ವಾಷಿಂಗ್ಟನ್ : ಅಮೆರಿಕದ ರಕ್ಷಣಾ ಸಚಿವ ಜೇಮ್ಸ್ ಮ್ಯಾಟಿಸ್ ಅವರ ಪ್ರಕಾರ ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಗ್ಧಾದಿ ಸತ್ತಿಲ್ಲ, ಇನ್ನೂ ಜೀವಂತ ಇದ್ದಾನೆ !
“ನನ್ನ ಪ್ರಕಾರ ಬಗ್ಧಾದಿ ಇನ್ನೂ ಜೀವಂತ ಇದ್ದಾನೆ. ನಾವೇ ಸ್ವತಃ ಆತನನ್ನು ಕೊಲ್ಲುವ ತನಕವೂ ಆತ ಜೀವಂತವೇ ಇರುವುದಾಗಿ ನಾನು ಭಾವಿಸುತ್ತೇನೆ. ಆದುದರಿಂದ ಆತ ಇನ್ನೂ ಸತ್ತಿಲ್ಲ, ಜೀವಂತ ಇದ್ದಾನೆ ಎಂದು ನಾನು ಹೇಳುತ್ತೇನೆ’ ಎಂದು ಮ್ಯಾಟಿಸ್ ನಿನ್ನೆ ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಬಗ್ಧಾದಿ ರಶ್ಯನ್ ವಾಯುದಾಳಿಯಲ್ಲಿ ಸತ್ತಿರುವುದಾಗಿ ಸಿರಿಯದಲ್ಲಿನ ಸಿರಿಯ ಐಸಿಸ್ ನಾಯಕರು ಹೇಳಿರುವುದನ್ನು ತಾನು ಕೇಳಿಸಿಕೊಂಡಿರುವುದಾಗಿ ದೀರ್ಘಕಾಲದಿಂದ ಸಮರ ವಿಚಕ್ಷಣೆ ಮಾಡಿಕೊಂಡು ಬಂದಿರುವ ಬ್ರಿಟನ್‌ನಲ್ಲಿನ ಸಿರಿಯದ ಮಾನವ ಹಕ್ಕುಗಳ ವೀಕ್ಷಕ ಸಂಸ್ಥೆಯು ಕಳೆದ ವಾರ ಹೇಳಿತ್ತು. ಜಗತ್ತು ಈಗ ಅದನ್ನೇ ನಂಬಿಕೊಂಡಿದೆ.
ತನ್ನ ತಲೆಗೆ 2.50 ಕೋಟಿ ಡಾಲರ್ ಇನಾಮು ಹೊಂದಿರುವ ಬಗ್ಧಾದಿಯು ಈಚಿನ ವರ್ಷಗಳಲ್ಲಿ ಹೆಚ್ಚು ಬಹಿರಂಗಕ್ಕೆ ಬಾರದೆ ತರೆಮರೆಯಲ್ಲೇ ಉಳಿದುಕೊಂಡಿರುವನಾದರೂ ಐಸಿಸ್ ವಶದಲ್ಲಿರುವ ಇರಾಕ್ ಮತ್ತು ಸಿರಿಯದಲ್ಲಿನ ಸುರಕ್ಷಿತ ಪ್ರದೇಶಗಳಲ್ಲಿ ಓಡಾಡಿಕೊಂಡಿದ್ದಾನೆ ಎಂಬ ವದಂತಿಗಳು ಎಲ್ಲೆಡೆ ಹಬ್ಬಿವೆ.
ಕಳೆದ ತಿಂಗಳಲ್ಲಿ ರಶ್ಯದ ಸೇನೆಯು ಸಿರಿಯಾದ ರಕ್ಕಾ ಸಮೀಪದಲ್ಲಿ ಕಳೆದ ಮೇ 28ರಂದು ತಾನು ನಡೆಸಿದ್ದ ವಾಯು ದಾಳಿಯಲ್ಲಿ ಬಗ್ಧಾದಿಯು ಬಹುತೇಕ ಹತನಾಗಿದ್ದಾನೆ ಎಂದು ಹೇಳಿತ್ತು.