ಬೆಂಗಳೂರು: “ಎಂತಹಾ ಮಹಾನ್ ಕಲಾವಿದರಿಗೂ ಮಾತ್ಸರ್ಯ ತರುವ ರೀತಿಯಲ್ಲಿ ತಾರಾಮೌಲ್ಯ ಹೊಂದಿದ್ದರೂ ತನಗೆ ಅಂತಹ ತಾರಾಮೌಲ್ಯವಿದೆ ಎಂಬ ಕಲ್ಪನೆಯೂ ಇಲ್ಲದ ಒಬ್ಬ ಮುಗ್ಧ ಕಲಾವಿದರಾಗಿದ್ದವರು ಚಿಟ್ಟಾಣಿ’. ಮಂಗಳವಾರ ಇಹಲೋಕ ತ್ಯಜಿಸಿದ ಯಕ್ಷ ರಂಗದ ಮೇರು ವ್ಯಕ್ತಿತ್ವ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರನ್ನು ಯಕ್ಷಗಾನ ಕಲಾವಿದರಾದ ಮಂಟಪ ಪ್ರಭಾಕರ ಉಪಾಧ್ಯ ಅವರು ಬಣ್ಣಿಸಿದ ರೀತಿಯಿದು.
ಗುರುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷ ಕಲಾವಿದರು ಹಮ್ಮಿಕೊಂಡಿದ್ದ ದಿವಂಗತ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ “ನುಡಿನಮನ’ ಸಲ್ಲಿಸಿದ ಅವರು, ಎಷ್ಟೋ ಜನರು ತಾರಾಮೌಲ್ಯ ಬಂದ ತಕ್ಷಣ ಅದನ್ನು ಉಳಿಸಿಕೊಳ್ಳಲು ರಂಗಕ್ಕೆ ಹೊರತಾದ ಇನ್ನಿತರ ಪ್ರವೃತ್ತಿಯ ವೇಷ ಹಾಕುತ್ತಾರೆ. ಆದರೆ, ಚಿಟ್ಟಾಣಿ ಅವರಿಗೆ ಅದರ ಅವಶ್ಯಕತೆಯೇ ಬರಲಿಲ್ಲ. ರಂಗದ ಕ್ರಿಯೆಯೇ ಅವರ ತಾರಾಮೌಲ್ಯವನ್ನು ಉಳಿಸಿತು. ಅದಕ್ಕೆ ಅವರ ಪ್ರತಿಭೆಯೇ ಸಾಕ್ಷಿ ಎಂದರು.
ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರನ್ನು ಯಕ್ಷಗಾನ ಲೋಕ ಮಾತ್ರವಲ್ಲ, ಕಲಾ ಲೋಕವೇ ಕಳೆದುಕೊಂಡಿದೆ. ಅವರ ಸಾವಿನ ಇಂತಹ ಕ್ಷಣಗಳಲ್ಲಿ ನನ್ನ ಬದುಕನ್ನು ನೆನಪಿಸುವುದೇ ಒಂದು ರೀತಿಯ ಹಾಸ್ಯಾಸ್ಪದ. ಏಕೆಂದರೆ, ಅವರ ಸಾಧನೆಯಲ್ಲಿ ನನ್ನ ಬದುಕನ್ನು ಕಂಡು ಕೊಳ್ಳುವುದಕ್ಕಿಂತಲೂ, ಅವರ ಬದುಕಿನಲ್ಲಿ ನಮ್ಮ ಬದುಕು ಕಂಡುಕೊಳ್ಳುವುದೇ ದೊಡ್ಡದು. ಅವರ ಜತೆಗಿನ ಕಲೆಯ ಒಡನಾಟದ ಬಗ್ಗೆ ನಾನು ಕಂಡುಕೊಂಡ ಸತ್ಯ ಅವರ ವ್ಯಕ್ತಿತ್ವ ಮತ್ತು ತಾರಾಮೌಲ್ಯ ಎಂದು ಹೇಳಿದರು.
ಎಂತಹ ಕಲಾವಿದರಿಗೂ ಮಾತ್ಸರ್ಯ ಬರುವ ರೀತಿಯಲ್ಲಿ ಚಿಟ್ಟಾಣಿಯವರನ್ನು ಬಹಳ ಜನ ವೈಭವೀಕರಿಸಿದ್ದಾರೆ. ವೈಭವೀಕರಣ ಎನ್ನುವುದಕ್ಕಿಂತ ಅದು ಸತ್ಯವಾಗಿತ್ತು. ಆದರೆ, ಚಿಟ್ಟಾಣಿಯವರು ಯಾವತ್ತೂ ತಮ್ಮನ್ನು ವೈಭವೀಕರಿಸಿಕೊಂಡಿಲ್ಲ. ಅಷ್ಟೇ ಅಲ್ಲ, ತಮಗೆ ಇರುವ ತಾರಾಮೌಲ್ಯದ ಕಲ್ಪನೆಯೂ ಇಲ್ಲದ ಒಬ್ಬ ಮುಗ್ಧ ಕಲಾವಿದ ಅವರಾಗಿದ್ದರು. ಪದ್ಮಶ್ರೀ ಪ್ರಶಸ್ತಿಯ ಮೌಲ್ಯವೂ ಗೊತ್ತಿಲ್ಲದಷ್ಟು ಮುಗ್ಧರಾಗಿದ್ದರು ಎಂದು ತಿಳಿಸಿದರು.
ಪರಾಕಾಯ ಪ್ರವೇಶ: ಚಿಟ್ಟಾಣಿ ಅವರಿಗೆ ಇಂತಹ ಪಾತ್ರವೇ ಆಗಬೇಕು ಎಂದೇನೂ ಇಲ್ಲ. ಯಾವುದೇ ಪಾತ್ರ ಕೊಟ್ಟರೂ ರಂಗದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾ ಪಾತ್ರದೊಳಗೆ ಪರಾಕಾಯ ಪ್ರವೇಶ ಮಾಡುತ್ತಿದ್ದರು. ಇಂತಹ ಬೇರೊಬ್ಬ ಕಲಾವಿದನನ್ನು ನಾನು ರಂಗದಲ್ಲಿ ಕಂಡಿಲ್ಲ ಮತ್ತು ನನ್ನ ಕಾಲದಲ್ಲಿ ಕಾಣಸಿಗುವುದೂ ಇಲ್ಲ ಎಂದರು.
ಯಕ್ಷಗಾನ ಕಲಾವಿದ ಆನಂದರಾಮ್ ಉಪಾಧ್ಯ ಮಾತನಾಡಿ, ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಏಳು ದಶಕಗಳ ಕಾಲ ಯಕ್ಷಗಾನವನ್ನು ತಮ್ಮ ಉಸಿರಾಗಿಸಿಕೊಂಡಿದ್ದರು. ರಂಗಸ್ಥಳಕ್ಕೆ ಬಂದರೆ ಅವರಿಗೆ ಎಲ್ಲಿಂದ ಚೈತನ್ಯ ಬರುತ್ತದೋ ಎಂದು ಆಶ್ಚರ್ಯವಾಗುತ್ತಿತ್ತು. ಅವರ ರಂಗದ ಆಟವನ್ನು ತಂತ್ರಜ್ಞಾನದ ಸಹಾಯದಿಂದ ಮುಂದೆಯೂ ಜೀವಂತವಾಗಿರಿಸಿ, ನೋಡುವ ಸೌಭಾಗ್ಯ ನಮ್ಮದು ಎಂದರು.
ಕಲಾವಿದ ಸುಧೀಂದ್ರಹೊಳ್ಳ ಮಾತನಾಡಿ, ಯಕ್ಷಾಭಿಮಾನಿಗಳು, ಕಲಾವಿದರ ಹೃದಯ ಸಿಂಹಾಸನದಲ್ಲಿ ಚಿಟ್ಟಾಣಿಯವರು ಕುಳಿತಿದ್ದಾರೆ. ಯಾವ ಕಾಲಕ್ಕೂ ಎದುರಿಗಿರುವುದು ಸಣ್ಣ ಕಲಾವಿದ ಎಂಬ ಭಾವನೆ ಅವರಿಗೆ ಬರುತ್ತಿರಲಿಲ್ಲ. ಕಿರಿಯ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದ ದೊಡ್ಡ ವ್ಯಕ್ತಿತ್ವ ಅವರದ್ದು ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದ ಶ್ರೀನಿವಾಸ್ ಜಿ.ಕಪ್ಪಣ್ಣ, ಯಕ್ಷಗಾನ ಕಲಾವಿದ ಮೋಹನ್ ಹೊಳ್ಳ, ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಸೇರಿದಂತೆ ಯಕ್ಷರಂಗದ ಹಲವು ಗಣ್ಯರು ಪಾಲ್ಗೊಂಡಿದ್ದರು.