Advertisement
ಕಂಪೆನಿಯು ಕೆಲಸದಿಂದ ತೆಗೆದಿದ್ದ 750 ಮಂದಿ ಗುತ್ತಿಗೆ ಕಾರ್ಮಿಕರಿಗೆ ಒಂದು ತಿಂಗಳ ಪೂರ್ಣ ಸಂಬಳ ನೀಡಿಕೆ, ಯುನಿಟೆಕ್ ಕಂಪೆನಿ ಬಾಕಿ ಉಳಿಸಿಕೊಂಡಿದ್ದ ಬೋನಸ್ ವಿತರಣೆ ಹಾಗೂ ಇದೇ ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ಮರು ನೇಮಿಸಿಕೊಳ್ಳುವ ಮತ್ತು ವರ್ಗಾವಣೆ ಮಾಡಬೇಕಾದಲ್ಲಿ ಕಾರ್ಮಿಕರೊಂದಿಗೆ ಚರ್ಚಿಸಿ ವರ್ಗಾವಣೆಗೊಳಿಸುವ ನಿರ್ಣಯಗಳೊಂದಿಗೆ ಕಾರ್ಮಿಕ ಸಮಸ್ಯೆಗೆ ತತ್ಕಾಲದ ಪರಿಹಾರ ಕಂಡುಕೊಳ್ಳಲಾಯಿತು.
ಇಲಾಖಾ ಅಧಿಕಾರಿಗಳು, ಉಡುಪಿ ತಹಶೀಲ್ದಾರರು ಕಂಪೆನಿಯ ಅಧಿಕಾರಿಗಳೊಂದಿಗೆ ಕಂಪೆನಿಯ ಒಳಗೆ ಮಾತುಕತೆಗೆ ತೊಡಗಿದ್ದಾಗ ಮತ್ತೆ ಸಿಟ್ಟಿಗೆದ್ದ ಕಾರ್ಮಿಕ ನಾಯಕರು ತಮ್ಮನ್ನು ಬಿಟ್ಟು ಮಾತುಕತೆ ನಡೆಸಬಾರದೆಂಬಂತೆ ಪಟ್ಟು ಹಿಡಿದಿದ್ದರು. ಆಗ ಅವರನ್ನು ಸಮಾಧಾನಿಸಿ ಹೊರಕ್ಕೆ ಕಳುಹಿಸಲಾಗಿತ್ತು. ತಹಶೀಲ್ದಾರ್ ಮಹೇಶ್ಚಂದ್ರ ಹೊರಗೆ ಬಂದು ಕಾರ್ಮಿಕರ ಬಳಿ ಮಾತುಕತೆಗಳ ಬಗ್ಗೆ ವಿವರಿಸಿದರು. ಬೇಡಿಕೆ ಕುಸಿದಿರುವುದರಿಂದ ಗುತ್ತಿಗೆ ಆಧಾರದಲ್ಲಿದ್ದ ಕಾರ್ಮಿಕರನ್ನು ಕೈಬಿಡಲಾಗಿದೆ ಎಂದು ಸುಜ್ಞಾನ್ ಕಂಪೆನಿಯ ಅಧಿಕಾರಿಗಳು ಸೋಮವಾರ ತಿಳಿಸಿದ್ದರು.
Related Articles
ಸಂಜೆ ವೇಳೆಗೆ ಕಾರ್ಮಿಕ ಅಧಿಕಾರಿಯೋರ್ವರ ತಪ್ಪು ನಡೆಯಿಂದಾಗಿ ಕಾರ್ಮಿಕರ ಆಕ್ರೋಶ ಭುಗಿಲೆದ್ದು ಅಧಿಕಾರಿಗಳ ಮಟ್ಟದ ಸಭೆ ನಡೆಯುತ್ತಿದ್ದ ಆಸ್ಪೆನ್ ಇನ್‌ಫ್ರಾಸ್ಟ್ರಕ್ಚರ್ ಆಡಳಿತ ಕಚೇರಿಯೊಳಗೆ ಪ್ರವೇಶಿಸಲು ಹವಣಿಸಿದಾಗ ಬಾಗಿಲಿನ ಗಾಜು ಬಿದ್ದು, ಅದು ಜೆಡಿಎಸ್ ನಾಯಕ ಇಸ್ಮಾಯಿಲ್ ಪಲಿಮಾರ್ ಕೈಗೆ ತಗುಲಿ ಗಾಯವಾಯಿತು. ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.
Advertisement
ಸಂಜೆ ಶಾಸಕ ಸೊರಕೆ ಅವರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ಒಡಂಬಡಿಕೆಯ ಪ್ರಸ್ತಾವ ಅವರ ಮುಂದಿಟ್ಟ ಬಳಿಕ ಕಾರ್ಮಿಕರು ಅಲ್ಲಿಂದ ನಿರ್ಗಮಿಸಿದರು. ಕಾರ್ಮಿಕ ಇಲಾಖಾ ನಿರೀಕ್ಷಕರಾದ ರಾಮಮೂರ್ತಿ, ಜೀವನ್ ಕುಮಾರ್ ಒಡಂಬಡಿಕೆಯನ್ನು ಕಾರ್ಯರೂಪಕ್ಕಿಳಿಸಲು ಸಹಕರಿಸಿದ್ದರು. ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಕಾಪು ಸರ್ಕಲ್ ಹಾಲಮೂರ್ತಿ ರಾವ್ ಮತ್ತಿತರ ಕಡೆಗಳ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ ಏರ್ಪಡಿಸಿದ್ದರು.