ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಚುನಾವಣಾ ಆಯೋಗವು ಮತದಾರರ ಮನೋಭಾವ ತಿಳಿಯಲು ಹಾಗೂ ಮತದಾನ ಪ್ರಮಾಣ ಹೆಚ್ಚಳಕ್ಕೆ ನಡೆಸಿದ ಸಂಶೋಧನೆಯ ವರದಿ ಬಿಡುಗಡೆ ಮಾಡಿದೆ.
ವಿಕಾಸಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವರದಿ ಬಿಡುಗಡೆಗೊಳಿಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಸುಮಾರು 70 ಸಾವಿರ ಜನರ ಅಭಿಪ್ರಾಯದ ಜತೆಗೆ 119 ಸಭೆ ನಡೆಸಿ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ವರದಿ ಸಿದ್ಧಪಡಿಸಲಾಗಿದೆ. ಎಲ್ಲ ಅರ್ಹ ಮತದಾರರನ್ನು ಮತ ಕೇಂದ್ರದತ್ತ ಸೆಳೆಯುವುದು ಇದರ ಉದ್ದೇಶ ಎಂದು ಹೇಳಿದರು.
ಕಳೆದ ಬಾರಿ ಕಲಬುರಗಿ, ಬೆಂಗಳೂರು ಗ್ರಾಮಾಂತರ, ಹಾಸನ ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಕಡಿಮೆ ಇತ್ತು. 40 ಕ್ಷೇತ್ರಗಳಲ್ಲಿ ಶೇ.60ಕ್ಕಿಂತ ಕಡಿಮೆ ಮತದಾನವಾಗಿತ್ತು. ಹಾಗಾಗಿ ಮತದಾನ ಪ್ರಮಾಣ ಹೆಚ್ಚಿಸಲು ಆದ್ಯತೆ ನೀಡಲಾಗಿದೆ. ಶಾಲಾ- ಕಾಲೇಜು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಕುರಿತ ಸಲಹೆಗಳೂ ವರದಿಯಲ್ಲಿವೆ ಎಂದು ತಿಳಿಸಿದರು.
ಮತ ಚಲಾವಣೆಗೆ ಪ್ರೋತ್ಸಾಹ, ಯುವ ಮತದಾರರ ನೋಂದಣಿಗೆ ಉತ್ತೇಜನ, ಲಿಂಗಾನುಪಾತ ಅಂತರ ತಗ್ಗಿಸುವುದು ಸೇರಿದಂತೆ ಹಲವು ಅಂಶಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮತದಾನಕ್ಕೂ ಮೊದಲು ಪ್ರತಿ ಕುಟುಂಬದ ಮತದಾರರಿಗೆ ಮಾರ್ಗಸೂಚಿಯಿರುವ ಕರಪತ್ರ ವಿತರಿಸಲಾಗುವುದು.
ಕರಪತ್ರದಲ್ಲಿ ಚುನಾವಣೆ ದಿನಾಂಕ, ಮತಗಟ್ಟೆ ಸಂಖ್ಯೆ, ಬೂತ್‌ಮಟ್ಟದ ಅಧಿಕಾರಿಗಳ ಸಂಪರ್ಕ ವಿವರ, ಸಹಾಯವಾಣಿ ಸಂಖ್ಯೆ, ಗುರುತು ಖಾತರಿಗೆ ಪರಿಗಣಿಸುವ ದಾಖಲೆಗಳು ಇತರೆ ಮಾಹಿತಿ ಕರಪತ್ರದಲ್ಲಿವೆ. ಮತಗಟ್ಟೆ ಅಧಿಕಾರಿಗಳು ಈ ಕರಪತ್ರಗಳನ್ನು ವಿತರಿಸಲಿದ್ದಾರೆ ಎಂದು ಹೇಳಿದರು.
ಆನ್‌ಲೈನ್‌ನಲ್ಲಿ ಮತದಾರರ ಹೆಸರು ನೋಂದಣಿಗೆ ಆದ್ಯತೆ ನೀಡಬೇಕು. ಯುವ ಮತದಾರರ ಹೆಸರು ನೋಂದಣಿ ಕಾರ್ಯದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂಬುದು ಸೇರಿದಂತೆ ಹಲವು ರೀತಿ ಅಭಿಪ್ರಾಯಗಳನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.