Advertisement

ಮಾರಿಕುಪ್ಪಂ ರೈಲು ನಿಲ್ದಾಣಕ್ಕೆ  ಹೊಸ ರೂಪ

03:33 PM Dec 19, 2022 | Team Udayavani |

ಕೆಜಿಎಫ್‌: ರೈಲ್ವೆ ನಿಲ್ದಾಣವೆಂದ ಕೂಡಲೇ ಎಲ್ಲೆಂದರಲ್ಲಿ ಕಸದ ರಾಶಿ, ಕುಡಿದು ಬಿಸಾಡಿರುವ ಟೀ, ಕಾಫಿ ಲೋಟಗಳು, ಗೋಡೆ ಮೇಲೆ ಗುಟುಕಾ ಅಗೆದು ಉಗಿದ ಗುರುತು, ದುರ್ನಾತ ಬೀರುವ ಶೌಚಾಲಯ ನೆನಪಿಗೆ ಬರುತ್ತದೆ. ಆದರೆ, ಮಾರಿಕುಪ್ಪಂ ರೈಲ್ವೆ ನಿಲ್ದಾಣಕ್ಕೆ ಬಂದರೆ ಬೆಂಗಳೂರಿನ ಮೆಟ್ರೋ ನಿಲ್ದಾಣಕ್ಕೋ, ಇಲ್ಲ ಪ್ರವಾಸಿ ತಾಣಕ್ಕೋ ಬಂದ ಅನುಭವವಾಗುತ್ತದೆ.

Advertisement

ಮಾರಿಕುಪ್ಪಂ ರೈಲ್ವೆ ನಿಲ್ದಾಣ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದರೂ ಇದುವರೆಗೂ ಸುಣ್ಣ ಬಣ್ಣವನ್ನೇ ನೋಡದೇ ಕೇವಲ ಮಣ್ಣು, ಸೈನಾಯಿಡ್‌ ದಿಬ್ಬಗಳ ದೂಳಿನಿಂದ ತುಂಬಿತ್ತು. ಸ್ಟೇಷನ್‌ ಮಾಸ್ಟರ್‌ ರಮೇಶ್‌ ಗೌಡ ಮುತುವರ್ಜಿಯಿಂದ ಗೋಡೆಗಳು ರಂಗು ರಂಗಿನ ಚಿತ್ರಗಳಿಂದ ಕಂಗೊಳಿಸುತ್ತಿದ್ದು, ನಾಡಿನ ಗತವೈಭವ ಸಾರುವ, ಪ್ರಮುಖ ಪ್ರವಾಸಿ ತಾಣಗಳ ಚಿತ್ರಗಳು, ಅವುಗಳ ಮಾಹಿತಿ ಪ್ರಯಾಣಿಕರನ್ನು ಆಕರ್ಷಿಸುತ್ತದೆ. ಇಲ್ಲಿ ದೊರೆಯುತ್ತಿದ್ದ ಚಿನ್ನವನ್ನು ದೇಶದ ಇತರೆಡೆಗಳಿಗೆ ಸರಾಗವಾಗಿ ಸಾಗಿಸಲು ಮಾರಿಕುಪ್ಪಂ ರೈಲ್ವೆ ನಿಲ್ದಾಣವನ್ನು 1894ರ ಹಿಂದೆ ಬ್ರಿಟಿಷರು ಪ್ರಾರಂಭಿಸಿದ್ದರು. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಕಟ್ಟಡದಲ್ಲಿಯೇ 2007ರವರೆಗೆ ರೈಲ್ವೆ ನಿಲ್ದಾಣದ ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು.

ನವೀಕರಣ ಮಾಡಿರಲಿಲ್ಲ: ಆದರೆ, 15 ವರ್ಷದಿಂದ ಯಾವುದೇ ರೀತಿಯ ನವೀಕರಣ ಕಾಣದೇ ದೂಳು, ಮಣ್ಣು, ಮಸಿ, ಗಲೀಜಿನಿಂದ ಕೂಡಿದ್ದ ರೈಲ್ವೆ ನಿಲ್ದಾಣಕ್ಕೆ 2021ರ ಮಾರ್ಚ್‌ನಲ್ಲಿ ಸ್ಟೇಷನ್‌ ಮಾಸ್ಟರ್‌ ಆಗಿ ಬಂದ ರಮೇಶ್‌ಗೌಡ ನಿಲ್ದಾಣದ ನವೀಕರಣ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹೆಚ್ಚು ಆದಾಯ ಇರುವ ಮಾರ್ಗ: ಎರಡು ಫ್ಲಾಟ್‌ ಫಾರಂ ಹೊಂದಿರುವ ಮಾರಿಕುಪ್ಪಂ ರೈಲ್ವೆ ನಿಲ್ದಾಣವು ನೆರೆಯ ಬಂಗಾರಪೇಟೆಯಿಂದ 16 ಕಿ.ಮೀ. ದೂರ ಹೊಂದಿದ್ದು, ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ ಅತ್ಯಂತ ಕಡಿಮೆ ಉದ್ದ ಇರುವ ಮಾರ್ಗ ಮತ್ತು ಅತಿ ಹೆಚ್ಚು ಆದಾಯ ತರುವ ಮಾರ್ಗವಾಗಿದೆ.

2,500 ಪ್ರಯಾಣಿಕರ ಸಂಚಾರ: ಈ 16 ಕಿ.ಮೀ. ಮಾರ್ಗದಲ್ಲಿ ಮಾರಿಕುಪ್ಪಂ, ಛಾಂಪಿಯನ್‌, ಊರಿಗಾಂ, ಕೋರಮಂಡಲ್‌, ಬೆಮೆಲ್‌ ನಗರ ಮತ್ತು ಚಿನ್ನಕೋಟೆ ಸೇರಿ 6 ನಿಲ್ದಾಣ ಇದ್ದು, 2,500 ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುತ್ತಾರೆ. ಮಾರಿಕುಪ್ಪಂ ರೈಲ್ವೆ ನಿಲ್ದಾಣಕ್ಕೆ ಗಾಂಧಿಯವರು ಸ್ವಾತಂತ್ರ್ಯ ಪೂರ್ವ,1954ರ ಜುಲೈ12 ರಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಇಲ್ಲಿಗೆ ಭೇಟಿ ನೀಡಿದ್ದರು. ರೈಲ್ವೆ ನಿಲ್ದಾಣಕ್ಕೆ ಆಧುನಿಕ ಸ್ಪರ್ಶ ನೀಡಿ, ಜನಸ್ನೇಹಿ ಆಗಿ ಪರಿವರ್ತಿಸಿ ಸ್ಟೇಷನ್‌ ಮಾಸ್ಟರ್‌ ರಮೇಶ್‌ಗೌಡ ಬಗ್ಗೆ ಪ್ರಯಾಣಿಕರು ಮೆಚ್ಚುಕೆ ವ್ಯಕ್ತಪಡಿಸಿದ್ದಾರೆ.

Advertisement

ರೈಲ್ವೆ ನಿಲ್ದಾಣದ ಗೋಡೆಯಲ್ಲಿ ಬರೆದಿರುವ ಚಿತ್ರಗಳು: ಮಾರಿಕುಪ್ಪಂ ರೈಲ್ವೆ ನಿಲ್ದಾಣದ ಗೋಡೆಗಳ ತುಂಬೆಲ್ಲ ಕೆಜಿಎಫ್‌ ಗತವೈಭವವನ್ನು ಸಾರುವ ಚಿನ್ನದ ಗಣಿ, ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಸ್ಥಾನ, ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದ ಕೋಲಾರದ ಅಂತರಗಂಗೆ ಬೆಟ್ಟ, ಮೈಸೂರಿನ ಜಗದ್ವಿಖ್ಯಾತ ಅರಮನೆ, ಗುಜರಾತ್‌ ನರ್ಮದಾ ನದಿ ತೀರದಲ್ಲಿ ನಿರ್ಮಿಸಿರುವ ಸರದಾರ್‌ ವಲ್ಲಭಭಾಯಿ ಪಟೇಲರ ಐಕ್ಯತಾ ಪ್ರತಿಮೆ, ಪುರಿ ಜಗನ್ನಾಥ ಮಂದಿರ, ತಿರುಪತಿ ವೆಂಕಟೇಶ್ವರಸ್ವಾಮಿ ದೇವಸ್ಥಾನ, ತಮಿಳುನಾಡು ವೆಲ್ಲೂರಿನ ಗೋಲ್ಡನ್‌ ಟೆಂಪಲ್‌, ಮುರಡೇಶ್ವರ ದೇವಸ್ಥಾನ, ಪರಿಸರ ಸಂರಕ್ಷಣೆ ಸೇರಿ ಇನ್ನೂ ಹತ್ತು ಹಲವು ಬಣ್ಣದ ಚಿತ್ರಗಳನ್ನು ಮತ್ತು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕವಿಗಳ ಚಿತ್ರಗಳನ್ನು ಬಿಡಿಸಿರುವುದರಿಂದ ಗೋಡೆಗಳು ವಿಶೇಷವಾಗಿ ಆಕರ್ಷಿಸುತ್ತಿವೆ.

ಯಾವುದೇ ಒಂದು ಸ್ಥಳಕ್ಕೆ ಅದರದ್ದೇ ಆದ ಇತಿಹಾಸ ಇರುತ್ತದೆ. ಅದನ್ನು ದೇಶದ ವಿವಿಧ ಭಾಗಗಳಿಂದ ಈ ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಅರಿವು ಮೂಡಿಸುವುದು ಕರ್ತವ್ಯ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು, ಸ್ವಾತಂತ್ರ್ಯ ಹೋರಾಟಗಾರರು ಮೊದಲಾದವರ ಚಿತ್ರಗಳನ್ನು ಬಿಡಿಸಲಾ ಗಿದೆ. ಒಂದೇ ಸೂರಿನಡಿನಲ್ಲಿ ಇವರೆಲ್ಲರ ಬಗ್ಗೆ ರೈಲ್ವೆ ಪ್ರಯಾಣಿಕರಿಗೆ ತಿಳಿಸಿಕೊಡುವುದು ಅಧಿ ಕಾರಿಯಾಗಿ ನನ್ನ ಉದ್ದೇಶವಾಗಿತ್ತು. ಅದನ್ನು ಕೈಲಾದಷ್ಟು ಮಾಡುತ್ತಿದ್ದೇನೆ. ರಮೇಶ್‌ಗೌಡ, ಸ್ಟೇಷನ್‌ ಮಾಸ್ಟರ್‌, ಮಾರಿಕುಪ್ಪಂ

Advertisement

Udayavani is now on Telegram. Click here to join our channel and stay updated with the latest news.

Next