ಮಂಗಳೂರು/ ಉಡುಪಿ:ನಾಲ್ಕು ದಿನಗಳ ಸರಣಿ ರಜೆಯ ಹಿನ್ನೆಲೆಯಲ್ಲಿ ರವಿವಾರ ಕರಾವಳಿಯ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳಲ್ಲಿ ಜನಸಂದಣಿ ಉತ್ತುಂಗದಲ್ಲಿತ್ತು. ಹೊರಜಿಲ್ಲೆ, ಹೊರ ರಾಜ್ಯಗಳ ಪ್ರವಾಸಿರ ಜತೆಗೆ ರವಿವಾರವಾದ್ದರಿಂದ ಸ್ಥಳೀಯರೂ ಸೇರಿದ್ದು, ಅಪಾರ ಜನಸ್ತೋಮ ಕಂಡುಬಂತು.
ಕುಕ್ಕೆ: ಅಧಿಕ ಭಕ್ತರ ಭೇಟಿ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನಿರಂತರ ಮೂರ್ನಾಲ್ಕು ದಿನಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಹೊರ ಜಿಲ್ಲೆ, ರಾಜ್ಯಗಳಿಂದ ಭೇಟಿ ನೀಡುತ್ತಿದ್ದಾರೆ. ರವಿವಾರವೂ ಹೆಚ್ಚಿನ ಸಂಖ್ಯೆಯ ಭಕ್ತರ ಸಂದಣಿ ಕಂಡುಬಂದಿದೆ. ಪಾರ್ಕಿಂಗ್ ಸ್ಥಳ, ವಸತಿ ಗೃಹಗಳಲ್ಲಿ ಕೊಠಡಿಗಳು ಭರ್ತಿಯಾಗಿದ್ದವು.
ಕಳೆದ ವರ್ಷ ಈ ಸಮಯದಲ್ಲಿ ಕೊರೊನಾ ಲಾಕ್‌ಡೌನ್ ಇದ್ದುದರಿಂದ ಕ್ಷೇತ್ರದಾದ್ಯಂತ ಖಾಲಿ ಖಾಲಿಯಾಗಿದ್ದ ರಸ್ತೆ, ಪೇಟೆ ಈ ವರ್ಷ ಭಕ್ತರು, ವಾಹನಗಳಿಂದ ತುಂಬಿದೆ. ಈ ಬಗ್ಗೆ ಫೋಟೋ, ವೀಡಿಯೋಗಳು ವೈರಲ್ ಆಗಿವೆ. ಈಗ ಪರೀಕ್ಷೆಗಳು ಮುಗಿದು ಬೇಸಗೆ ರಜೆ ಆರಂಭಗೊಂಡಿದ್ದು, ಭಕ್ತರು ಮಕ್ಕಳ ಸಹಿತ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ಧರ್ಮಸ್ಥಳ: ಭಕ್ತಸಂದಣಿ
ಬೆಳ್ತಂಗಡಿ: ಒಂದೆಡೆ ವಿಷು ಜಾತ್ರೆ ಜತೆಗೆ ಸರಕಾರಿ ರಜೆಯಾದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆಯಲು ರವಿವಾರ ನಾಡಿನೆಲ್ಲೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ವಿಷು ಜಾತ್ರೆಯ ಪ್ರಯುಕ್ತ ದೇವರ ಬಲಿ ಉತ್ಸವ ಸಹಿತ ಇತರ ವಿಧಿವಿಧಾನ ನೆರವೇರುವುದರಿಂದ ಎ. 24ರ ವರೆಗೆ ಕ್ಷೇತ್ರದಲ್ಲಿ ಮುಂಜಾನೆ 8.30ರ ಬಳಿಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಕ್ಕಳಿಗೆ ರಜೆಯ ಹಿನ್ನೆಲೆ ಪ್ರವಾಸಿಗರು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕ, ಸುರ್ಯ ದೇವಸ್ಥಾನಗಳಿಗೆ ನಿರಂತರ ಭೇಟಿ ನೀಡುತ್ತಿದ್ದಾರೆ.
ಮಲ್ಪೆ: ಟ್ರಾಫಿಕ್ ಜಾಮ್ ಸಮಸ್ಯೆ
ಮಲ್ಪೆ: ಇಲ್ಲಿನ ಕಡಲ ಕಿನಾರೆಗೆ ರವಿವಾರ ಜನಸಾಗರವೇ ಹರಿದು ಬಂದಿದೆ. ಮಲ್ಪೆ ಬೀಚ್ ಮತ್ತು ಸೀವಾಕ್ ವೇಯಲ್ಲಿ ವಿಪರೀತ ಜನಜಂಗುಳಿ ಉಂಟಾಗಿತ್ತು. ಸಂಜೆಯಾಗುತ್ತಿದ್ದಂತೆ ಮಲ್ಪೆ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಯಿತು.