ಬೆಂಗಳೂರು: ಗಣಿತ ಎಂದರೆ ಎಲ್ಲರಿಗೂ ಒಂದು ತರಹದ ತಲೆನೋವು. ಆದರೆ, ಈ ಪುಟಾಣಿಗಳಿಗೆ ಮಾತ್ರ ಬಹಳ ಸಲೀಸು. ಲೆಕ್ಕವನ್ನು ಉತ್ತರಿಸಲು ನಮಗೆ ಕ್ಯಾಲ್ಕುಲೇಟರ್ ಬೇಕು. ಆದರೆ ಸಿಪ್ ಅಬಾಕಸ್ ಸಂಸ್ಥೆ ಆಯೋಜಿಸಿದ್ದ ಅಬಾಕಸ್ ಬೌದ್ಧಿಕ ಅಂಕಗಣಿತ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಕ್ಷಣಾರ್ಧದಲ್ಲಿ ಮುಗಿಸುತ್ತಿದ್ದರು.
ಇತೀ¤ಚೆಗೆ ಮಾನ್ಯತಾ ಟೆಕ್‌ಪಾರ್ಕ್‌ನ ಮಾನ್ಫೋ ಕನ್ವೆನ್ಷನ್ ಸೆಂಟರ್‌ನಲ್ಲಿ ಎಸ್‌ಐಪಿ (ಸಿಪ್) ಅಕಾಡೆಮಿ ಇಂಡಿಯಾ ಪ್ರೈ.ಲಿ. ಏರ್ಪಡಿಸಿದ್ದ 17ನೇ ರಾಜ್ಯ ಮಟ್ಟದ ಎಸ್‌ಐಪಿ ಪ್ರಾಡಿಜಿ ಪ್ಲಸ್-2019ರ ಅಬಾಕಸ್ ಅಂಕಗಣಿತ ಸ್ಪರ್ಧೆಯನ್ನು ಪೊಲೀಸ್ ಮಹಾನಿರೀಕ್ಷಕ ಸೀಮಂತ್ ಕುಮಾರ್ ಸಿಂಗ್ ಉದ್ಘಾಟಿಸಿದರು. ನಂತರ ಮಾತನಾಡಿದರು.
ತಂತ್ರಜ್ಞಾನದಲ್ಲಿನ ಮಹತ್ವದ ಸಂಶೋಧನೆಗಳಿಂದ ಯುವಪೀಳಿಗೆಗೆ ಉತ್ತಮ ವೇದಿಕೆ ಲಭಿಸಿದ್ದು, ಸದುಪಯೋಗಪಡಿಸಿಕೊಳ್ಳಲು ಸಲಹೆ ನೀಡಿದರು. ಮಕ್ಕಳು ಅಭ್ಯಾಸದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಸಮಾನವಾಗಿ ಸ್ವೀಕರಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಇಂತಹ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ ಎಂದು ನುಡಿದರು. ಸಂಸ್ಥೆಯ ರಾಜ್ಯ ಮುಖ್ಯಸ್ಥ ಎಚ್.ಎನ್. ನರೇಂದ್ರ ಮಾತನಾಡಿ, ಪ್ರಾಡಿಜಿ ಎಂದರೆ ಅದ್ಭುತ, ಅಸಾಧಾರಣ ಎಂದರ್ಥ.
ಮಕ್ಕಳಲ್ಲಿನ ಅದ್ಭುತ, ಬೌದ್ಧಿಕ ಸಾಮರ್ಥ್ಯ ಹೊರಹೊಮ್ಮಿಸುವುದೇ ಈ ಸ್ಪರ್ಧೆಯ ಉದ್ದೇಶ. ಈ ದಿಸೆಯಲ್ಲಿ ಅಬಾಕಸ್ ಕಲಿಕೆಗೆ ಎಸ್‌ಐಪಿ ಅಕಾಡೆಮಿ ಇಂಡಿಯಾ ಪ್ರೈ.ಲಿ. ಹೆಚ್ಚು ಒತ್ತು ನೀಡುತ್ತಿದೆ ಎಂದರು. ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳ ಸುಮಾರು 3800 ಮಕ್ಕಳು ಅಬಾಕಸ್ ಮೂಲಕ ತಮ್ಮ ಕಲಿಕಾ ಸಾಮರ್ಥ್ಯವನ್ನು ಒರೆಗಚ್ಚಿ ಅಚ್ಚರಿ ಮೂಡಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.