Advertisement
ಮಹಾತ್ಮಾ ಗಾಂಧೀಜಿ ಅಹಿಂಸೆ ಮತ್ತು ಶಾಂತಿ ಎಂಬ ಅಸ್ತ್ರದಿಂದಲೇ ಭಾರತಕ್ಕೆ ಸ್ವಾಂತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮಾ ಗಾಂಧಿಯವರ ಜನ್ಮದಿನವನ್ನು ಭಾರತದಾದ್ಯಂತ ಪ್ರತಿವರ್ಷ ಅ.2ರಂದು ಗಾಂಧಿ ಜಯಂತಿ ಅವರ ಜನ್ಮದಿನದ ಸವಿ ನೆನಪಿಗಾಗಿ ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸಲಾಗುತ್ತದೆ.
Related Articles
Advertisement
ಗಾಂಧೀಜಿ ವಸಾಹತುಶಾಹಿಯನ್ನು ವಿರೋಧಿಸುತ್ತ ರಾಷ್ಟ್ರೀಯತಾವಾದಿಯಾಗಿದ್ದು, ಅವರು ಬ್ರಿಟಿಷ್ ಆಳ್ವಿಕೆಯಿಂದ ಭಾರತವನ್ನು ಮುಕ್ತಗೊಳಿಸಲು ಅಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸಿದರು. ಅಲ್ಲದೇ ಪ್ರಪಂಚದಾದ್ಯಂತ ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ವಿವಿಧ ಚಳುವಳಿಗಳಿಗೆ ಪ್ರೇರಕ ಶಕ್ತಿಯಾಗಿದ್ದರು.
ಅಹಿಂಸಾ ಪರಮೋ ಧರ್ಮಃ ಎಂಬುದು ಅಹಿಂಸೆಯನ್ನು ಉತ್ತೇಜಿಸಲು ಬಳಸಲಾಗುವ ಸಂಸ್ಕೃತ ನುಡಿಗಟ್ಟು. ಮಹಾಕಾವ್ಯವಾದ ಮಹಾಭಾರತದಲ್ಲಿ ಈ ನುಡಿಗಟ್ಟು ಕಾಣಿಸಿಕೊಳ್ಳುತ್ತದೆ.ಆದರೆ ಭಾರತಕ್ಕೆ ಸ್ವಾಂತಂತ್ರ್ಯವನ್ನು ಗೆಲ್ಲಲು ಮಹಾತ್ಮಗಾಂಧಿಯವರು ತಮ್ಮ ಅಹಿಂಸಾತ್ಮಕ ಕ್ರಿಯಾವಾದ ಪ್ರಯತ್ನಗಳ ಸಮಯದಲ್ಲಿ ಇದನ್ನು ಬಳಸಿದ್ದರಿಂದ ಇದು ಬಹುಶಃ ಇಂದು ಹೆಚ್ಚು ಪ್ರಸಿದ್ಧವಾಗಿದೆ. ಪದಗುತ್ಛವನ್ನು ವಿಶಿಷ್ಟವಾಗಿ ಅಹಿಂಸೆಯೇ ಅಂತಿಮ ಧರ್ಮ ಎಂದು ಅನುವಾದಿಸಲಾಗುತ್ತದೆ.
ಅಹಿಂಸಾ ಎಂದರೆ ಅಹಿಂಸೆ, ಆದರೆ ಇದು ಯಾವುದೇ ಹಾನಿ ಮಾಡದಿರುವುದು ಎಂದು ಸೂಚಿಸುತ್ತದೆ.ಇದು ದೈಹಿಕ ಹಾನಿಯನ್ನು ಮೀರಿ ಯಾರೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಅಥವಾ ವ್ಯಕ್ತಿಯ ಬಗ್ಗೆ ಅಸತ್ಯವನ್ನು ಬರೆಯುವುದನ್ನು ಒಳಗೊಂಡಿರುತ್ತದೆ. ಪರಮೋ ಎಂದರೆ ಅಂತಿಮ ಅಥವಾ ಉನ್ನತ ಮತ್ತು ಧರ್ಮ ಎಂದರೆ ಕರ್ತವ್ಯ ಎಂದು ಅಕ್ಷರಶಃ ಅರ್ಥೈಸಬಹುದಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಗಾಂಧೀಜಿಯವರು ಅಹಿಂಸೆಯ ಮೇಲೆ ಜೀವನವಿಡೀ ಪ್ರಯೋಗ ಮಾಡಿದ ಸಾಧಕ – ಹರಿಕಾರ, ಆತ್ಮ ಸಾಧಕ. ಅಪ್ಪಟ ಕರ್ಮಯೋಗಿ ಎಂದು ಹೇಳಿದರೆ ತಪ್ಪಾಗಲಾರದು. ಹೀಗಾಗಿ ಯಾರೆ ಆಗಲಿ ಸೇವೆಗಾಗಿ ತಮ್ಮ ಬದುಕನ್ನು ತ್ಯಾಗ ಮಾಡಿ, ಅಹಿಂಸೆಯಿಂದ ಹೋರಾಡುವ ಎಲ್ಲಾ ಹೋರಾಟಗಾರರಿಗೆ ನಾವು ತಲೆಬಾಗಬೇಕು.
ದೇಶದ ಕುರಿತು ಅವರಿಗಿರುವ ಸಮರ್ಪಣಾ ಭಾವ ಮತ್ತು ಅವರ ಧೈರ್ಯವನ್ನು ನಾವೆಂದಿಗೂ ಮರೆಯಬಾರದು ಹಾಗೂ ಅವರನ್ನು ಗೌರವದಿಂದ ಕಾಣಬೇಕು. ಸತ್ಯ, ಶಾಂತಿ, ಅಹಿಂಸೆ ಇವು ಗಾಂಧೀಜಿಯವರು ಪಾಲಿಸಿದ ತತ್ವಗಳಷ್ಟೇ ಅಲ್ಲ, ಅವರ ಬದುಕು ಕೂಡ.ಅವರ ಜಯಂತಿಯಂದು ಬಾಪೂಜಿಯನ್ನು ಗೌರವದಿಂದ ಸ್ಮರಿಸೋಣ.
ಅಂತಾರಾಷ್ಟ್ರೀಯ ಅಹಿಂಸಾ ದಿನ
ಭಾರತೀಯ ಸ್ವಾಂತಂತ್ರ್ಯ ಚಳುವಳಿಯ ನಾಯಕ ಮತ್ತು ಅಹಿಂಸೆಯ ತತ್ವಶಾಸ್ತ್ರ ಮತ್ತು ತಂತ್ರದ ಪ್ರವರ್ತಕ ಮಹಾತ್ಮಾ ಗಾಂಧಿಯವರ ಜನ್ಮದಿನವಾದ ಅ.2 ರಂದು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸಲಾಗುತ್ತದೆ. ಸಾರ್ವಜನಿಕ ಜಾಗೃತಿ ಮತ್ತು ಶಿಕ್ಷಣದ ಮೂಲಕ ಅಹಿಂಸೆಯ ಸಂದೇಶವನ್ನು ಹರಡಲು ಈ ದಿನವನ್ನು ಆಚರಿಸಲಾಗುತ್ತದೆ.
2007 ರಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನು ಪ್ರಾರಂಭಿಸಲು ನಿರ್ಣಯವನ್ನು ಮಂಡಿಸಿತು. ಈ ದಿನವು ಶಿಕ್ಷಣ ಮತ್ತು ಸಾರ್ವಜನಿಕ ಜಾಗೃತಿಯ ಮೂಲಕ ಅಹಿಂಸೆಯ ಅರ್ಥವನ್ನು ವಿಸ್ತರಿಸಲು ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಗಾಂಧಿ ಮತ್ತು ಅವರ ತತ್ವಶಾಸ್ತ್ರದ ಸಾರ್ವತ್ರಿಕ ಗೌರವವನ್ನು ಪ್ರತಿಬಿಂಬಿಸುತ್ತದೆ. ಮೊದಲ ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನು ಅ. 2, 2007 ರಂದು ಆಚರಿಸಲಾಯಿತು.
-ಬಸವರಾಜ ಎಂ. ಯರಗುಪ್ಪಿ
ಶಿರಹಟ್ಟಿ