ಕೊಪ್ಪಳ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಪಕ್ಷಪಾತ ಮಾಡುತ್ತಿದ್ದು, ಅವರು ತಮ್ಮ ಪೂರ್ವಾಶ್ರಮದ ಪಕ್ಷ ಮತ್ತು ತಮಗೆ ಅಂತಹ ಹುದ್ದೆ ಕೊಟ್ಟ ಬಿಜೆಪಿ ಪಕ್ಷದ ಬಗ್ಗೆ ಒಲವು ತೋರಿದ್ದಾರೆ. ಆದ್ದರಿಂದ ಕೂಡಲೇ ಅವರನ್ನು ವಾಪಾಸ್ ಕರೆಸಿಕೊಳ್ಳಿ ಎಂಬ ಪತ್ರ ಚಳವಳಿಗೆ ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಚಾಲನೆ ನೀಡಿದರು.
ಕೊಪ್ಪಳದಲ್ಲಿ ರಾಜ್ಯಪಾಲರ ವಿರುದ್ಧ ನಡೆದ ಪ್ರತಿಭಟನೆ ನಂತರ ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಅವರು ಆರಂಭಿಸಿದ ಪತ್ರ ಚಳುವಳಿಗೆ ಚಾಲನೆ ನೀಡಿದ ಸಚಿವರು, ಇದು ವಿಶೇಷವಾದ ಕಾರ್ಯಕ್ರಮವಾಗಿದೆ. ಜನರಿಗೆ ಜಾಗೃತಿ ಮೂಡಿಸುವ ಜೊತೆಗೆ ನಮ್ಮ ಹಕ್ಕನ್ನು ಪ್ರತಿಪಾದಿಸಲು ಸೂಕ್ತವಾಗಿದೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಗಳನ್ನು ಬರೆದು ರಾಷ್ಟಪತಿಗಳನ್ನು ಒತ್ತಾಯಿಸಬೇಕು ಎಂದು ಕರೆ ನೀಡಿದರು.
ಪತ್ರದಲ್ಲಿ ದೇಶದ ಪ್ರಥಮ ಪ್ರಜೆ, ಕಾನೂನು ಸ್ಥಾಪಿತ ಹುದ್ದೆಯಲ್ಲಿರುವ ರಾಷ್ಟ್ರಪತಿಗಳು ಮಾತ್ರ ಪ್ರಸ್ತುತ ದೇಶಕ್ಕೆ ಕೊನೆಯ ಆಸರೆಯಂತೆ ಕಾಣಿಸುತ್ತಿದ್ದೀರಿ. ಅದಕ್ಕಾಗಿ ತಮ್ಮಲ್ಲಿ ಅತ್ಯಂತ ಕಳಕಳಿಯಿಂದ ಕೇಳಿಕೊಳ್ಳುತ್ತೇವೆ, ದಯಮಾಡಿ ಒಂದು ಪಕ್ಷ ಮತ್ತು ಧರ್ಮಕ್ಕೆ ತಮ್ಮ ಹುದ್ದೆಯ ಪಾವಿತ್ರ್ಯತೆ ತೋರುವ ರಾಜ್ಯಪಾಲರನ್ನು ಮರಳಿ ಕರೆಸಿಕೊಳ್ಳುವಂತೆ ಒತ್ತಾಯಿಸುತ್ತೇವೆ ಎಂದಿದ್ದಾರೆ. ರಾಜ್ಯಪಾಲರು ಪ್ರತಿಯೊಬ್ಬರಿಗೂ ಒಂದೇ ಕಾನೂನು, ಒಂದೇ ನಿರ್ಣಯ ಮತ್ತು ಸಮಾನತೆಯಿಂದ ನೋಡಿಕೊಂಡಿದ್ದರೆ ಇಂತಹ ಪತ್ರದ ಅಗತ್ಯವಿರುತ್ತಿರಲಿಲ್ಲ, ಇದು ಅತ್ಯಂತ ಹೇಯ ಮತ್ತು ಭಾರತೀಯರ ನಂಬಿಕೆಗೆ ಸಂವಿಧಾನದ ಆಶಯಕ್ಕೆ ಘಾಸಿ ಉಂಟು ಮಾಡುವ ಸಂಗತಿಯಾಗಿದೆ.
ಕೊಪ್ಪಳ ಜಿಲ್ಲೆಯಿಂದ ಈ ಪತ್ರ ಚಳುವಳಿಯ ಮೂಲಕ ತಮ್ಮ ಅವಗಾಹನೆಗೆ ಒಂದಿಷ್ಟು ಮಾಹಿತಿ ಗಮನಕ್ಕೆ ತರಲು ಬಯಸುತ್ತೇವೆ, ತುರ್ತಾಗಿ ಗಮನಿಸಬೇಕು.ಬಿಜೆಪಿಯೇತರ ಹಲವು ರಾಜ್ಯಗಳಲ್ಲಿ ಅಲ್ಲಿನ ಆಡಳಿತಾರೂಢ ಪಕ್ಷಗಳಿಗೆ ರಾಜ್ಯಪಾಲರು ಅನಾವಶ್ಯಕ ಕಿರುಕುಳ ನೀಡುತ್ತಿದ್ದು ಇದು ತೀವ್ರ ಆಕ್ಷೇಪಾರ್ಹ ವಿಷಯವಾಗಿದೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ಶಕ್ತಿಯುತವಾಗಿ ಬೆಳೆಯುತ್ತಿದ್ದು, ಇಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ. ಕೆ ಶಿವಕುಮಾರ ಅವರ ನೇತೃತ್ವದಲ್ಲಿ ಬಡವರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ರಕ್ಷಣೆ ನೀಡುತ್ತಿದ್ದಾರೆ, ಇದರಿಂದ ಕಂಗಾಲಾಗಿರುವ ಬಿಜೆಪಿ ನಾಯಕರು ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯನವರ ವಿರುದ್ಧದ ಸುಳ್ಳು ಆರೋಪ ಮಾಡಿ ಪ್ರಾಸಿಕ್ಯೂಷನ್ ಗೆ ಅನುಮತಿಸಿದ್ದು ಕೇವಲ ಹಗೆತನಕ್ಕೆ ಎಂದು ಭಾವಿಸಬೇಕಾಗುತ್ತದೆ. ಈ ಮುಂಚೆ ಕುಮಾರಸ್ವಾಮಿ ಅವರ ಮೇಲೆ ಇದ್ದ ಇಂತಹ ವಿಷಯ ಮುಚ್ಚಿಟ್ಟು ಯಾಕೆ ಈಗ ಮಾತ್ರ ಅಷ್ಟು ತುರ್ತಾಗಿ ಅನುಮತಿ ನೀಡಲಾಗಿದೆ ಎಂಬುದು ಗೊತ್ತಾಗಬೇಕು. ಪ್ರಾಸಿಕ್ಯೂಷನ್ ಅನುಮತಿ ಕೊಡುವ ಮೊದಲು ಎರಡು ದಿನ ರಾಜ್ಯದಲ್ಲಿ ಇರದ ರಾಜ್ಯಪಾಲರು ಯಾರನ್ನು ಭೇಟಿ ಮಾಡಿ ಅನುಮತಿ ತೆಗೆದುಕೊಂಡು ಬಂದರು ಎಂಬ ಮರ್ಮವೂ ಸಹ ರಾಜ್ಯಕ್ಕೆ ಗೊತ್ತಾಗಬೇಕು, ರಾಜ್ಯದ ಶಾಂತಿ ಸುವ್ಯಸ್ಥೆಯ ದೃಷ್ಟಿಯಿಂದ ರಾಜ್ಯಪಾಲರನ್ನು ಕೂಡಲೆ ಬದಲಿಸಲು ಆಗ್ರಹಿಸುತ್ತೇವೆ. ರಾಜ್ಯಪಾಲರು ಬಿಜೆಪಿಯ ಏಜೆಂಟ್ ಆಗಿ ಇಡಿ, ಐಟಿ ನಂತರ ಮತ್ತೊಂದು ಹೆದರಿಸುವ ದಾಳವಾಗಿದ್ದಾರೆ ಎನ್ನುವದು ಅತ್ಯಂತ ಸ್ಪಷ್ಟ ಮತ್ತು ನಾಚಿಕೆಗೇಡಿತನದ ಸಂಗತಿ. ಕೇವಲ ಬಿಜೆಪಿಯೇತರ ಪಕ್ಷಗಳ ನಾಯಕರು ಮಾತ್ರವೇ ಇವರ ಕಣ್ಣಿಗೆ ಕಾಣುತ್ತಾರೆ ಎಂಬುದನ್ನು ತಾವು ಪರಿಶೀಲಿಸಿ ದೇಶದಲ್ಲಿ ಸಮಾನತೆಗಾಗಿ ಒತ್ತಾಯಿಸಿ ಪತ್ರ ಬರೆಯಲಾಗಿದೆ. ಕೂಡಲೇ ಇರದ ಬಗ್ಗೆ ಗಮನ ಹರಿಸಬೇಕು ಎಂದು ಪತ್ರ ಚಳುವಳಿಯಲ್ಲಿ ಒತ್ತಾಯಿಸಲಾಗಿದೆ.
ಪತ್ರ ಚಳುವಳಿಯಲ್ಲಿ ಸಂಸದ ಕೆ. ರಾಜಶೇಖರ್ ಹಿಟ್ನಾಳ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಕಾಂಗ್ರೆಸ್ ಮುಖಂಡರು ಗ್ಯಾರಂಟಿ ಸಮಿತಿ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ, ಮುಖಂಡರಾದ ಮಂಜುನಾಥ ಗೊಂಡಬಾಳ, ವಿಶಾಲಾಕ್ಷಿ ತಾವರಗೇರಾ, ಸೌಭಾಗ್ಯ ಲಕ್ಷ್ಮಿ ಗೊರವರ್, ರಜಿಯಾ ಮನಿಯಾರ್, ಭಾಷಾ ಹಿರೇಮನಿ, ಲಿಂಗರಾಜ ಅಗಳಕೇರಿ, ಜಿಲಾನ್ ಕಿಲ್ಲೇದಾರ್, ಜಾಫರ್ ತಟ್ಟಿ ಅನೇಕರು ಇದ್ದರು.