ವಿಜಯಪುರ: ತನ್ನ ಸಂಸಾರಕ್ಕೆ ತೊಡಕಾಗುತ್ತಾರೆ ಎಂಬ ಕಾರಣಕ್ಕೆ ಪತಿಯ ಮೊದಲ ಹೆಂಡತಿಯ ಮಗನನ್ನು ಹತ್ಯೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿಯ ಮಿಂಚನಾಳ ತಾಂಡಾದ 22 ಸವಿತಾ ವಿನೋದ ಚವ್ಹಾಣ ಬಂಧಿತ ಆರೋಪಿ. ಸವಿತಾಳ ಪತಿ ವಿನೋದ್ ಗೆ ಶಾರುಬಾಯಿ ಎಂಬ ಮೊದಲ ಪತ್ನಿಗೆ ಸಮಿತ್ (5 ವ) ಹಾಗೂ ಸಂಪತ್ (3 ವ) ಎಂಬ ಇಬ್ಬರು ಮಕ್ಕಳಿದ್ದರು. ಮೊದಲ ಪತ್ನಿ ತೀರಿದ ಬಳಿಕ ಎರಡೂ ಮಕ್ಕಳು ಮಲತಾಯಿ ಸವಿತಾಳ ಆಶ್ರಯದಲ್ಲೇ ಇದ್ದರು.
ಆದರೆ ಎರಡೂ ಮಕ್ಕಳು ತನ್ನ ಸಂಸಾರಕ್ಕೆ ಅದರಲ್ಲೂ ಆಸ್ತಿಯಲ್ಲಿ ಭಾಗ ಪಡೆಯಲು ವಾರಸುದಾರರಾಗುತ್ತಾರೆ ಎಂಬ ದುರಾಲೋಚನೆಯಿಂದ ಮಕ್ಕಳನ್ನು ಹತ್ಯೆ ಮಾಡಲು ಮುಂದಾಗಿದ್ದಾಳೆ. ಪರಿಣಾಮ ಸಮಿತ್ ಕೊರಳಿಗೆ ಕಟ್ಟಿದ್ದ ಕಾಶಿದಾರವನ್ನು ಬಿಗಿಯಾಗಿ ಹಿಡಿದು ಉಸಿರು ಕಟ್ಟಿಸಿ ಕೊಲೆ ಮಾಡಿದ್ದು, ಇನ್ನೊಂದು ಮಗು ಸಂಪತ್ ನನ್ನೂ ಕೊಲೆ ಮಾಡಲು ಯತ್ನಿಸಿದ್ದು, ಅದೃಷ್ಟವಶಾತ್ ಮಗು ಪ್ರಾಣಾಪಯದಿಂದ ಪಾರಾಗಿದೆ.
ಇದನ್ನೂ ಓದಿ:ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಜೈಲಿನ ಮಹಡಿಯಿಂದ ಬಿದ್ದು ಸಾವು!
ಮಗುವಿನ ಹತ್ಯೆ ಬಳಿಕ ಆರೋಪಿ ಸವಿತಾ ಪರಾರಿಯಾಗಿದ್ದಳು. ಎಸ್ಪಿ ಆನಂದ ಕುಮಾರ ಅವರು ಡಿಎಸ್ಪಿ ಲಕ್ಷ್ಮೀನಾರಾಯಣ ಹಾಗೂ ಗ್ರಾಮೀಣ ವೃತ್ತದ ಸಿಪಿಐ ಸಂಗಮೇಶ ಪಾಲಭಾವಿ ನೇತೃತ್ವದಲ್ಲಿ ರಚಿಸಿದ್ದ ತನಿಖಾ ತಂಡ ಆರೋಪಿ ಸವಿತಾಳನ್ನು ತಿಡಗುಂದಿ ಬಳಿ ಕನ್ನೂರು ಕ್ರಾಸ್ ಬಳಿ ಬಂಧಿಸಿ, ತನಿಖೆ ನಡೆಸಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ