Advertisement

ಎಪಿಎಂಸಿ ಜಾಗದ ಸಮಸ್ಯೆಗೆ ಶೀಘ್ರ ಪರಿಹಾರ

08:20 PM Feb 02, 2020 | Lakshmi GovindaRaj |

ಕೋಲಾರ: ನಗರದ ಎಪಿಎಂಸಿ ಮಾರುಕಟ್ಟೆಯ ಜಾಗದ ಸಮಸ್ಯೆ ಪರಿಹರಿಸಲು ಈಗಾಗಲೇ ತಾಲೂಕಿನ ಚೆಲುವನಹಳ್ಳಿ ಸಮೀಪ 37.20 ಎಕರೆ ಜಮೀನು ಗುರುತಿಸಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ವಡಗೂರು ನಾಗರಾಜ್‌ ತಿಳಿಸಿದರು. ನಗರದ ಎಪಿಎಂಸಿ ಸಭಾಂಗಣದಲ್ಲಿ ಕೃಷಿ ಮಾರಾಟ ಇಲಾಖೆಯಲ್ಲಿನ ಯೋಜನೆಗಳು, ಕಾನೂನು ತಿಳಿವಳಿಕೆ ಹಾಗೂ ರೈತರ ಕುಂದುಕೊರತೆಗಳ ಬಗ್ಗೆ ಅಹವಾಲು ಆಲಿಸುವ ಸಂಬಂಧ ಕರೆದಿದ್ದ ರೈತರ ಸಭೆಯಲ್ಲಿ ಮಾತನಾಡಿದರು.

Advertisement

ಈ ಜಾಗ ಕೆರೆ ಲಕ್ಷಣಗಳನ್ನು ಹೋಲುತ್ತದೆ ಎಂದು ಕಂದಾಯ ಅ ಕಾರಿಯೊಬ್ಬರು ಆಕ್ಷೇಪಿಸಿದ್ದರು. ಸಂಸದ ಮುನಿಸ್ವಾಮಿ ಇತರೆ ಜನಪ್ರತಿನಿ ಗಳು ಸರ್ಕಾರದ ಮೇಲೆ ಒತ್ತಡ ಹೇರಿ ಕಂದಾಯ ಸಚಿವರಿಂದಲೇ ಸದರಿ ಜಾಗ ನೀಡಲು ಶಿಫಾರಸು ಮಾಡಿಸಿದ್ದಾರೆ. ಸಚಿವ ಸಂಪುಟದ ಮುಂದಿಟ್ಟು ಅನುಮೋದನೆಗೊಳ್ಳಬೇಕಿದೆ. ಸ್ವಲ್ಪ ಸಮಯಾವಕಾಶ ತೆಗೆದುಕೊಳ್ಳಬಹುದು ಎಂದು ನುಡಿದರು.

ಸದರಿ ಜಾಗಕ್ಕೆ ಪರ್ಯಾಯವಾಗಿ ಅರಣ್ಯ ಇಲಾಖೆಗೆ 88 ಎಕರೆ ಜಮೀನು ನೀಡಬೇಕಿದೆ. ತೂರಾಂಡಹಳ್ಳಿ ಮತ್ತು ನಾಯಕರಹಳ್ಳಿಯಲ್ಲಿ ಕಂದಾಯ ಜಮೀನನ್ನು ಅರಣ್ಯ ಇಲಾಖೆ ಫೆನ್ಸಿಂಗ್‌ ಮಾಡಿಕೊಂಡಿತ್ತು. ಇದನ್ನು ಪತ್ತೆಹಚ್ಚಲಾಗಿದ್ದು, ಅದೇ ಜಮೀನನ್ನು ಇಲಾಖೆಗೆ ನೀಡಲು ನಿರ್ಧರಿಸಲಾಗಿದೆ ಎಂದರು. ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್‌ ಮಾತನಾಡಿ, ಕೋಲಾರ ಎಪಿಎಂಸಿ ದೇಶದಲ್ಲೇ 2ನೇ ಅತಿ ದೊಡ್ಡ ಮಾರುಕಟ್ಟೆ ಎಂಬ ಖ್ಯಾತಿ ಇದೆ. ಮಾರುಕಟ್ಟೆಗೆ ಸ್ಥಳಾವಕಾಶ ಕೊರತೆ ನೀಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು.

ರೈತ ಕೃಷಿ ಹಾಗೂ ಸಂಬಂಧಿತ ಚಟುವಟಿಕೆ ನಡೆಸು ವೇಳೆ ಮೃತಪಟ್ಟರೆ 1 ಲಕ್ಷ ರೂ. ಹಾಗೂ ಅಂಗವಿಕಲತೆಗೆ ಒಳಗಾದಾಗ ರೈತ ಸಂಜೀವಿನಿ ಯೋಜನೆಯಡಿ ವಿಮೆ ಸೌಲಭ್ಯವಿದೆ. ಕೃಷಿ ಮಾರಾಟ ವಾಹಿನಿ ವೆಬ್‌ಸೈಟ್‌ ನಲ್ಲಿ ಉತ್ಪನ್ನಗಳ ದರ ತಿಳಿದುಕೊಳ್ಳಬಹುದು. ರೈತರು ಉತ್ಪನ್ನಗಳ ವರ್ಗೀಕರಣ ಮಾಡಿದರೆ ಉತ್ತಮ ಧಾರಣೆ ಪಡೆಯಬಹುದು ಎಂದು ತಿಳಿಸಿದರು.

ಉತ್ಪನ್ನಗಳನ್ನು ಪ್ರಾಂಗಣದೊಳಕ್ಕೆ ತರುವಾಗ ಎಂಟ್ರಿ ಚೀಟಿ ಪಡೆದುಕೊಳ್ಳಬೇಕು. ಎಲೆಕ್ಟಾನಿಕ್‌ ತೂಕದ ಯಂತ್ರದಿಂದ ತೂಕ ಮಾಡಿಸಿಕೊಳ್ಳಬೇಕು. ಜಾಕ್‌ಪಾಟ್‌, ಬಿಳಿ ಚೀಟಿ ವ್ಯವಹಾರ ಕಾನೂನು ಬಾಹಿರ ಎಂಬ ಬಗ್ಗೆ ದಲ್ಲಾಳಿಗಳು, ವರ್ತಕರ ಸಭೆ ಕರೆದು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

Advertisement

ರೈತ ಸಂಘದ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಹಮಾಲಿಗಳಿಗೆ ಗುರುತಿನ ಚೀಟಿ, ಸಮವಸ್ತ್ರ ವ್ಯವಸ್ಥೆ ಮಾಡಬೇಕು. ಕಾರ್ಪೋರೇಟ್‌ ಕಂಪನಿಗಳು ರೈತರ ಕೃಷಿ ಜಮೀನು ಗುತ್ತಿಗೆ ಪಡೆದು ಕೃಷಿ ಮಾಡುವುದರಿಂದ ಎಪಿಎಂಸಿಗಳ ಅಸ್ಥಿತ್ವಕ್ಕೆ ಧಕ್ಕೆ ಬರುತ್ತಿದೆ. ಇದಕ್ಕೆ ಅವಕಾಶ ನೀಡದಂತೆ ಸಮಿತಿ ಸರ್ಕಾರದ ಮೇಲೆ ಒತ್ತಡ ತರಬೇಕು., ಎಪಿಎಂಸಿ ವಿಸ್ತರಣೆಗೆ ಶೀಘ್ರ ಕ್ರಮ ವಹಿಸಬೇಕು ಎಂದು ಹೇಳಿದರು

ರೈತ ಸಂಘದ ರಾಜ್ಯ ಮುಖಂಡ ಅಬ್ಬಣಿ ಶಿವಪ್ಪ ಮಾತನಾಡಿ, ರೈತ ಸಂಜೀವಿನಿ ಯೋಜನೆಯಡಿ ನೀಡುವ ವಿಮೆ ಪರಿಹಾರದ ಮೊತ್ತ ರೈತನ ಜೀವಕ್ಕೆ ಬೆಲೆ ಇಲ್ಲದ ರೀತಿಯಲ್ಲಿದೆ. ಇದನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರೆ ಜಿಲ್ಲಾಧ್ಯಕ್ಷ ಮರಗಲ್‌ ಶ್ರೀನಿವಾಸ್‌ ಪ್ರಾಂಗಣದ ಸ್ವತ್ಛತೆ ಸಮಸ್ಯೆ, ಬಿಳಿ ಚೀಟಿ ವ್ಯವಹಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು. ಹೂವು ಮಾರುಕಟೆಗೆ ವ್ಯವಸ್ಥೆ ಕಲ್ಪಿಸಬೇಕೆಂದು ರೈತ ಸಂಘದ ರಾಮೇಗೌಡ ಒತ್ತಾಯಿಸಿದರು.

ರೈತ ರಾಜಣ್ಣ ಮಾತನಾಡಿ, ರೈತರು ಜಾಗರೂಕತೆಯಿಂದ ಬೆಳೆದ ತರಕಾರಿಗಳನ್ನು ಮಾರುಕಟ್ಟೆಗೆ ತಂದರೆ ನೆರಳು ಇಲ್ಲದೆ ಬಾಡುತ್ತದೆ, ಧಾರಣೆಯೂ ಕಡಿಮೆ ಆಗುವುದರಿಂದ ನೆರಳಿನ ವ್ಯವಸ್ಥೆ ಮಾಡುವಂತೆ ಕೋರಿದರು. ರೈತ ತರುವ ಪ್ರತಿ ಟೊಮ್ಯಾಟೋ ಕ್ರೇಟ್‌ಗೆ 1 ರೂ. ನಂತೆ ಪ್ರೋತ್ಸಾಹಧನ ಘೋಷಿಸಿದರೆ ಎಷ್ಟು ಅವಕವಾಗಿದೆ ಎಂಬ ಪಕ್ಕಾ ಲೆಕ್ಕ ಸಿಗುತ್ತದೆ. ಇದರಿಂದ ಎಪಿಎಂಸಿಗೂ ಲಕ್ಷಾಂತರ ರೂ. ತೆರಿಗೆ ರೂಪದಲ್ಲಿ ಹಣ ಸಂಗ್ರಹವಾಗುತ್ತದೆ ಎಂದು ಶಿಳ್ಳಂಗೆರೆ ಚಲಪತಿ ಸಲಹೆ ನೀಡಿದರು.

ರೈತರು ಮೂಟೆಗಳಲ್ಲಿ ತರುವ ಬೀನ್ಸ್‌, ಕ್ಯಾಪ್ಸಿಕಂ, ನವಿಲುಕೋಸು, ಕಾಲಿಫವರ್‌ ಇನ್ನಿತರೆ ತರಕಾರಿಗಳಲ್ಲಿ ಮೂಟೆಗೆ 5 ಕೆಜಿ ಕಡಿಮೆ ಮಾಡುತ್ತಿರುವುದರಿಂದ ರೈತರಿಗೆ ಭಾರೀ ನಷ್ಟವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಛತ್ರಕೋಡಿಹಳ್ಳಿ ರಾಜಗೋಪಾಲ್‌ ಆಗ್ರಹಿಸಿದರು. ಪ್ರಾಂಗಣದಲ್ಲಿ ನೀರಿನ ಸಮಸ್ಯೆಗೆ ಶುದ್ಧ ನೀರಿನ ಘಟಕದ ವ್ಯವಸ್ಥೆ ಮಾಡಲಾಗಿದೆ, ಎರಡು ಕಡೆ ಶೌಚಾಲಯ ಇದೆ.

ಇನ್ನೊಂದು ಕಡೆ ನಿರ್ಮಾಣ ಹಂತದಲ್ಲಿದೆ ಎಂದ ಅವರು, ರೈತ ಸಂಜೀವಿನಿ ಯೋಜನೆಯಡಿ ನಿಗದಿಪಡಿಸಿರುವ ವಿಮಾ ಮೊತ್ತ 1 ಲಕ್ಷ ರೂ. ಗಳನ್ನು 3 ಲಕ್ಷಕ್ಕೆ ಹಾಗೂ ಅಂಗವಿಕಲರಾದಲ್ಲಿ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕೆಂದು ಎಪಿಎಂಸಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಬಜೆಟ್‌ ಸಂಬಂಧ ಮುಖ್ಯಮಂತ್ರಿಗಳು ಕರೆಯುವ ಪೂರ್ವಭಾವಿ ಸಭೆಯಲ್ಲಿ ರೈತ ಸಂಘಟನೆಗಳು ಕೂಡ ಒತ್ತಡ ಹೇರಬೇಕೆಂದು ತಿಳಿಸಿದರು.

ನೆರಳಿನ ಆಶ್ರಯದಲ್ಲಿದ್ದ ತರಕಾರಿಗಳಿಗೆ ಹೆಚ್ಚು ಬೆಲೆ ಸಿಗುವುದರಿಂದ ಎರಡು ರಸ್ತೆಗಳಲ್ಲಿ ನೆರಳಿನ ವ್ಯವಸ್ಥೆ ಮಾಡಲು 80 ಲಕ್ಷ ರೂ. ಮೀಸಲಿರಿಸಲಾಗಿದ್ದು, ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗುವುದು. ಬಿಳಿ ಚೀಟಿ ವ್ಯವಹಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಂಡಿ ಮಾಲೀಕರಿಗೆ ಬಿಲ್‌ ಪುಸ್ತಕ ಮುದ್ರಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಕಾನೂನು ಪಾಲನೆಗೆ ಒಪ್ಪಿಗೆ ಸೂಚಿಸಿದ್ದಾರೆ, ಬಹುಶಃ ಏ.1ರಿಂದ ಜಾರಿಯಾಗಬಹುದು ಎಂದು ನುಡಿದರು.

ಎಪಿಎಂಸಿ ಉಪಾಧ್ಯಕ್ಷ ರವಿಶಂಕರ್‌, ಸದಸ್ಯ ದೇವರಾಜ್‌, ಮಂಜುನಾಥ್‌, ಎಪಿಎಂಸಿ ಸಿಬ್ಬಂದಿ ಮುನಿರಾಜು ಇತರರಿದ್ದರು. ಸಭೆಯ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗಿತ್ತಾದರೂ ರೈತ ಸಂಘದ ಮುಖಂಡರು ಹೊರತುಪಡಿಸಿದರೆ ರೈತರ ಹಾಜರಾಗಿ ಕಡಿಮೆಯಿತ್ತು.

ಶೌಚಾಲಯ ನಿರ್ಮಿಸಿ: ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಳಿನಿಗೌಡ ಮಾತನಾಡಿ, ಎಪಿಎಂಸಿಗೆ ಅನೇಕ ಮಹಿಳೆಯರು ಕೆಲಸಕ್ಕೆ ಬರುವುದರಿಂದ ಸೂಕ್ತ ರಕ್ಷಣೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರೆ, ಪ್ರಾಂಗಣದಲ್ಲಿ ಸಿಸಿ ಕ್ಯಾಮರಾ, ರಸ್ತೆ ಬದಿಗೆ ಹೊಂದಿಕೊಂಡಂತೆ ಬೀದಿ ದೀಪ ವ್ಯವಸ್ಥೆ ಮಾಡುವಂತೆ ಮುಖಂಡ ಹನುಮಯ್ಯ ಆಗ್ರಹಿಸಿದರು.

ರೈತರಿಂದ ಕಮಿಷನ್‌ ವಸೂಲಿ ಬೇಡ: ರೈತ ಶ್ರೀನಿವಾಸ್‌ ಮಾತನಾಡಿ, ರೈತರಿಂದ ಕಮಿಷನ್‌ ವಸೂಲಿ ಮಾಡುವುದು ಬೇಡ, ಕಾನೂನ ಪ್ರಕಾರವೇ ವಹಿವಾಟು ನಡೆಯಲಿ, ಬೇಡಿಕೆ ಇದ್ದರೆ ಖರೀದಿದಾರ ಮಾಲು ಖರೀದಿಸಿಯೇ ಖರೀದಿಸುತ್ತಾನೆ. ಜಿಲ್ಲೆಯ ಎಲ್ಲ ಎಪಿಎಂಸಿಗಳಲ್ಲೂ ಪ್ರಾಂಗಣಕ್ಕೆ ಬರುವ ಉತ್ಪನ್ನದ ಲೆಕ್ಕವನ್ನು ವರ್ತಕರು ಸರಿಯಾಗಿ ನೀಡದಿರುವುದರಿಂದ ಎಪಿಎಂಸಿಗೆ ನಷ್ಟವುಂಟಾಗುತ್ತಿದೆ. ಈ ಬಗ್ಗೆ ಗಮನಹರಿಸಬೇಕೆಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next