ಮಂಗಳೂರು/ಉಡುಪಿ: ಕರಾವಳಿ ಭಾಗದಲ್ಲಿ ಮುಂಗಾರು ಚುರುಕು ಪಡೆದುಕೊಂಡಿದ್ದು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯಾದ್ಯಂತ ಶನಿವಾರ ದಿನವಿಡೀ ಬಿರುಸಿನ ಮಳೆಯಾಗಿದೆ. ಇದೇ ರೀತಿ ಬಿರುಸಿನ ಮಳೆ ಕೆಲ ದಿನ ಮುಂದುವರೆಯುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಜೂ. 9ರಂದು “ರೆಡ್ ಅಲರ್ಟ್’ ಘೋಷಿಸಿದೆ.
ಶನಿವಾರ ಭಾರೀ ಮಳೆಗೆ ನಗರದ ಕೊಟ್ಟಾರ, ಕೊಟ್ಟಾರ ಚೌಕಿ, ಬಿಜೈ ಸಹಿತ ಕೆಲವೊಂದು ರಸ್ತೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.
ಸುಬ್ರಹ್ಮಣ್ಯ, ಸುಳ್ಯ, ಐನೆಕಿದು, ಕೊಲ್ಲಮೊಗ್ರು, ಅರಂತೋಡು, ಜಾಲ್ಸೂರು, ಕಡಬ, ಬೆಳ್ಳಾರೆ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಚಾರ್ಮಾಡಿ, ಮಡಂತ್ಯಾರು, ವೇಣೂರು, ಕೊಕ್ಕಡ, ನೆಲ್ಯಾಡಿ, ಪುತ್ತೂರು, ಕುಂಬ್ರ, ಉಪ್ಪಿನಂಗಡಿ, ಇಳಂತಿಲ, ಪೆರ್ನೆ, ಕರಾಯ, ಕಲ್ಲೇರಿ, ಸುರತ್ಕಲ್, ಮುಲ್ಕಿ, ಉಳ್ಳಾಲ, ಕನ್ಯಾನ, ವಿಟ್ಲ, ಮಂಜೇಶ್ವರ, ಬಾಯಾರು, ಬಂಟ್ವಾಳ, ಬಿ.ಸಿ. ರೋಡ್, ಕಲ್ಲಡ್ಕ ಸಹಿತ ವಿವಿಧ ಕಡೆಗಳಲ್ಲಿ ಬಿರುಸಿನ ಮಳೆಯಾಗಿದೆ. ಕಡಲಿನ ಅಲೆಗಳ ಅಬ್ಬರವೂ ಹೆಚ್ಚಿತ್ತು.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸನ್ನದ್ಧ
ಮುಂಗಾರು ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡ ಸನ್ನದ್ಧವಾಗಿವೆ. ದೀಪಕ್ ಕುಮಾರ್ ಅವರ ನೇತೃತ್ವದ 28 ಮಂದಿಯ ಎನ್‌ಡಿಆರ್‌ಎಫ್ ತಂಡ ಪಣಂಬೂರಿನ ಸಿಐಎಸ್‌ಎಫ್ ವಿಭಾಗದಲ್ಲಿ ತಂಗಿ ದ್ದಾರೆ. 25 ಮಂದಿಯ ಎಸ್‌ಡಿಆರ್‌ಎಫ್ ತಂಡ ಪಣಂಬೂರಿನಲ್ಲಿ ಸನ್ನದ್ಧವಾಗಿದೆ. ಅಗತ್ಯ ಬಿದ್ದರೆ ಜಿಲ್ಲೆಯ ವಿವಿಧ ಭಾಗಕ್ಕೆ ತೆರಳಲು ಸಜ್ಜಾಗಿದೆ.