ಚಂದನವನದಲ್ಲಿ “ರಾಜಣ್ಣನ ಮಗ’ ಎಂಬ ಹೆಸರಿನ ಚಿತ್ರವೊಂದು ತೆರೆಗೆ ಬರುತ್ತಿದೆ. ಅಣ್ಣಾವ್ರು, ರಾಜಣ್ಣ ಎಂಬ ಹೆಸರು ಕೇಳಿದ ಕೂಡಲೆ, ಕನ್ನಡ ಸಿನಿಪ್ರಿಯರಿಗೆ ಮೊದಲು ನೆನಪಿಗೆ ಬರುವುದು ವರನಟ ರಾಜಕುಮಾರ್. ಆದರೆ “ರಾಜಣ್ಣನ ಮಗ’ ಎಂಬ ಹೆಸರಿದ್ದರೂ, ಈ ಚಿತ್ರಕ್ಕೂ ರಾಜಕುಮಾರ್ ಅವರಿಗೂ ಯಾವುದೇ ಸಂಬಂಧವಿಲ್ಲ. ರಾಜಣ್ಣ ಎಂಬ ಆದರ್ಶ ವ್ಯಕ್ತಿಯ ಮಗ ಏನೇನು ಮಾಡುತ್ತಾನೆ? ಎಂಬುದು ಚಿತ್ರದ ಕಥಾಹಂದರ. ಚಿತ್ರದ ಕಥೆಗೆ ಸೂಕ್ತ ಎಂಬ ಕಾರಣಕ್ಕೆ “ರಾಜಣ್ಣನ ಮಗ’ ಶೀರ್ಷಿಕೆಯನ್ನು ಚಿತ್ರಕ್ಕೆ ಇಟ್ಟುಕೊಂಡಿದ್ದೇವೆ ಎನ್ನುತ್ತದೆ ಚಿತ್ರತಂಡ. ಸದ್ಯ ತನ್ನ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ “ರಾಜಣ್ಣನ ಮಗ’ನನ್ನು ಪ್ರೇಕ್ಷಕರ ಮುಂದೆ ತರಲು ತಯಾರಿ ಮಾಡಿಕೊಳ್ಳುತ್ತಿದೆ. ಇದರ ನಡುವೆ ಚಿತ್ರದ ಪ್ರಚಾರ
ಕಾರ್ಯಗಳಿಗೂ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ “ರಾಜಣ್ಣನ ಮಗ’ನ ಹಾಡುಗಳನ್ನು ಹೊರತಂದಿದೆ.
ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸೇರಿದಂತೆ ಇತರ ಅತಿಥಿಗಳು ಪಾಲ್ಗೊಂಡು ಚಿತ್ರದ ಆಡಿಯೋವನ್ನು ಹೊರತಂದು ಚಿತ್ರಕ್ಕೆ ಶುಭ ಕೋರಿದರು.
“ರಾಜಣ್ಣನ ಮಗ’ ಚಿತ್ರದಲ್ಲಿ ಹಿರಿಯ ನಟ ಚರಣ್ ರಾಜ್ ರಾಜಣ್ಣನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೇ ಚಿತ್ರದ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಚರಣ್ ರಾಜ್, “ಇಂದು ಪ್ರಪಚಂದ ಯಾವುದೇ ಮೂಲೆಗೆ ಹೋದ್ರು ಕರ್ನಾಟಕ ಅಂತ ಹೇಳಿದ್ರೆ ಅಲ್ಲಿ ರಾಜಣ್ಣ, ಅಣ್ಣಾವ್ರು ಅಂತ ಹೆಸರು ಹೇಳ್ತಾರೆ. ಅವರ ಹೆಸರು, ವ್ಯಕ್ತಿತ್ವ ಅಷ್ಟೊಂದು ಅಗಾಧವಾಗಿದೆ. ಹಿಂದೆ ಅಣ್ಣಾವ್ರ ಮಕ್ಕಳು ಚಿತ್ರದಲ್ಲಿ
ತಂದೆಯ ಪಾತ್ರವನ್ನು ಮಾಡಿದ್ದೆ. ಈ ಚಿತ್ರದಲ್ಲಿ ರಾಜಣ್ಣ ಎಂಬ ಅಂಥದ್ದೆ ಪಾತ್ರವನ್ನು ಮಾಡಿದ್ದೇನೆ. ಇಂತಹ ಪಾತ್ರಗಳನ್ನು ಮಾಡುವುದೇ ನನಗೆ ಹೆಮ್ಮೆ, ಹೆಸರೇ ಹೇಳುವಂತೆ ಇದೊಂದು ಆದರ್ಶ ತಂದೆಯ ಪಾತ್ರ. ಅಪರೂಪಕ್ಕೆ ಸಿಗುವ, ಸವಾಲಿನ ಪಾತ್ರ ನಿರ್ವಹಿಸಿದ ಖುಷಿ ಇದೆ’ ಎಂದರು.
ಇನ್ನು ಈ ಚಿತ್ರದಲ್ಲಿ ರಾಜಣ್ಣನ ಮಗನಾಗಿ ಹರೀಶ್ ಅಭಿನಯಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಹರೀಶ್, “ಈ ಚಿತ್ರದ ಹೆಸರು ರಾಜಣ್ಣನ ಮಗ ಅಂತಿದ್ದರೂ, ಅಣ್ಣಾವ್ರ ಫ್ಯಾಮಿಲಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ತಂದೆ ಮಗನ ಬಾಂಧವ್ಯದ ಚಿತ್ರ. ಏನೋ ಮಾಡಲು ಹೋಗಿ, ಇನ್ನೇನೊ ಆಗುವ ದುರಾದೃಷ್ಟ ಮಗನ ಪಾತ್ರ ನನ್ನದು’ ಎಂದರು.
“ರಾಜಣ್ಣನ ಮಗ’ ಚಿತ್ರವನ್ನು ಕೋಲಾರ ಸೀನು ನಿರ್ದೇಶನ ಮಾಡಿದ್ದು, ರವಿ ಬಸ್ರೂರು ಸಂಗೀತವಿದೆ. ಸಂಯೋಜಿಸಿದ್ದಾರೆ.