ಬೆಂಗಳೂರು: ಟಿಪ್ಪರ್ ಲಾರಿಯೊಂದು ಬೈಕ್ ಅನ್ನು ಹಿಂದಿಕ್ಕುವ ಭರದಲ್ಲಿ ಎದುರು ಬರುತ್ತಿದ್ದ ಮತ್ತೂಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಅಣ್ಣ-ತಂಗಿ ಕೆಳಗೆ ಬಿದ್ದಿದ್ದು, ತಂಗಿ ಮೇಲೆ ಟಿಪ್ಪರ್ ಲಾರಿ ಹರಿದು ಮೃತಪಟ್ಟಿರುವ ಘಟನೆ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆಂಗೇರಿ ಉಪನಗರದ ಬೀಡಿ ಕಾರ್ಮಿಕರ ಕಾಲೋನಿ ನಿವಾಸಿ ಶಬ್ರೀನ್ ತಾಜ್(26) ಮೃತರು. ಆಕೆಯ ಸಹೋದರ ಶೇಕ್ ಹುಸೈನ್(27) ಎಂಬವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಹೇಳಿದರು.
ಶಬ್ರೀನ್ ತಾಜ್ ಮತ್ತು ಶೇಕ್ ಹುಸೈನ್ ಬುಧವಾರ ದ್ವಿಚಕ್ರವಾಹನದಲ್ಲಿ ಬನ್ನೇರುಘಟ್ಟಕ್ಕೆ ತೆರಳಿ ಮನೆಗೆ ವಾಪಸಾಗುತ್ತಿದ್ದು, ಮಧ್ಯಾಹ್ನ 1.30ರ ಸುಮಾರಿಗೆ ನೈಸ್ ರಸ್ತೆಯ ಸೇತುವೆ ಸಮೀಪದ 100 ಅಡಿ ರಸ್ತೆಯಲ್ಲಿ ಹೋಗುವಾಗ ಹಿಂದಿನಿಂದ ವೇಗವಾಗಿ ಬಂದಿರುವ ಟಿಪ್ಪರ್ ಲಾರಿ, ದ್ವಿಚಕ್ರವಾಹನವನ್ನು ಹಿಂದಿಕ್ಕುವ ಭರದಲ್ಲಿ ದ್ವಿಚಕ್ರವಾಹನಕ್ಕೆ ಢಿಕ್ಕಿಯಾಗಿದೆ.
ಈ ವೇಳೆ ದ್ವಿಚಕ್ರವಾಹನ ಚಲಾಯಿಸುತ್ತಿದ್ದ ಶೇಕ್ ಹುಸೈನ್ ರಸ್ತೆಯ ಬಲ ಭಾಗಕ್ಕೆ ಬಿದ್ದಿದ್ದಾನೆ. ಹಿಂಬದಿ ಕುಳಿತ್ತಿದ್ದ ಆತನ ಸಹೋದರಿ ಶಬ್ರೀನ್ ತಾಜ್ ರಸ್ತೆಯ ಎಡಭಾಗಕ್ಕೆ ಬಿದ್ದ ಪರಿಣಾಮ ಆಕೆ ಮೇಲೆ ಟಿಪ್ಪರ್ ಲಾರಿ ಹರಿದಿದೆ. ಹೀಗಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಅಪಘಾತದ ಬಳಿಕ ಸ್ಥಳದಲ್ಲೇ ಟಿಪ್ಪರ್ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಟಿಪ್ಪರ್ ಲಾರಿ ಜಪ್ತಿ ಮಾಡಿದ್ದು, ತಲೆಮರೆಸಿಕೊಂಡಿರುವ ಚಾಲಕನ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.