Advertisement

ಬನ್ನೇರುಘಟ್ಟದಲ್ಲಿ ಪ್ರವಾಸಿಗರ ಪರದಾಟ

01:05 AM Jun 27, 2019 | Lakshmi GovindaRaj |

ಬೆಂಗಳೂರು: ಕೆರೆಯ ಎಲ್ಲೆಡೆ ಪಾಚಿಕಟ್ಟಿ ಹೂಳು ತುಂಬಿ ಆರೇಳು ತಿಂಗಳಿಂದ ಸ್ಥಗಿತವಾಗಿರುವ ದೋಣಿ ವಿಹಾರ, ದುಸ್ಥಿತಿಯಲ್ಲಿರುವ ಕೊಳವೆ ಬಾವಿಗಳು, ಕುಡಿಯಲು ನೀರು ಸಿಗದೇ ಹೈರಾಣಾಗಿ ಹೋಗುವ ಪ್ರವಾಸಿಗರು. ಇದು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇತ್ತೀಚೆಗೆ ಕಂಡು ಬಂದ ದೃಶ್ಯಗಳು.

Advertisement

ಈ ಬಾರಿ ಬೇಸಿಗೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಅಂತರ್ಜಲ ಸಾಕಷ್ಟು ಕುಸಿದಿದ್ದು, ಉದ್ಯಾನ ನಿರ್ವಹಣೆಗೆ ನೀರಿನ ಸಮಸ್ಯೆ ತಲೆದೂರಿದೆ. ಉದ್ಯಾನದಲ್ಲಿ ಆಕರ್ಷಣೀಯ ತಾಣವೆನಿಸಿರುವ ದೋಣಿ ವಿಹಾರಕ್ಕೂ ನೀರಿನ ಕೊರತೆಯಾಗಿದ್ದು, ಅಲ್ಲಿನ ಕೆರೆಯಲ್ಲಿ ಪಾಚಿ , ಹೂಳು ತುಂಬಿ ಸಾಕಷ್ಟು ಅನೈರ್ಮಲ್ಯ ಉಂಟಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಪಾಚಿ ಕಟ್ಟಿರುವುದರಿಂದ ಕಳೆದ ಆರೇಳು ತಿಂಗಳಿಂದ ದೋಣಿವಿಹಾರವನ್ನು ಸ್ತಗಿತಗೊಳಿಸಲಾಗಿದೆ. ಇದರಿಂದಾಗಿ ನಿತ್ಯ ಉದ್ಯಾನಕ್ಕೆ ಬರುವ ಸಾವಿರಾರು ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ. ನೀರು ವಿಪರೀತ ಹದಗೆಟ್ಟು ನಿಂತಿದ್ದು, ಕೆರೆಯ ಕಾಲು ಭಾಗವಷ್ಟೇ ನೀರಿದೆ. ಇರೋ ನೀರೆಲ್ಲಾ ಪಾಚಿ ಕಟ್ಟಿ ಹಸಿರಿನಿಂದ ಕೂಡಿದೆ.

ಸುತ್ತಲು ಮರಗಿಡಗಳ ಹಣ್ಣು ಎಲೆಗಳು ಬಿದ್ದು ನೀರು ಮತ್ತಷ್ಟು ಅನೈರ್ಮಲ್ಯಗೊಂಡು ವಾಸನೆ ಬರುತ್ತಿತ್ತು. ಹೀಗಾಗಿ ಪ್ರವಾಸಿಗರು ಬೋಟಿಂಗ್‌ ಮಾಡಲು ಹಿಂಜರಿಯುತ್ತಿದ್ದರು. ಇದು ಕಳೆದ ಆರು ತಿಂಗಳ ಸಮಸ್ಯೆಯಾಗಿದ್ದು, ನೀರಿನಲ್ಲಿ ಬಿದ್ದಿರುವ ಕಸವನ್ನೆಲ್ಲಾ ತೆರವುಗೊಳಿಸಿ ನೀರನ್ನು ಸ್ವತ್ಛಗೊಳಿಸಲು ಸಂಬಂಧಪಟ್ಟವರು ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯರು.

ಪ್ರವಾಸಿಗರಿಗೂ ಕುಡಿಯಲು ನೀರಿಲ್ಲ: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನೀರಿನ ವ್ಯವಸ್ಥೆಗಾಗಿ ಒಟ್ಟು ಏಳು ಕೊಳವೆಬಾವಿ ಕೊರೆಸಲಾಗಿದ್ದು, ಅದರಲ್ಲಿ ನಾಲ್ಕೈದು ಬೋರ್‌ವೆಲ್‌ಗ‌ಳು ದುರಸ್ತಿಯಲ್ಲಿವೆ. ಹೀಗಾಗಿ, ಉದ್ಯಾನದಲ್ಲಿ ಸಸ್ಯ ಸಂಪತ್ತು ಹಾಗೂ ಪ್ರಾಣಿಗಳ ನಿರ್ವಹಣೆಗೆ ಹೆಚ್ಚಿನ ನೀರನ್ನು ಬಳಸಿಕೊಳ್ಳಲಾಗುತ್ತಿದೆ.

Advertisement

ಉಳಿದಂತೆ ಪ್ರವಾಸಿಗರಿಗೆ ಐದಕ್ಕೂ ಹೆಚ್ಚು ಕಡೆ ಶುದ್ಧ ಕುಡಿವ ನೀರಿನ ಘಟಕಗಳನ್ನು ತೆರೆಯಲಾಗುತ್ತಿದೆ. ಸದ್ಯ ಎರಡು ಕಡೆ ಈ ಘಟಕಗಳಾಗಿದ್ದು, ಉಳಿದವು ಕಾಮಗಾರಿ ನಡೆಯುತ್ತದೆ. ಇನ್ನೊಂದೆಡೆ ಪ್ರವಾಸಿಗರಿಗೆ ಪ್ಲಾಸ್ಟಿಕ್‌ ನೀರಿನ ಬಾಟಲಿ ಕೊಂಡೊಯ್ಯಲು ಅನುಮತಿ ಇಲ್ಲದ ಕಾರಣ ದೊಡ್ಡ ಉದ್ಯಾನದಲ್ಲಿ ಸಕಾಲಕ್ಕೆ ನೀರು ಸಿಗದೆ ಪ್ರವಾಸಿಗರು ಪರದಾಟ ನಡೆಸುತ್ತಿದ್ದಾರೆ.

ಕೆಲವು ಜಲಚರ, ಪ್ರಾಣಿಗಳು ಇರುವ ಪ್ರದೇಶ ಸಂಪೂರ್ಣ ಕಲುಷಿತಗೊಂಡಿದ್ದು, ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಸದ್ಯ ಅವುಗಳಿಗೆ ನೀರಿನ ಕೊರತೆ ಇಲ್ಲ. ಒಂದು ವೇಳೆ ಅವುಗಳ ಸಂಖ್ಯೆ ಹೆಚ್ಚಾದಲ್ಲಿ ಸಮಸ್ಯೆ ಉಂಟಾಗಬಹುದು. ಇನ್ನು ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದರೆ ಎಲ್ಲವೂ ಸರಿಯಾಗಿದೆ ಎಂದು ಸಮಸ್ಯೆಯಿಂದ ಜಾರಿಕೊಳ್ಳುತ್ತಾರೆ.

ಈ ಹಿಂದೆ ಉದ್ಯಾನದಲ್ಲಿ ದೋಣಿ ವಿಹಾರಕ್ಕೆ ಸಾಕಷ್ಟು ಬೇಡಿಕೆ ಇತ್ತು. ಸಂಜೆಯಾದರೂ ಪ್ರವಾಸಿಗರು ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ, ಕೊಳಚೆ ನೀರು ಎಂದು ದೋಣಿ ವಿಹಾರಕ್ಕೆ ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ ಎಂದು ಉದ್ಯಾನದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಜಲಮಂಡಳಿಯಿಂದ ಉದ್ಯಾನಕ್ಕೆ ನೀರು ತರಿಸುವ ಯೋಜನೆಯನ್ನು ಶೀಘ್ರ ಕೈಗೊಳ್ಳಬೇಕು. ಜತೆಗೆ ಮಳೆಗಾಲ ಆರಂಭವಾಗುತ್ತಿದ್ದು, ಕೆರೆಯ ಹೂಳು ತೆಗೆಸಿ ಸ್ವತ್ಛವಾಗಿಡಲು ಉದ್ಯಾನ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂಬುದು ಪ್ರವಾಸಿಗರ ಆಶಯವಾಗಿದೆ.

ಉದ್ಯಾನದಲ್ಲಿ ಎಲ್ಲಾ ಕಡೆ ಶುದ್ಧ ನೀರಿನ ಘಟಕಗಳಿಲ್ಲ. ಬಾಟಲಿ ನೀರನ್ನು ಒಳಗೆ ಬಿಡದ ಕಾರಣ ನೀರಿಗಾಗಿ ಕಿ.ಮೀ ಗಟ್ಟಲೆ ಅಲೆದಾಡಬೇಕಿದೆ. ಮೂಲಸೌಕರ್ಯ ಕುಡಿವ ನೀರಿಗೆ ಆದ್ಯತೆ ನೀಡಿ ಶುದ್ಧ ಕುಡಿಯುವ ನೀರಿನ ಘಟಕಗಳ ಸಂಖ್ಯೆ ಹೆಚ್ಚಿಸಬೇಕು.
-ದೇವರಾಜು, ಪ್ರವಾಸಿಗ

* ಯೋಗೇಶ್‌ ಮಲ್ಲೂರು

Advertisement

Udayavani is now on Telegram. Click here to join our channel and stay updated with the latest news.

Next