ಚಾಮರಾಜನಗರ: ಆರ್‌ಟಿಸಿಯಲ್ಲಿ ಹೆಸರು ಸೇರಿಸಲು 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ತಾಲೂಕು ಕಚೇರಿಯ ಶಿರಸ್ತೇದಾರರೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ನಗರದ ತಾಲೂಕು ಕಚೇರಿಯ ಆರ್‌ಆರ್‌ಟಿ ಶಾಖೆಯ ಶಿರಸ್ತೇದಾರ್ ಮಂಜುನಾಥ್ ಲಂಚ ಸ್ವೀಕರಿಸುವಾಗ ಎಸಿಬಿ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದು, ಅವರನ್ನು ದಸ್ತಗಿರಿ ಮಾಡಲಾಗಿದೆ.
ತಾಲೂಕಿನ ಬದನಗುಪ್ಪೆ ಗ್ರಾಮದ ನಾಗನಾಯಕ ಎಂಬ 55 ವರ್ಷದ ವ್ಯಕ್ತಿಯೊಬ್ಬರಿಗೆ 4 ಎಕರೆ ಜಮೀನಿದ್ದು, ಅದರ ಆರ್‌ಟಿಸಿಯಲ್ಲಿ ಅವರ ತಾತನ ಹೆಸರು ಇರಲಿಲ್ಲ. ಆರ್‌ಟಿಸಿಯಲ್ಲಿ ತಿದ್ದುಪಡಿ ಮಾಡಿ ತಾತನ ಹೆಸರು ಸೇರಿಸಲು ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ತಿದ್ದುಪಡಿ ಮಾಡಿಕೊಡಲು ಶಿರಸ್ತೇದಾರ್ ಮಂಜುನಾಥ್ ಅವರು ಅರ್ಜಿದಾರ ನಾಗನಾಯಕ ಅವರಿಗೆ 30 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.
ಇದರಲ್ಲಿ 10 ಸಾವಿರ ರೂ. ಮುಂಗಡ ಪಡೆದು ಇನ್ನು ಉಳಿದ 10 ಸಾವಿರ ರೂ.ಗಳನ್ನು ಈಗ ನೀಡಬೇಕು. ಕೊನೆಯ ಕಂತಿನ ಹಣವನ್ನು ತಿದ್ದುಪಡಿ ಮಾಡಿದ ನಂತರ ನೀಡುವಂತೆ ಶಿರಸ್ತೇದಾರ್ ಒತ್ತಾಯಿಸಿದ್ದರು ಎಂದು ಅರ್ಜಿದಾರ ನಾಗನಾಯಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಹೀಗಾಗಿ ಇಂದು ತಾಲೂಕು ಕಚೇರಿಯ ಆರ್‌ಆರ್‌ಟಿ ಶಾಖೆಯಲ್ಲಿ, ಶಿರಸ್ತೇದಾರ್ ಮಂಜುನಾಥ್ ಅವರು ನಾಗನಾಯಕರಿಂದ 10 ಸಾವಿರ ರೂ. ಲಂಚದ ಹಣಪಡೆಯುವಾಗ ನಡೆಸಿದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದರು. ಆರೋಪಿಯನ್ನು ದಸ್ತಗಿರಿ ಮಾಡಿ, ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ವಲಯ ಪೊಲೀಸ್ ಅಧೀಕ್ಷಕಿ ಜೆ.ಕೆ. ರಶ್ಮಿ ಅವರ ಮಾರ್ಗದರ್ಶನದಲ್ಲಿ ಎಸಿಬಿ ಠಾಣೆ ಡಿವೈಎಸ್ಪಿ ಸದಾನಂದ ತಿಪ್ಪಣ್ಣನವರ್, ಇನ್‌ಸ್ಪೆಕ್ಟರ್ ದೀಪಕ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.