ಬೆಂಗಳೂರು: ನಿತ್ಯ ತರಗತಿಗೆ ಹೋಗಿ ಪದವಿ ಪಡೆಯಲು ಸಾಧ್ಯವಾಗದವರಿಗೂ ಪದವಿ, ಸ್ನಾತಕೋತ್ತರ ಪದವಿ ಪೂರೈಸಲು ಅನುಕೂಲವಾಗಿದ್ದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು) ಈಗ ಅನೇಕ ಸಮಸ್ಯೆ ಎದುರಿಸುತ್ತಿದೆ. ಯುಜಿಸಿ ಮಾನ್ಯತೆ ಇಲ್ಲದೇ ವಿದ್ಯಾರ್ಥಿಗಳ ದಾಖಲಾತಿ ಕೂಡ ನಡೆಯುತ್ತಿಲ್ಲ.
ಮೈಸೂರಿನಲ್ಲಿರುವ ಕೆಎಸ್‌ಒಯು ಉಳಿಸಲು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಆರ್ಥಿಕ ಸಮಸ್ಯೆ, ಮಾನ್ಯತೆ ವಿವಾದ ಸೇರಿದಂತೆ ಹತ್ತಾರು ಕಾರಣಗಳಿಂದಾಗಿ ಕೆಎಸ್‌ಒಯು ಆಡಳಿತ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ.
ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಡೊಲಾಯಮಾನವಾಗಿದೆ ಮತ್ತು ಅರ್ಹರಿಗೆ ಪದವಿ, ಸ್ನಾತಕೋತ್ತರ ಪದವಿಗೆ ಸೇರಿಕೊಳ್ಳಲು ಆಗುತ್ತಿಲ್ಲ. ಅಲ್ಲಿನ ಸಿಬ್ಬಂದಿ ವರ್ಗಕ್ಕೆ ವೇತನವೂ ಸಿಗುತ್ತಿಲ್ಲ. ಈ ಮಧ್ಯೆ ಸರ್ಕಾರ ಕೆಎಸ್‌ಒಯು ಮುಚ್ಚಲು ಮುಂದಾಗುತ್ತಿದೆ. ಇದನ್ನೆಲ್ಲ ವಿರೋಧಿಸಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ರಾಜ್ಯ ಕಾರ್ಯದರ್ಶಿ ರಾಜೇಶ್ ಗುರಾಣಿ ಹೇಳಿದ್ದಾರೆ.
ಪಾದಯಾತ್ರೆ ಮೈಸೂರು, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ, ಕೆಂಗೇರಿ ಮಾರ್ಗವಾಗಿ ಬೆಂಗಳೂರಿಗೆ ಬರಲಿದೆ. ಅ.9ರ ಮಧ್ಯಾಹ್ನ ಮೈಸೂರಿನಲ್ಲಿ ಕೆಎಸ್‌ಒಯು ವಿಶ್ರಾಂತ ಕುಲಪತಿ ಪ್ರೊ.ರಾಮೇಗೌಡ ಪಾದಯಾತ್ರೆಗೆ ಚಾಲನೆ ನೀಡಿದರು. ಅ.13ರಂದು ಬೆಂಗಳೂರಿಗೆ ತಲುಪಲಿದ್ದು, ಫ್ರೀಡಂ ಪಾರ್ಕ್‌ನಲ್ಲಿ ದೊಡ್ಡ ಮಟ್ಟದ ಸಭೆ ನಡೆಯಲಿದೆ. ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು ಪಾದಯಾತ್ರೆಯಲ್ಲಿದ್ದಾರೆ ಎಂಬ ಮಾಹಿತಿ ನೀಡಿದರು.