ಚಿಂಚೋಳಿ: ಪ್ರಸಕ್ತ ಸಾಲಿನಲ್ಲಿ ಮುಂಗಾರಿನ ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ. ಬಿತ್ತನೆ ಬೀಜ, ಗೊಬ್ಬರ ಬೆಲೆ ಕಳೆದ ವರ್ಷಕ್ಕಿಂತ ಹೆಚ್ಚಾಗಿದ್ದರೂ ರೈತರು ತಮ್ಮ ಜಮೀನಿನಲ್ಲಿ ಬೀಜ ಬಿತ್ತನೆಗಾಗಿ ಕೃಷಿ ಸಲಕರಣೆಗಳನ್ನು ಬಾಡಿಗೆ ಪಡೆದುಕೊಳ್ಳುತ್ತಿದ್ದಾರೆ.
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕೃಷಿಕರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಕೃಷಿ ಚಟುವಟಿಕೆ ಕೈಗೊಳ್ಳಲು ರೈತರು ಖಾಸಗಿ ಮತ್ತು ಫೈನಾನ್ಸ್‌ಗಳಲ್ಲಿ ಸಾಲಕ್ಕಾಗಿ ಕೈ ಚಾಚುತ್ತಿದ್ದಾರೆ. ತಾಲೂಕಿನಲ್ಲಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಧಾರಾಕಾರ ಮಳೆ ಸುರಿದಿತ್ತು. ಇದರಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹೆಸರು, ಉದ್ದು, ತೊಗರಿ ಬೆಳೆಗಳಿಗೆ ಸಾಕಷ್ಟು ಹಾನಿ ಉಂಟಾಗಿತ್ತು. ಮುಲ್ಲಾಮಾರಿ ನದಿ ನೀರಿನ ಪ್ರವಾಹದಿಂದ ನದಿ ದಡದಲ್ಲಿರುವ ರೈತರ ಹೊಲಗಳಿಗೆ ನೀರು ನುಗ್ಗಿ, ಅಧಿ ಕ ಪ್ರಮಾಣದಲ್ಲಿ ಕೈಗೆ ಬಂದ ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವು.
ಹೀಗಾಗಿ ರೈತರು ಸಾಲದ ಸುಳಿಯಲ್ಲಿ ಸಿಲುಕಿವಂತೆ ಆಗಿದೆ. ಪ್ರಸಕ್ತ ಸಾಲಿನಲ್ಲಿ ರೈತರು ತಮ್ಮ ಹೊಲಗಳಲ್ಲಿ ಹೆಸರು, ಉದ್ದು, ತೊಗರಿ, ಹೈಬ್ರಿಡ್ ಜೋಳ, ಮೆಕ್ಕೆಜೋಳ, ಸೋಯಾಬಿನ್ ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಟ್ರಾÂಕ್ಟರ್ ಮೂಲಕ ಪ್ರತಿ ಎಕರೆಯಲ್ಲಿ ಬಿತ್ತನೆ ಮಾಡಬೇಕಾದರೆ ಒಂದು ಸಾವಿರ ರೂ. ನೀಡಬೇಕು.
ಬಿತ್ತನೆಗಾಗಿ ಎತ್ತುಗಳು ಇಲ್ಲದ ರೈತರು ಟ್ರಾಕ್ಟರ್‌ಗೆ ದುಬಾರಿ ಬಾಡಿಗೆ ನೀಡಿ, ಬೀಜ ಬಿತ್ತನೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇಲ್ಲಿದೆ. ಬಿತ್ತನೆ ಬೀಜ ಬಿತ್ತುವ ಕೂಲಿ ಕಾರ್ಮಿಕರಿಗೆ ಒಂದು ದಿವಸಕ್ಕೆ 500ರೂ. ನೀಡಬೇಕಾಗಿದೆ. ಹೊಲದಲ್ಲಿದ್ದ ಕಸ-ಕಡ್ಡಿ ತೆಗೆದು ಹಾಕಲು ಮಹಿಳೆಯರಿಗೆ 200ರೂ. ಬಾಡಿಗೆ ನೀಡಬೇಕಾಗುತ್ತದೆ. ಸಣ್ಣ ಹಾಗೂ ಮಧ್ಯಮ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆಗೋಸ್ಕರ ಲಾಕ್ ಡೌನ್ ಸಮಯದಲ್ಲಿ ಕೈಯಲ್ಲಿ ಹಣವಿಲ್ಲದ ಕಾರಣ ಖಾಸಗಿ ಸಾಲ ಮತ್ತು ಫೈನಾನ್ಸ್‌ಗಳಿಗೆ ಕೈಚಾಚುವಂತಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಬ್ಯಾಂಕ್ ಮತ್ತು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಪಿಕಾರ್ಡ್ ಬ್ಯಾಂಕುಗಳು ಕೃಷಿ ಸಾಲ ನೀಡದ ಕಾರಣ ತಮ್ಮ ಮನೆಗಳಲ್ಲಿದ್ದ ಚಿನ್ನದ ಆಭರಣಗಳನ್ನು ಅಡವಿಟ್ಟು ಸಾಲ ಪಡೆದುಕೊಂಡು ಬಿತ್ತನೆ ಬೀಜಗೊಬ್ಬರ ಖರೀದಿಸುವಂತಾಗಿದೆ. ಅಲ್ಲದೇ ಟ್ರಾÂಕ್ಟರ್ ಬಾಡಿಗೆ, ಕೂಲಿಕಾರರ ಕೂಲಿ ನೀಡಲು ರೈತರು ಪರದಾಡುವಂತಾಗಿದೆ.