ಚೀನದ ಕುತಂತ್ರಿ ಬುದ್ಧಿ ಇಂದಿನದ್ದೇನಲ್ಲ. ಅದು ಹಿಂದಿನಿಂದಲೂ ಸಾಬೀತಾಗಿದೆ. ಹಿಂದಿ-ಚೀನೀ ಭಾಯಿಭಾಯಿ ಎಂಬ ಭಾರತದ ಉದ್ಘೋಷ ಮತ್ತು ಇದಾದ ಅನಂತರದಲ್ಲಿ ಚೀನದ ಆಡಳಿತ ಭಾರತದ ಬೆನ್ನಿಗೆ ಇರಿದ ಇತಿಹಾಸ ದೇಶದ ಜನರಲ್ಲಿ ಅಳಿಯದಂತೆ ಹಾಗೆಯೇ ಉಳಿದುಕೊಂಡಿದೆ. ಈಗಲೂ ಅಷ್ಟೇ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ತನ್ನ ಮಾತುಕತೆಯ ನಾಟಕವನ್ನು ಪ್ರದರ್ಶಿಸಿಕೊಂಡು, ವಿಸ್ತರಣಾವಾದವನ್ನು ಹಾಗೆಯೇ ಮುಂದುವರಿಸಿಕೊಂಡು ಬರುತ್ತಿದೆ.
ಗಾಲ್ವಾನ್‌ನಲ್ಲಿನ ಘರ್ಷಣೆ ಅನಂತರ ಭಾರತ ಮತ್ತು ಚೀನ ನಡುವೆ ಸೇನಾ ವಾಪಸಾತಿ ಸಂಬಂಧ ಈಗಾಗಲೇ 13 ಸುತ್ತಿನ ಮಾತುಕತೆಗಳು ಮುಗಿದಿವೆ. ರವಿವಾರ 13ನೇ ಸುತ್ತಿನ ಮಾತುಕತೆ ನಡೆದಿದ್ದು, ಚೀನದ ಹಠಮಾರಿ ಧೋರಣೆಯಿಂದಾಗಿ ಮಾತುಕತೆ ಮುರಿದುಬಿದ್ದಿದೆ. ದೌಲತ್ ಬೇಗ್, ಮತ್ತು ಹಾಟ್‌ಸ್ಪ್ರಿಂಗ್ ಪ್ರದೇಶಗಳಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂಬ ಭಾರತದ ಕಮಾಂಡರ್ ಅಧಿಕಾರಿಗಳ ಸಲಹೆಗೆ ಚೀನ ಒಪ್ಪಿಗೆ ನೀಡಿಲ್ಲ. ಅಲ್ಲದೇ ಪದೇ ಪದೆ ಚೀನ ಸೇನೆ ಭಾರತದ ಗಡಿಯೊಳಗೆ ಅಕ್ರಮವಾಗಿ ಪ್ರವೇಶ ಮಾಡುತ್ತಿರುವ ಬಗ್ಗೆಯೂ ಸೇನಾಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆಯೂ ಚೀನ ತುಟಿ ಬಿಚ್ಚಿಲ್ಲ.
ರವಿವಾರದ ಮಾತುಕತೆ ವೇಳೆ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು, ಭಾರತದೊಳಗೆ ನುಸುಳುವ ಯಾವುದೇ ಹುಚ್ಚು ಸಾಹಸಗಳನ್ನು ಮಾಡಬಾರದು ಎಂದು ಕಮಾಂಡರ್‌ಗಳ ಮಟ್ಟದಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಸೇನಾಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಗಡಿಯಲ್ಲಿ ಉದ್ಧಟತನ ಸಲ್ಲದು ಎಂದೂ ಎಚ್ಚರಿಕೆ ನೀಡಿದ್ದಾರೆ. ಆದರೆ ಚೀನಗೆ ಈ ಮಾತುಗಳು ರುಚಿಸಿಯೇ ಇಲ್ಲ. ಇದಕ್ಕೆ ಬದಲಾಗಿ ಭಾರತ, ಅವಾಸ್ತವಿಕ ಮತ್ತು ಪಾಲಿಸಲು ಅಸಾಧ್ಯವಾದ ಬೇಡಿಕೆಗಳನ್ನು ಭಾರತ ಮುಂದಿಟ್ಟಿತು. ಹೀಗಾಗಿ ಸಭೆ ವಿಫಲವಾಗಿದೆ ಎಂದು ಚೀನ ಹೇಳಿಕೊಂಡಿದೆ. ಒಂದು ರೀತಿಯಲ್ಲಿ ಮತ್ತೆ ತನ್ನ ಭಂಡವಾದವನ್ನು ಮುಂದಿಟ್ಟಿದೆ.
ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ, ಚೀನಗೆ ಶಾಂತಿ ಮಾತುಕತೆ ಬೇಕಾಗಿಲ್ಲ. ಇನ್ನೂ ವಿಸ್ತರಣಾವಾದ ನಡೆಸಿಕೊಂಡು ಭಾರತದ ಜತೆ ಸಂಘರ್ಷ ಮುಂದುವರಿಸಿಕೊಂಡು ಹೋಗುವ ಎಲ್ಲ ಇರಾದೆಗಳೂ ಅದಕ್ಕಿದೆ. ಜತೆಗೆ ಇತ್ತೀಚೆಗಷ್ಟೇ ಅಕ್ರಮವಾಗಿ ಭಾರತದೊಳಗೆ ನುಗ್ಗಿದ್ದ 200 ಚೀನದ ಸೈನಿಕರನ್ನು ಭಾರತ ಬಂಧಿಸಿ ಬಳಿಕ ಬಿಟ್ಟು ಕಳಿಸಿದ ಅಪಮಾನವೂ ಚೀನಗೆ ಇದೆ. ಇದರಿಂದ ಕುಗ್ಗಿದಂತಿರುವ ಚೀನ ರವಿವಾರ ಮಾತುಕತೆಯಲ್ಲಿ ಯಾವುದೇ ಆಸಕ್ತಿಯನ್ನೂ ತೋರಲಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ:ಹಣ ಕಂಡ್ರೆ ಬಾಯಿಬಿಡುವ ಕಿಮ್! ಬಿಬಿಸಿ ಸಂದರ್ಶನದಲ್ಲಿ ಸೇನಾ ಕಮಾಂಡರ್ ಮಾಹಿತಿ
ಇದುವರೆಗೆ ಭಾರತ, ಚೀನದ ಗಡಿಯೊಳಗೆ ಪ್ರವೇಶಿಸಿಲ್ಲ, ಈ ಹಿಂದೆ ಆಗಿರುವಂಥ ಒಪ್ಪಂದಗಳನ್ನು ಪಾಲನೆ ಮಾಡಿಕೊಂಡೇ ಬರುತ್ತಿದೆ. ಆದರೆ ಚೀನ ಮಾತ್ರ ಪದೇ ಪದೆ ಹಿಂದಿನ ಒಪ್ಪಂದಗಳನ್ನು ಉಲ್ಲಂ ಸುತ್ತಾ ಕಾಲು ಕೆರೆದುಕೊಂಡೇ ಬರುತ್ತಿದೆ. ರಕ್ಷಣ ತಜ್ಞರ ಪ್ರಕಾರವೂ, ಚೀನಗೆ ಯಾವುದೇ ಮಾತುಕತೆಯಾಗಲಿ, ಶಾಂತಿಯಾಗಲಿ ಬೇಕಾಗಿಲ್ಲ. ಸದಾ ಕಾಲು ಕೆರೆದುಕೊಂಡು ಜಗಳವಾಡುವುದೇ ಆ ದೇಶದ ಮಾನಸಿಕ ಸ್ಥಿತಿಯಾಗಿದೆ ಎಂದು ಹೇಳುತ್ತಾರೆ. ಒಟ್ಟಾರೆಯಾಗಿ ಮಾತುಕತೆಯ ನಾಟಕವಾಡುವುದಕ್ಕಿಂತ, ನೈಜ ಉದ್ದೇಶದಿಂದ ಶಾಂತಿ ಸ್ಥಾಪನೆಗಾಗಿ ಚೀನ ಮುಂದೆ ಬರುವುದು ಮುಖ್ಯ. ಇದಕ್ಕೆ ಬದಲಾಗಿ ಕಾಟಾಚಾರದ ಸಭೆಗಳಿಂದ ಏನನ್ನೂ ಸಾಧಿಸಲು ಸಾಧ್ಯವಾಗಲ್ಲ ಎಂಬುದು ಚೀನದ ಗಮನದಲ್ಲಿ ಇರಬೇಕು.