ಶನ ಕುರಿತು ಪ್ರವಚನ ಕಾರ್ಯಕ್ರಮದ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು. ಲಿಂಗಪೂಜೆ, ಕಾಯಕ, ದಾಸೋಹದ ಮಹತ್ವ ತಿಳಿಸಿಕೊಟ್ಟ ಶರಣರು ಸರಳ ಜೀವನ ಶೈಲಿಯೊಂದಿಗೆ ಸಾಮರಸ್ಯದಿಂದ ಬದುಕುವುದು ಹೇಗೆ ಎಂಬುವುದನ್ನು ತಿಳಿಸಿಕೊಟ್ಟದ್ದಾರೆ. ಇಂದು ಜನರು ಸ್ವಾರ್ಥ ಜೀವನಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದಾರೆ ವಿನಃ ಸಾಮರಸ್ಯದಿಂದ ಬದುಕಬೇಕು. ಕಷ್ಟದಲ್ಲಿರುವವರ
ನೋವಿಗೆ ಸ್ಪಂದಿಸಬೇಕೆಂಬ ಗುಣಗಳು ಕಡಿಮೆಯಾಗುತ್ತಿರುವುದು ವಿಷಾದನೀಯ. ಜಂಜಾಟದ ಬದುಕಿನಲ್ಲಿ ಒಂದಷ್ಟು ಬಿಡುವು ಮಾಡಿಕೊಂಡು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಶರಣರ ಸತ್ಸಂಗ ಮಾಡಿದಾಗ ಮನುಷ್ಯ ಜೀವನ ಹಸನಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್‌ ಬ್ಲಾಕ್‌ ಘಟಕದ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಶ್ರಾವಣ ಮಾಸದಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ದೇವರ ನಾಮಸ್ಮರಣೆಯಲ್ಲಿ ತೊಡಗುತ್ತಾರೆ. ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಶರಣರ ವಿಚಾರಗಳನ್ನು ತಿಳಿದುಕೊಳ್ಳಬೇಕು. ಅವುಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು. ಶ್ರಾವಣ ಮಾಸದ 4ನೇ ಸೋಮವಾರ ಅ. 14ರಂದು ಆರಂಭವಾಗಲಿರುವ ಬಸವೇಶ್ವರ ಜಾತ್ರೆಗೆ ಭರದ ಸಿದ್ಧತೆ ನಡೆಯುತ್ತಿದೆ. ಜಾತ್ರಾ ಉತ್ಸವ ಸಮಿತಿ ಸದಸ್ಯರು ಸೇರಿದಂತೆ ವಿವಿಧ ಸಂಘಟನೆ ಕಾರ್ಯಕರ್ತರು ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ರೀತಿಯ ಅನಾನುಕೂಲ
ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯ, ಶಿವಾನಂದ ಈರಕಾರ ಮುತ್ಯಾ ನೇತೃತ್ವ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಸಹಕಾರಿ ಮಹಾಮಂಡಳಿ ನಿರ್ದೇಶಕ ಶಿವನಗೌಡ ಬಿರಾದಾರ, ಬಿಜೆಪಿ ಬ್ಲಾಕ್‌ ಘಟಕದ ಅಧ್ಯಕ್ಷ ಬಿ.ಕೆ. ಕಲ್ಲೂರ, ಪುರಸಭೆ ಅಧ್ಯಕ್ಷ ಬಸವರಾಜ ತುಂಬಗಿ, ಎಲ್‌.ಎನ್‌. ಅಗರವಾಲ, ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಜಾತ್ರಾ ಉತ್ಸವ
ಸಮಿತಿ ಅಧ್ಯಕ್ಷ ರವಿ ಹಂಜಗಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿ ತಹಶೀಲ್ದಾರ್‌ ಆರ್‌.ಎಸ್‌. ಹಿರೇಮಠ, ಬಸವರಾಜ ಗೊಳಸಂಗಿ, ಬಸವರಾಜ ಹಾರಿವಾಳ, ಯಮನಪ್ಪ ನಾಯೊಡ, ಪಂಚಾಕ್ಷರಿ ಕಾಳಹಸ್ತೇಶ್ವರಮಠ ವೇದಿಕೆಯಲ್ಲಿದ್ದರು. ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಸ್ವಾಗತಿಸಿದರು. ರವಿ ರಾಠೊಡ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next