Advertisement

ನಾಲ್ವರು ಸಚಿವರಿಗೆ ಹೆಚ್ಚುವರಿ ಜವಾಬ್ದಾರಿ

10:12 AM Apr 16, 2020 | mahesh |

ಬೆಂಗಳೂರು: ಕೋವಿಡ್ – 19 ಹಿನ್ನೆಲೆಯಲ್ಲಿ ರಾಜ್ಯದಲ್ಲಿ 2ನೇ ಹಂತದ ಲಾಕ್‌ ಡೌನ್‌ ಜಾರಿಯಾಗಿರುವುದರಿಂದ ಮೂಲ ಸೌಕರ್ಯ, ಕಾರ್ಮಿಕರ ಸಮಸ್ಯೆ, ಆಹಾರ ವಿತರಣೆ, ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲು ನಾಲ್ವರು ಹಿರಿಯ ಸಚಿವರಿಗೆ ಸಿಎಂ ಜವಾಬ್ದಾರಿ ವಹಿಸಿದ್ದಾರೆ. ಬುಧವಾರ ಹಿರಿಯ ಸಚಿವರೊಂದಿಗೆ ಸಭೆ ನಡೆಸಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ್‌, ಗೃಹಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌. ಅಶೋಕ್‌ ಮತ್ತು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರಿಗೆ ಕೋವಿಡ್ – 19 ನಿಯಂತ್ರಣ ಕುರಿತು ವಿಶೇಷ ಜವಾಬ್ದಾರಿ ವಹಿಸಿದ್ದಾರೆ. ಮುಂಬೈನಲ್ಲಿ ನಡೆಯುತ್ತಿರುವ ಕಾರ್ಮಿಕರ ವಿದ್ಯಮಾನ ರಾಜ್ಯದಲ್ಲಿ ಆಗದಂತೆ ಮುನ್ನೆಚ್ಚರಿಕೆ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

ವಲಸೆ ಕಾರ್ಮಿಕರ ಸಮಸ್ಯೆಗಳು ಅವರ ಕಷ್ಟಗಳಿಗೆ ಸಂಬಂಧಿಸಿದಂತೆ ನೋಡಿಕೊಳ್ಳಲು ಸಚಿವ ಸುರೇಶ್‌ ಕುಮಾರ್‌ಗೆ ಜವಾಬ್ದಾರಿ ವಹಿಸಲಾಗಿದೆ. ಕೋವಿಡ್ –  19 ನಿಯಂತ್ರಣಕ್ಕೆ ಬರುವವರೆಗೂ ಕಾರ್ಮಿಕರು ವಲಸೆಗೆ ಮುಂದಾಗದ ರೀತಿ ನೋಡಿಕೊಳ್ಳುವ ಹೊಣೆಗಾರಿಕೆ ಸುರೇಶ ಕುಮಾರ್‌ಗೆ ವಹಿಸಿದ್ದಾರೆ. ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಕಾನೂನು, ಸುವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳುವುದು, ಕೋವಿಡ್ – 19 ವಿಚಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಎಲ್ಲ ಸಮಾಜಗಳ ನಾಯಕರೊಂದಿಗೆ ಸಭೆ ನಡೆಸಿ ಶಾಂತಿ ಕಾಯ್ದುಕೊಂಡು ಹೋಗುವ ಜವಾಬ್ದಾರಿ ನೀಡಿದ್ದಾರೆ. ಡಿಸಿಎಂ ಡಾ.ಅಶ್ವತ್ಥನಾರಾಯಣ್‌ ಗೆ ಕೃಷಿ ವಲಯದ ಜವಾಬ್ದಾರಿ ಮತ್ತು ಅಗತ್ಯ ವಸ್ತುಗಳ ಸಪ್ಲೈ ಚೈನ್‌ ನಿರ್ವಹಣೆ ಹಂಚಿಕೆ ಮಾಡಿದ್ದಾರೆ. ಸಚಿವ ಅಶೋಕ್‌ ಅವರಿಗೆ ಬೆಂಗಳೂರು ನಗರದ ಉಸ್ತುವಾರಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಪಡಿತರ ವಿತರಣೆ ನಿರ್ವಹಣೆ ಮತ್ತು ಕೋವಿಡ್ – 19 ಸಂಬಂಧಿತ ಜವಾಬ್ದಾರಿ ವಹಿಸಿದ್ದಾರೆ.

ನಾಲ್ವರು ಸಚಿವರು ಆಯಾಯ ಇಲಾಖೆಗಳ ಜೊತೆಗಿನ ಸಮನ್ವಯದೊಂದಿಗೆ ರಾಜ್ಯ ವ್ಯಾಪಿ ಯಾವುದೇ ಸಮಸ್ಯೆಯಾಗದಂತೆ ಜವಾಬ್ದಾರಿ ನಿರ್ವಹಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇವರ ಹೊರತಾಗಿ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಅವರ ಇಲಾಖೆಗಳಿಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next