Advertisement

ಬೆಂಗಳೂರಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ

12:48 AM Mar 09, 2020 | Lakshmi GovindaRaj |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಭಾಗದ ಜನರ ಅನುಕೂಲಕ್ಕಾಗಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ರಾಜಧಾನಿಗೆ ಬಂದು ಇಲ್ಲೇ ಬದುಕು ಕಟ್ಟಿಕೊಂಡಿರುವ ಆ ಭಾಗದ ಜನರ ಶ್ರೇಯೋಭಿವೃದ್ಧಿ ಹಾಗೂ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿರುವ ವಿವಿಧ 38ಕ್ಕೂ ಹೆಚ್ಚು ಸಂಘಟನೆಗಳನ್ನು ಒಗ್ಗೂಡಿಸಿ ಹುಟ್ಟು ಹಾಕಲಾಗಿರುವ “ಉತ್ತರ ಕರ್ನಾಟಕ ಸಂಘ-ಸಂಸ್ಥೆಗಳ ಮಹಾ ಸಂಸ್ಥೆ’ಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಹಾಗೂ ಶಿಕ್ಷಣ, ಉದ್ಯೋಗ ಇನ್ನಿತರೆ ಕಾರಣ ಗಳಿಗೆ ಇಲ್ಲಿಗೆ ಬಂದು ಹೋಗುವ ಜನರಿಗೆ ಊಟ-ವಸತಿ ಸೇರಿದಂತೆ ಇತರ ಸೌಲಭ್ಯಗಳನ್ನು ಕಲ್ಪಿಸುವ ಸುಸಜ್ಜಿತ ಸಮುದಾಯ ಭವನ ಬೆಂಗಳೂರಿನಲ್ಲಿ ಆಗಬೇಕು ಎಂದು ಮಹಾಸಂಸ್ಥೆಯವರು ಬೇಡಿಕೆ ಇಟ್ಟಿದ್ದಾರೆ.

ಈ ವಿಚಾರವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಗಮನಕ್ಕೆ ತಂದು ಸೂಕ್ತ ಜಾಗ ಹಾಗೂ ಹಣ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು. ಕೆಲವೇ ತಿಂಗಳಲ್ಲಿ ಇದಕ್ಕೆ ಅನುಮೋದನೆ ಪಡೆದುಕೊಂಡು ಆದಷ್ಟು ಬೇಗ ಈ ಕನಸನ್ನು ನನಸು ಮಾಡಲಾಗುವುದು.

ಆಗ ಖುದ್ದು ಯಡಿಯೂರಪ್ಪ ನವರು ಕರೆದು ದೊಡ್ಡ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳೋಣ ಎಂದು ಭರವಸೆ ನೀಡಿದ ಬೊಮ್ಮಾಯಿ, ಸಮುದಾಯ ಭವನವಷ್ಟೇ ಅಲ್ಲ, ಉತ್ತರ ಕರ್ನಾಟಕ ಭಾಗದ ಜನರಿಗಾಗಿ ಬೆಂಗಳೂರಿನಲ್ಲಿ ದೊಡ್ಡ ಶಿಕ್ಷಣ ಸಂಸ್ಥೆ ಹುಟ್ಟು ಹಾಕುವ ಬಗ್ಗೆಯೂ ಆಲೋಚಿಸಬೇಕು ಎಂದು ಸಂಘಟಕರಿಗೆ ಸಲಹೆ ನೀಡಿದರು.

Advertisement

ಪ್ರತ್ಯೇಕ ನಿಗಮ ಸ್ಥಾಪಿಸಿ: ಇದಕ್ಕೂ ಮೊದಲು ಮಾತನಾಡಿದ ಕೊಡಲಸಂಗಮದ ಬಸವ ಜಯಮೃಂತ್ಯುಜಯ ಸ್ವಾಮೀಜಿ, ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಭಾಗದ ಜನರ ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ‘ಉತ್ತರ ಕರ್ನಾಟಕ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕು. ಕೃಷ್ಣಾ ಮೇಲ್ದಂಡೆ-3 ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಿ 1 ಲಕ್ಷ ಕೋಟಿ ರೂ. ಹಣ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಸಿಎಂ ಬಾರದ್ದ‌ಕ್ಕೆ ಬೇಸರ; ಮುಖಂಡರ ಗೈರಿಗೆ ಆಕ್ರೋಶ: ಕಾರ್ಯಕ್ರಮಕ್ಕೆ ಸಿಎಂ ಬಿಎಸ್‌ವೈ ಬಾರದಕ್ಕೆ ಹಾಗೂ ಉತ್ತರ ಕರ್ನಾಟಕ ಭಾಗದ ಸಚಿವ, ಶಾಸಕರು ಗೈರು ಆಗಿದ್ದಕ್ಕೆ ಸಂಘಟಕರಿಂದ ಬೇಸರ ಹಾಗೂ ಸಭೀಕರಿಂದ ಆಕ್ರೋಶ ವ್ಯಕ್ತವಾಯಿತು. ಹಲವು ಸುತ್ತಿನ ಭೇಟಿ ಬಳಿಕ ಸಿಎಂ ಅವರ ದಿನಾಂಕ ಮತ್ತು ಸಮಯದಂತೆ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಸಿಎಂ ಯಡಿಯೂರಪ್ಪ ಬರ್ತಾರೆ ಎಂಬ ವಿಶ್ವಾಸವಿತ್ತು. ಆದರೆ, ಬರಲಿಲ್ಲ ಎಂದು ಮಹಾಸಂಸ್ಥೆಯ ಅಧ್ಯಕ್ಷ ಶಿವಕುಮಾರ್‌ ಆರ್‌. ಮೇಟಿ, ಕಾರ್ಯದರ್ಶಿ ಭಾಗ್ಯರಾಜ್‌ ಸೊನ್ನದ ಮತ್ತಿರರು ಬೇಸರ ಹೊರಹಾಕಿದರು.

“ಉತ್ತರ ಕರ್ನಾಟಕದವರ ಋಣವನ್ನು ಯಡಿಯೂರಪ್ಪನವರು ತೀರಿಸಬೇಕು. ನೀರಾವರಿ ಯೋಜನೆಗಳಿಗೆ ಭೂಮಿ ಕಳೆದುಕೊಂಡು ಉತ್ತರ ಕರ್ನಾಟಕದವರು ಸ್ವಾತಂತ್ರ್ಯ ಹೋರಾಟಕ್ಕೆ ಸಮನಾದ ತ್ಯಾಗ ಮಾಡಿದ್ದಾರೆ. ಪ್ರತ್ಯೇಕ ರಾಜ್ಯದ ಕೂಗು ನೋವಿನ ಧ್ವನಿ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು’.
-ಬಸವ ಜಯಮೃತ್ಯುಂಜಯ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next