ದಾವಣಗೆರೆ: ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಂತದಲ್ಲೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಗೆ ಸರ್ಕಾರ ಎಲ್ಲ ರೀತಿಯ ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಂತದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸುವ ಸಂಬಂಧಿಸಿದಂತೆ ಮದನಗೋಪಾಲ್ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆ. ಟಾಸ್ಕ್ ಫೋರ್ಸ್‌ನಲ್ಲಿ ಶಿಕ್ಷಣ ತಜ್ಞರು, ಎರಡು ಮೂರು ಸ್ವಯಂ ಸೇವಾ ಸಂಸ್ಥೆಗಳು ಇರಲಿವೆ. ಪಠ್ಯ ಕ್ರಮ, ಶಿಕ್ಷಕರಿಗೆ ತರಬೇತಿ ಇತರೆ ವಿಷಯಗಳ ಬಗ್ಗೆ ಸಮಿತಿ ಚರ್ಚಿಸಲಿದೆ. ಕೇಂದ್ರ ಸರ್ಕಾರ ಸಹ ಪ್ರಾಥಮಿಕ ಹಂತದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಗೆ ಒಲವು ಹೊಂದಿದೆ. ಅದರಂತೆಯೇ ರಾಜ್ಯದಲ್ಲೂ ಪ್ರಾಥಮಿಕ ಹಂತದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ 48 ಸಾವಿರ ಶಾಲೆಗಳಿವೆ. ಒಂದು ಶಾಲೆಯ ಮೂವತ್ತೊಂದು ಮಕ್ಕಳಲ್ಲಿ ಕೊರೊನಾದ ಪ್ರಾಥಮಿಕ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಆ ಶಾಲೆಯನ್ನು ಮೂರು ದಿನ ಮುಚ್ಚಲಾಗಿದೆ. ಸ್ಯಾನಿಟೈಸ್ ಇತರೆ ಅಗತ್ಯ ಮುಂಜಾಗ್ರತಾ ಕ್ರಮಗಳ ನಂತರ ಶಾಲೆಯನ್ನು ಪುನರಾರಂಭ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಫಲ್ಗುಣಿ ನದಿ, ಮರವೂರು ಜಲಾಶಯದ ನೀರಿನ ಗುಣಮಟ್ಟ ಪರೀಕ್ಷೆಯನ್ನು ಐಐಎಸ್ಸಿಗೆ ವಹಿಸಿದ ಹೈಕೋರ್ಟ್
ಕೊರೊನಾದಿಂದ ಶಿಕ್ಷಣ ಕ್ಷೇತ್ರ ಅನುಭವಿಸಿದಷ್ಟು ತೊಂದರೆ ಇನ್ನು ಯಾವುದೇ ಕ್ಷೇತ್ರ ಅನುಭವಿಸಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಲೆ ಪ್ರಾರಂಭಿಸಲಾಗಿದೆ. ಸದ್ಯಕ್ಕೆ ಪಠ್ಯಕ್ರಮ ಕಡಿತದ ಬಗ್ಗೆ ಚಿಂತನೆ ನಡೆಸಿಲ್ಲ. ಡಿಸೆಂಬರ್ ನಂತರ ಪರೀಕ್ಷೆ ದೃಷ್ಟಿಯಿಂದ ಪಠ್ಯ ಕ್ರಮ ಕಡಿತಗೊಳಿಸುವ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ಹಾನಗಲ್ ಮತ್ತು ಸಿಂದಗಿ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.