ವಾಷಿಂಗ್ಟನ್ : ”ನೂರು ಕೋಟಿಗೂ ಅಧಿಕ ಜನರನ್ನು ನೋಂದಾಯಿಸಲಾಗಿರುವ ಆಧಾರ್ ಕಾರ್ಡ್ ಯೋಜನೆಯಿಂದ ಭಾರತ ಸರಕಾರಕ್ಕೆ 900 ಕೋಟಿ ಡಾಲರ್ ಉಳಿತಾಯವಾಗಿದೆ” ಎಂದು ಆಧಾರ್ ರೂವಾರಿ ನಂದನ್ ನಿಲೇಕಣಿ ಹೇಳಿದ್ದಾರೆ.
ಹಿಂದಿನ ಯುಪಿಎ ಸರಕಾರದಿಂದ ಆರಂಭಿಸಲ್ಪಟ್ಟು , ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇತ್ಲಿ ನೇತೃತ್ವದ ಈಗಿನ ಎನ್‌ಡಿಎ ಸರಕಾರದಿಂದ ಭಾರೀ ಉತ್ಸಾಹದ ಬೆಂಬಲ ಪಡೆದಿರುವ ಆಧಾರ್ ದೇಶದ ಅತ್ಯಂತ ಮಹತ್ವಾಕಾಂಕ್ಷೀ ಯೋಜನೆಯಾಗಿದೆ ಎಂದು ದೇಶದ ಎರಡನೇ ಬೃಹತ್ ಐಟಿ ಉದ್ಯಮ ಸಂಸ್ಥೆಯ ಕಾರ್ಯ ನಿರ್ವಾಹಕೇತರ ಅಧ್ಯಕ್ಷರಾಗಿರುವ, 62ರ ಹರೆಯದ, ನಿಲೇಕಣಿ ಹೇಳಿದರು.
ಅಭಿವೃದ್ದಿಗಾಗಿ ಡಿಜಿಟಲ್ ಇಕಾನಮಿ ಕುರಿತ ವಿಶ್ವ ಬ್ಯಾಂಕ್ ಮಂಡಳಿಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ನಿಲೇಕಣಿ ಅವರು, ಆಧಾರ ಯೋಜನೆ ನಿಜಕ್ಕೂ ದ್ವಿಪಕ್ಷೀಯ ವಿಷಯವಾಗಿತ್ತು ಎಂದು ಹೇಳಿದರು.
ಅಭಿವೃದ್ದಿಶೀಲ ದೇಶಗಳಿಗೆ ಮಹತ್ತರ ಆರ್ಥಿಕಾಭಿವೃದ್ಧಿಯನ್ನು ಸಾಧಿಸುವುದಕ್ಕೆ ಡಿಜಿಟಲ್ ಮೂಲ ಸೌಕರ್ಯವನ್ನು ರೂಪಿಸುವುದೇ ಹೆಚ್ಚು ಸೂಕ್ತ ಮತ್ತು ಸುಲಭ ಎಂದು ನಿಲೇಕಣಿ ಹೇಳಿದರು.
ಚರ್ಚೆಯ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನಿಲೇಕಣಿ ಅವರು, “ವಿಶ್ವ ಬ್ಯಾಂಕ್ ಡಿಜಿಟಲ್ ಐಡಿ ಪರಿಕಲ್ಪನೆಯನ್ನು ಆಂತರೀಕರಿಸುವ ಮೂಲಕ ನಿಜಕ್ಕೂ ದೊಡ್ಡ ಕೆಲಸವನ್ನು ಮಾಡಿದೆ’ ಎಂದು ಹೇಳಿದರು.
ಸುಮಾರು 15 – 20 ದೇಶಗಳ ಪ್ರತಿನಿಧಿಗಳು ಡಿಜಿಟಲ್ ಆರ್ಥಿಕಾಭಿವೃದ್ದಿ ಚರ್ಚೆಯಲ್ಲಿ ಪಾಲ್ಗೊಂಡರು.