ಹಸಿದ ಹೊಟ್ಟೆ, ಖಾಲಿ ಜೇಬು ಬದುಕಿನಲ್ಲಿ ಅನೇಕ ಪಾಠಗಳನ್ನು ಕಲಿಸುತ್ತದೆ ಎಂಬ ಮಾತಿದೆ. ಆದರೆ, ಅಂದು ನನ್ನ ಹೊಟ್ಟೆಯೂ ಹಸಿದಿರಲಿಲ್ಲ. ಜೇಬೂ ಖಾಲಿಯೂ ಆಗಿರಲಿಲ್ಲ. ಆದರೂ ಒಂದು ತುಂಡು ಫಿಶ್ ಫ್ರೈ, ಶಿಸ್ತು ಎನ್ನುವ ಬಹುದೊಡ್ಡ ಪಾಠ ಕಲಿಸಿತ್ತು…
ಕೆಲವೊಮ್ಮೆ ಚಿಕ್ಕ ಚಿಕ್ಕ ವಿಷಯಗಳು ಕೂಡ ಬದುಕಿನಲ್ಲಿ ಅತಿ ದೊಡ್ಡ ಪಾಠ ಕಲಿಸುತ್ತವೆ. ಅದರಲ್ಲೂ ಈ ವಿದ್ಯಾರ್ಥಿ ಜೀವನವೆಂದರೆ ಕೇಳಬೇಕಾ? ಶಿಲ್ಪಿ ಕೆತ್ತುತ್ತಿರುವ ಕಲ್ಲಿನಂತೆ ವಿದ್ಯಾರ್ಥಿಗಳು. ಕಲ್ಲು ಒಂಚೂರು ಹೆಚ್ಚು ಕಮ್ಮಿಯಾದರೂ ಮೂರ್ತಿ ಭಗ್ನವಾಗುವುದು ಗ್ಯಾರೆಂಟಿ. ನಾವು ಯಾವಾಗ, ಯಾರೊಂದಿಗೆ, ಯಾವ ರೀತಿ ನಡೆದುಕೊಳ್ಳಬೇಕು ಎಂದು ನನಗೆ ನಡವಳಿಕೆಯ ಪಾಠ ಕಲಿಸಿದ ಉಳಿಪೆಟ್ಟಿನ ಕಥೆ ಇದು. ಒಂದೇ ಒಂದು ಫಿಶ್ ಫ್ರೈ ತುಂಡು ನನ್ನ ಯೋಚನೆಯ ದಿಕ್ಕನ್ನೇ ಬದಲಿಸುತ್ತೆ ಎಂದು ಯಾವತ್ತೂ ಎಣಿಸಿರಲಿಲ್ಲ.
ಅಂದ ಹಾಗೆ, ಈ ಇಡೀ ಸಿನಿಮಾ ಚಿತ್ರೀಕರಣಗೊಂಡಿದ್ದು ನಮ್ಮ ಬಿ.ಎಡ್. ಕ್ಲಾಸ್‌ರೂಮ್‌ನ ಸಿಸಿ ಕ್ಯಾಮೆರಾದಲ್ಲಿ! ನಾನು ಕಾಲೇಜಿಗೆ ಕಾಲಿಟ್ಟು ಸರಿಯಾಗಿ ಒಂದು ವಾರವೂ ಕಳೆದಿರಲಿಲ್ಲ. ಆಗಲೇ ನನ್ನಿಂದ ಬಹುದೊಡ್ಡ ರಾದ್ಧಾಂತವೊಂದು ನನಗರಿವಿಲ್ಲದೇ ಘಟಿಸಿ ಹೋಗಿತ್ತು. ಒಂದು ಮಧ್ಯಾಹ್ನದ ಊಟದ ಬ್ರೇಕ್‌ನ ಸಮಯದಲ್ಲಿ ಹಾಸ್ಟೆಲ್‌ನಲ್ಲಿ ಬೇಗ ಊಟ ಮುಗಿಸಿಕೊಂಡು ಕಾಲೇಜಿಗೆ ಬಂದೆ. ನನ್ನ ಸೀನಿಯರ್ ಗುಂಪೊಂದು ಅವರ ಕ್ಲಾಸ್‌ರೂಮ್‌ನಲ್ಲಿ ಕುಳಿತು ಊಟ ಮಾಡುತ್ತಿದ್ದದನ್ನು ಕಂಡು ಒಳಗೆ ಹೋದೆ. ಪ್ರೀತಿಯಿಂದ ಮಾತನಾಡಿಸಿದ ಅವರು, ಊಟ ಮಾಡುವಂತೆ ಹೇಳಿದರು. ಸೀನಿಯರ್ ಒಬ್ಬರು ತಮ್ಮ ಮನೆಯಿಂದ ತಂದಿದ್ದ ಫಿಶ್ ಫ್ರೈ ಕೊಡಲು ಮುಂದಾದರು. ಆಗ ತಾನೇ ಊಟ ಮುಗಿಸಿ ಬಂದಿದ್ದ ನಾನು ಸಹಜವಾಗಿಯೇ “ಬೇಡ’ ಎಂದೆ. ಆದರೆ, ಅವರು ಜೂನಿಯರ್ ಎನ್ನುವ ಆತ್ಮೀಯತೆಯಿಂದ ಒಂದು ಸಣ್ಣ ಫ್ರೈ ಪೀಸನ್ನು ತಿನ್ನಿಸಿದರು. ಇಷ್ಟೇ ಸಾಕಾಗಿತ್ತು ನೋಡಿ ನನ್ನ ಗ್ರಹಚಾರ ಕೆಡಲು.
ನಮ್ಮ ಪ್ರಿನ್ಸಿಪಾಲ್ ಈ ಘಟನೆಯಿಂದ ಕೆಂಡಾಮಂಡಲರಾಗಿದ್ದರು. ಬಿಗ್‌ಬಾಸ್ ಮನೆಯ ಹಾಗೆ ಕ್ಲಾಸ್‌ರೂಮಿನ ಸಿಸಿ ಕ್ಯಾಮೆರಾದಲ್ಲಿ ಕೈತುತ್ತು ತಿನ್ನಿಸಿದ ದೃಶ್ಯವನ್ನು ನೋಡಿ, ಮರುದಿನವೇ ನಮ್ಮನ್ನೆಲ್ಲ ಕನ್ಫೆಷನ್ ರೂಮ್‌ಗೆ ಕರೆಸಿಯೇಬಿಟ್ಟರು. ನಮ್ಮೆಲ್ಲ ಲೆಕ್ಚರರ್, ಆಫೀಸ್ ಬ್ಯಾರಿಯರ್‌ನ ಸಮ್ಮುಖದಲ್ಲಿಯೇ ನಡೆಯಿತು, ಮಹಾಮಂಗಳಾರತಿ ಕಾರ್ಯಕ್ರಮ. ಅರೆ! ಕೈತುತ್ತು ತಿನ್ನಿಸಿದ್ದರಲ್ಲೇನಿದೆ ತಪ್ಪು ಎಂದು ನಿಮಗೆ ಅನಿಸುತ್ತಿರಬಹುದು. ನನಗೂ ಕೂಡ, ಇದರಲ್ಲೇನಿದೆ ಅಂಥ ಅಪರಾಧ. ನಮ್ಮದು 21ನೇ ಶತಮಾನದ 5ಜಿ ಸ್ಪೀಡ್‌ನಲ್ಲಿ ಓಡುತ್ತಿರುವ ಬದುಕು. ಹೀಗಿರುವಾಗ ಜಸ್ಟ್ ಒಂದು ಕೈತುತ್ತು ತಿಂದಿದ್ದು ತಪ್ಪಾ ಎಂದು ಅನಿಸಿತ್ತು. ಆದರೆ, ನಮ್ಮ ಪ್ರಿನ್ಸಿಪಾಲರ ದೃಷ್ಟಿಕೋನ ಹಾಗೂ ಅವರ ನಿಲುವು ಬೇರೆಯೇ ಆಗಿತ್ತು. ಆಧುನಿಕತೆಯ ಭರಾಟೆಯಲ್ಲಿ ಇಂಥ ವರ್ತನೆ ಅವರಿಗೆ ಕಿಂಚಿತ್ತೂ ಹಿಡಿಸಿರಲಿಲ್ಲ. “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ’ ಎಂದು ಪ್ರಾರಂಭದಲ್ಲಿಯೇ ತಪ್ಪನ್ನು ನಮ್ಮ ಅರಿವಿಗೆ ತಂದು, ಬುದ್ಧಿ ಹೇಳಿ ವಾರ್ನ್ ಮಾಡಿದ್ದರು. ರುಚಿ ರುಚಿಯಾದ ಮೀನು ಚಪ್ಪರಿಸಿದ್ದ ನನ್ನ ಪರಿಸ್ಥಿತಿ, ಅಂದು ಕಾದ ಬಾಣಲೆಗೆ ಹಾಕಿದ ಮೀನಿನಂತಾಗಿದ್ದಂತೂ ಸತ್ಯ!
ಅದಾದ ಕೆಲ ದಿನಗಳವರೆಗೆ ನಾನು ಮಾಡಿದ್ದು ತಪ್ಪೇ ಅಲ್ಲ ಎಂದು ಒಳಗೊಳಗೇ ಪ್ರತಿಭಟಿಸಿದೆ. ಆದರೆ, ದಿನಗಳೆದಂತೆ ನಮ್ಮ ಪ್ರಿನ್ಸಿಪಾಲರ ಮಾತು ಅರ್ಥವಾಗತೊಡಗಿತು. ನಾನಿಂದು ಬದಲಾದ ಆಧುನಿಕ ಸಮಾಜದಲ್ಲಿ “ಐ ಡೋಂಟ್ ಕೇರ್’ ಎನ್ನುವ ವ್ಯಕ್ತಿತ್ವದೊಂದಿಗೆ ಬದುಕುತ್ತಿದ್ದೇನೆ ಎಂದು ಬೀಗಬಹುದು. ಆದರೆ, ಸುಸಂಸ್ಕೃತ ಸಮಾಜದಲ್ಲಿ ಬದುಕುತ್ತಿದ್ದೇನೆ ಎಂಬ ಕನಿಷ್ಠ ಪ್ರಜ್ಞೆಯನ್ನು ಮರೆಯಬಾರದು. ಭವಿಷ್ಯದಲ್ಲಿ ಶಿಕ್ಷಕರಾಗುವ ಹಾದಿಯಲ್ಲಿರುವ ನಾವು ಇಂಥ ಸೂಕ್ಷ್ಮಗಳನ್ನು ಅಗತ್ಯವಾಗಿ ಅರಿತಿರಬೇಕು. ಕ್ಲಾಸ್‌ರೂಮಿನಲ್ಲಿ ಕೈತುತ್ತು ತಿಂದಿದ್ದು, ತಿನ್ನಿಸಿದ್ದು ನಮ್ಮ ಪಾಲಿಗೆ ತಪ್ಪಲ್ಲದಿರಬಹುದು. ಆದರೆ, ಸಮಾಜ ನೋಡುವ ರೀತಿಯೇ ಬೇರೆ. ಅವರಲ್ಲಿ ಶಿಸ್ತು ಮೂಡಿಸುವ, ತಪ್ಪನ್ನು ತಿದ್ದಿ ಸರಿದಾರಿಗೆ ತರಬೇಕಿರುವ ನಾವೇ ಹೀಗೆ ಅಶಿಸ್ತಿನಿಂದ ವರ್ತಿಸಿದರೆ ಹೇಗೆ ಎನ್ನುವುದು ಪ್ರಾಂಶುಪಾಲರ ಕಾಳಜಿಯಾಗಿತ್ತು.
ಅದೇನೇ ಇರಲಿ ಹಸಿದ ಹೊಟ್ಟೆ, ಖಾಲಿ ಜೇಬು ಬದುಕಿನಲ್ಲಿ ಅನೇಕ ಪಾಠಗಳನ್ನು ಕಲಿಸುತ್ತದೆ ಎಂಬ ಮಾತಿದೆ. ಆದರೆ, ಅಂದು ನನ್ನ ಹೊಟ್ಟೆಯೂ ಹಸಿದಿರಲಿಲ್ಲ. ಜೇಬೂ ಖಾಲಿಯೂ ಆಗಿರಲಿಲ್ಲ. ಆದರೂ ಒಂದು ತುಂಡು ಫಿಶ್ ಫ್ರೈ, ಶಿಸ್ತು ಎನ್ನುವ ಬಹುದೊಡ್ಡ ಪಾಠ ಕಲಿಸಿತ್ತು.
ಮಹೇಶ್ ಎಂ.ಸಿ., ಉಜಿರೆ