ನರಸಾಪುರ ಎಂಬಲ್ಲಿ ತಿಮ್ಮೇಗೌಡ ಮತ್ತು ಹನುಮಂತರಾಯಪ್ಪ ಎರಡು ಮನೆತನದವರು ಅಕ್ಕಪಕ್ಕ ವಾಸವಾಗಿದ್ದರು. ಇಬ್ಬರಿಗೂ ಒಬ್ಬೊಬ್ಬರು ಗಂಡು ಮಕ್ಕಳು ಇದ್ದರು.ತಿಮ್ಮೇಗೌಡನ ಮಗ ರಮೇಶ ಹನುಮಂತರಾಯಪ್ಪನ ಮಗ ರಾಕೇಶ. ಇನ್ನು ಚಿಕ್ಕ ಹುಡುಗರು ಆದರೂ ಇವರಿಬ್ಬರಲ್ಲಿ ಸ್ನೇಹದ ಬಂಧ ಬಹಳ ಗಟ್ಟಿಯಾಗಿತ್ತು. ಯಾವುದೇ ವಿಚಾರವಾಗಿ ಪರಸ್ಪರ ಹಂಚಿಕೊಂಡು ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಬೆಳೆಯುತ್ತಿದ್ದರು.
ಶಾಲೆಯಲ್ಲಿ ಕನ್ನಡ ಶಿಕ್ಷಕರಾದ ಶಂಕರ್ ಅವರು ಇವರಿಬ್ಬರಿಗೂ ತುಂಬಾ ಆಪ್ತರು. ಚೆನ್ನಾಗಿ ಓದುತ್ತಿದ್ದರು, ಶಿಕ್ಷಕರು ಏನೇ ಹೇಳಿದರೂ ಚಾಚೂ ತಪ್ಪದೆ ಮಾಡುತ್ತಿದ್ದರು. ಅವರು ಹೇಳುತ್ತಿದ್ದ ನೀತಿ ಕಥೆ, ಒಳ್ಳೊಳ್ಳೆ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಕೊಟ್ಟು ಅದರಂತೆ ಪಾಲಿಸುತ್ತಿದ್ದರು. ನಿಜಕ್ಕೂ ಅವರ ಸ್ನೇಹ ಇತರರಿಗೆ ಮಾರ್ಗದರ್ಶನವಾಗಿತ್ತು.
ಶಾಲೆಯಿಂದ ಬಂದ ತತ್ಕ್ಷಣ ಮನೆ ಕೆಲಸಗಳಿಗೆ ಸಹಾಯ ಮಾಡುವುದು, ಆಟ ಆಡುವುದು, ಮರಕ್ಕೆ ಹತ್ತಿ ಎಳನೀರು ಕಿತ್ತು ಕುಡಿಯುವುದು ಮಾಡುತ್ತಿದ್ದರು. ಒಂದು ದಿನ ಶಾಲೆಯಿಂದ ಮನೆಗೆ ಇಬ್ಬರು ಜತೆಯಲ್ಲಿ ಬರುವಾಗ ಯಾರದ್ದೋ ಪರ್ಸ್ ಬಿದ್ದಿತ್ತು ಅದನ್ನು ನೋಡಿ ಕೈಗೆತ್ತಿಕೊಂಡು ಬಂದು ತನ್ನ ಕನ್ನಡ ಶಿಕ್ಷಕರಿಗೆ ತಲುಪಿಸಿ ಅವರ ಮಾಲಕರ ಕೈ ಸೇರುವಂತೆ ಮಾಡಿದರು.ಇದಕ್ಕೆಲ್ಲ ಕಾರಣ ಅವರ ಗುರುಗಳ ನೀತಿ ಪಾಠ.
ರಮೇಶ್ನಿಗೆ ಜೀನಿ ಮಾಂತ್ರಿಕನ ಒಂದು ಪುಸ್ತಕ ಓದುತ್ತಿರಬೇಕಾದರೆ ತನ್ನ ಸ್ನೇಹಿತನಿಗೆ ತನ್ನ ಮೇಲಿರುವ ಭಾವನೆ ಎಷ್ಟು ಆಳದ್ದು ಎಂದು ತಿಳಿಯುವ ಕುತೂಹಲ ಮೂಡಿತ್ತು. ಹಾಗಾಗಿ ರಾಕೇಶನಲ್ಲಿ ನಮಗೇನಾದರು ಮಡಕೆ ಹೊನ್ನು, ವಿದ್ಯೆ ಸಿಕ್ಕರೆ ನೀನು ಏನು ಮಾಡುವೆ ಎಂದು ಕೇಳುತ್ತಾನೆ. ಅದನ್ನು ನಾವು ಸಮವಾಗಿ ಹಂಚಿಕೊಳ್ಳೋಣ ಎನ್ನುತ್ತಾನೆ. ಒಂದು ವೇಳೆ ಈ ಹೊನ್ನು ಒಬ್ಬರು ಮಾತ್ರ ಕೊಂಡುಹೋಗಬೇಕು ಇಲ್ಲವಾದರೆ ಇಬ್ಬರಿಗೂ ಇಲ್ಲ ಎಂದು ಜೀನಿ ಮಾಂತ್ರಿಕ ಹೇಳಿದರೆ ಏನು ಮಾಡುವೆ ಕೇಳುತ್ತಾನೆ.
ಅದಕ್ಕೆ ಉತ್ತರಿಸಿದ್ದ ರಾಕೇಶನು ಅಂತಹ ಗಳಿಗೆ ಬಂದರೆ ಆ ಹೊನ್ನನ್ನು ನಾನು ನಿನಗೆ ನೀಡುತ್ತೇನೆ. ಯಾಕೆಂದರೆ ನೀನು ನನ್ನ ಸ್ನೇಹಿತ, ಸಂಪತ್ತು ಬಳಸಿ ಅದನ್ನು ಸಮೃದ್ಧವಾಗಿಸುವ ಹಲವು ಮಾರ್ಗ ನಿನಗೆ ಗೊತ್ತು. ನೀನು ಶ್ರೀಮಂತನಾದ ಮೇಲೆ ನಿನ್ನ ಗೆಳೆಯನನ್ನು ನೀನು ಬಿಟ್ಟುಹೋಗಲಾರೆ, ನನ್ನ ಬದುಕಿಗೆ ಯಾವುದು ಆವಶ್ಯಕ ಎಂಬ ಅರಿವು ಸಹ ನಿನಗಿದೆ. ಒಂದು ವೇಳೆ ಆ ಕುಡಿಕೆ ನಾನು ಕೊಂಡೊಯ್ದರೆ ನೀನು ನನ್ನ ಬಗ್ಗೆ ಏನೆಂದುಕೊಳ್ಳುವೆಯೋ ಅನ್ನೊ ಪಾಪ ಪ್ರಜ್ಞೆ ಕಾಡುತ್ತಿರಲಿದೆ ಎಂದ.
ಈ ಉತ್ತರ ರಮೇಶನನ್ನು ಭಾವುಕನನ್ನಾಗಿ ಮಾಡಿತು. ನಿಜವಾಗಿಯೂ ನಿನ್ನಂತ ನಿಸ್ವಾರ್ಥ ಸ್ನೇಹಿತ ನನ್ನ ಬದುಕಿಗೆ ಸಿಕ್ಕಿರುವುದು ಅದೃಷ್ಟವೆಂದು ಹೇಳಿ ನಾವು ಹಾಗೆ ಕುಡಿಕೆ ಹೊನ್ನು ಸಿಕ್ಕರೂ ಆಸೆ ಪಡುವುದೇ ಬೇಡ. ಅದನ್ನು ನಮ್ಮ ಕನ್ನಡ ಶಿಕ್ಷಕರಿಗೆ ನೀಡೋಣ. ಒಳ್ಳೆ ಕೆಲಸಕ್ಕೆ ಸದ್ವಿನಿಯೋಗ ಆಗುತ್ತದೆ. ನಮಗೆ ನಮ್ಮ ಸ್ನೇಹವೇ ಒಂದು ದೊಡ್ಡ ಸಂಪತ್ತಿದ್ದಂತೆ, ಈ ಸ್ನೇಹ ಎಂದಿಗೂ ಚಿರಕಾರವಿರಲಿ ಎಂದನು.
-ಸಂಗೀತ ಶ್ರೀ ಕೆ.
ಅರೆಯೂರು ಭೋವಿಪಾಳ್ಯ