ಹುಬ್ಬಳ್ಳಿ: “ಆತನಿಗಿರುವುದು ಕೇವಲ ಒಂದೂವರೆ ಎಕರೆ ಜಮೀನು. ಆಸ್ಪತ್ರೆಯಲ್ಲಿ ನಡೆದ ಒಂದು ಘಟನೆ ಆತನನ್ನು ಬೆಲ್ಲ ತಯಾರಿಕೆಗೆ ದೂಡಿತು. ಇಂದು ಅದೇ ರೈತ ಸುಮಾರು 11 ತರಹ ಸ್ವಾದಗಳ ರಾಸಾಯನಿಕ ಮುಕ್ತ ಬೆಲ್ಲ ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ನಿತ್ಯ ಅಂದಾಜು 2.5 ಟನ್ ಬೆಲ್ಲ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ರಾಸಾಯನಿಕ ಮುಕ್ತ ಬೆಲ್ಲಕ್ಕೆ ಬೇಡಿಕೆ ಹೆಚ್ಚುತ್ತಿದೆ. ಬೆಲ್ಲ ತಯಾರಿಕೆಯಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಸಮೀಪದ ಸಂಗಾನಟ್ಟಿಯ ಮಹಾಲಿಂಗಪ್ಪ ಬಸವಂತಪ್ಪ ಇಟ್ನಾಳ ಎಂಬ ರೈತ 11 ತರಹ ಸ್ವಾದಗಳ ಬೆಲ್ಲ ತಯಾರಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ದೊರೆಯುವ ಸಾಮಾನ್ಯ ಬೆಲ್ಲದಲ್ಲಿ ಸಕ್ಕರೆ ಹಾಗೂ ರಾಸಾಯನಿಕ ಬೆರಕೆ ಅಧಿಕವಾಗಿರುತ್ತಿದ್ದು, ಬೆಲ್ಲ ಬೆಲ್ಲವಾಗಿಯೇ ಇರಬೇಕು ಎಂಬ ಉದ್ದೇಶದಿಂದ ಆರಂಭಿಸಿದ ಬೆಲ್ಲ ತಯಾರಿಕೆ ಕಾಯಕ ಇದೀಗ ಹಲವು ಪ್ರಕಾರಗಳನ್ನು ಪಡೆದುಕೊಂಡಿದೆ. ಪರಿಶ್ರಮಕ್ಕೆ ತಕ್ಕಂತೆ ಬೇಡಿಕೆಯೂ ಹೆಚ್ಚತೊಡಗಿದೆ. ಬೆಲ್ಲ ತಯಾರಿಕೆ ಜತೆಗೆ ಸುಮಾರು 30ಕ್ಕೂ ಹೆಚ್ಚು ದೇಸಿ ಹಸುಗಳನ್ನೂ ಸಾಕುತ್ತಿದ್ದಾರೆ.
ಬದುಕು ಬದಲಿಸಿದ ಘಟನೆ: ತಮ್ಮ ಮಗುವನ್ನು ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಿಸಿದ್ದಾಗ ಮಾರುಕಟ್ಟೆಯಲ್ಲಿನ ಬೆಲ್ಲ ಸೇವನೆಯಿಂದ ಪಕ್ಕದ ಮಗುವಿಗಾದ ಅನಾಹುತ ಕಂಡ ಮಹಾಲಿಂಗಪ್ಪ ವೈದ್ಯರೊಂದಿಗೆ ಚರ್ಚಿಸಿದ್ದರು. ರಾಸಾಯನಿಕಯುಕ್ತ ಬೆಲ್ಲದಲ್ಲಿನ ಹಾನಿಕಾರಕ ಅಂಶಗಳ ಬಗ್ಗೆ ವೈದ್ಯರು ಹೇಳಿದ್ದರು. ಅಂದೇ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ನಿರ್ಧಾರ ಕೈಗೊಂಡಿದ್ದರು. ಪಿತ್ರಾರ್ಜಿತ ಆಸ್ತಿ ಎಂದು ಬಂದಿದ್ದು ಕೇವಲ ಅರ್ಧ ಎಕರೆ ಹೊಲ, ಒಂದು ಪಂಕ್ಚರ್ ಅಂಗಡಿ ಮಾತ್ರ. ಪಂಕ್ಚರ್ ಅಂಗಡಿ ಕೆಲಸ ಮಾಡುತ್ತಲೇ ಒಂದು ಎಕರೆ ಜಮೀನು ಸೇರಿಸಿದ್ದರಿಂದ ಒಟ್ಟು ಒಂದೂವರೆ ಎಕರೆ ಜಮೀನು ಆಗಿತ್ತು. 10ನೇ ತರಗತಿಯಲ್ಲಿ ಅನುತ್ತೀರ್ಣರಾಗಿ ಪಂಕ್ಚರ್ ಅಂಗಡಿ ಕೆಲಸದಲ್ಲಿ ತೊಡಗಿದ್ದ ಮಹಾಲಿಂಗಪ್ಪ ಅವರು, ಬೆಲ್ಲ ತಯಾರಿಕೆಗೆ ಮುಂದಾದಾಗ ಅನೇಕ ಸವಾಲು-ಸಂಕಷ್ಟ ಎದುರಾದರೂ ಎದೆಗುಂದದೆ, ಮುಂದೆ ಒಳ್ಳೆಯದಾಗುತ್ತದೆ ಎಂಬ ಆಶಾಭಾವನೆಯೊಂದಿಗೆ ಮುಂದಡಿ ಇರಿಸಿದ್ದರು.
ತುಂಡು ಜಮೀನಿನಲ್ಲೇ ಸಾಧನೆ: ಬೆಲ್ಲ ತಯಾರಿಕೆಗೆ ಮುಂದಾದಾಗ ಇರುವ ಒಂದೂವರೆ ಎಕರೆ ಜಮೀನಿನಲ್ಲಿ ಸಾಧ್ಯವೇ ಎಂಬ ಆತಂಕದಲ್ಲೇ ಮುಂದಡಿ ಇರಿಸಿದ್ದರು. ಛಲ ಮತ್ತು ಪರಿಶ್ರಮ ಇದ್ದರೆ ಅಸಾಧ್ಯವೂ ಸಾಧ್ಯವಾಗಲಿದೆ ಎಂಬುದಕ್ಕೆ ಉದಾಹರಣೆ ರೂಪದಲ್ಲಿ ಯಶಸ್ಸಿನ ಹೆಜ್ಜೆಗಳನ್ನಿರಿಸಿದ್ದಾರೆ. ಕೇವಲ ಒಂದೇ ಮಾದರಿ ಬೆಲ್ಲ ತಯಾರಿಕೆ ಬದಲಾಗಿ ವಿವಿಧ ಸ್ವಾದಗಳಲ್ಲಿ ಬೆಲ್ಲ ತಯಾರಿಕೆಗೆ ಮುಂದಾಗಿ ಹೊಸ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಬೇರೆ ಬೇರೆ ರೈತರಿಂದ ಕಬ್ಬು ಖರೀದಿಸುವ ಇವರು ಸಾಂಪ್ರದಾಯಿಕ ರೀತಿಯಲ್ಲಿಯೇ ಬೆಲ್ಲ ತಯಾರಿಕೆಗೆ ಮುಂದಾಗಿದ್ದಾರೆ. ಬೆಲ್ಲದ ಪೌಡರ್, ಕಾಕಂಬಿ ಸೇರಿದಂತೆ ವಿವಿಧ ಸ್ವಾದಗಳಲ್ಲಿ ಬೆಲ್ಲ ನೀಡುತ್ತಿದ್ದಾರೆ. ರಾಸಾಯನಿಕ ಮುಕ್ತ ಬೆಲ್ಲದ ಜತೆಗೆ ದೇಸಿ ಹಸುವಿನ ತುಪ್ಪ ಬಳಸಿ ಬೆಲ್ಲ ತಯಾರಿಸಿದ್ದು, ದಾಲ್ಚಿನ್ನಿ, ಶುಂಠಿ, ಅರಿಶಿಣ, ಲವಂಗ, ಏಲಕ್ಕಿ, ಕಾಳು ಮೆಣಸು, ತುಳಸಿ ಸ್ವಾದಗಳಲ್ಲಿ ಬೆಲ್ಲ ತಯಾರಿಸುತ್ತಿದ್ದು, ಉತ್ತಮ ಬೇಡಿಕೆ ಬರುತ್ತಿದೆಯಂತೆ. ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಬೆಲ್ಲ ಹೋಗುತ್ತಿದ್ದು, ನೆರೆಯ ಆಂಧ್ರಪ್ರದೇಶದ ವಿಜಯವಾಡ, ತಮಿಳುನಾಡಿಗೂ ಹೋಗಿದೆ. ಗುಜರಾತ್‌ನಿಂದ ಬೇಡಿಕೆ ಬಂದಿದ್ದರೂ ಕೋವಿಡ್ ಕಾರಣ ಕಳುಹಿಸಲು ಸಾಧ್ಯವಾಗಿಲ್ಲ. ಬೆಲ್ಲ ತಯಾರಿಕೆ ಪ್ರಮಾಣ ಹೆಚ್ಚಿಸುವ ಹಾಗೂ ಇನ್ನಷ್ಟು ಸ್ವಾದಗಳ ಪ್ರಯೋಗಕ್ಕೆ ಮುಂದಾಗುವ ಚಿಂತನೆಯನ್ನು ಮಹಾಲಿಂಗಪ್ಪ ಹೊಂದಿದ್ದಾರೆ.
200 ಲೀಟರ್ ಕಬ್ಬಿನ ಹಾಲಿಗೆ 20 ಕೆಜಿಯಷ್ಟು ಬೆಲ್ಲ, 3ರಿಂದ 4.5 ಕ್ವಿಂಟಲ್ ಸಕ್ಕರೆ ಬೆರೆಸಿ ಕಪ್ಪು ಬಣ್ಣಕ್ಕೆ ಬರುವಂತೆ ಮಾಡಿ ಅದನ್ನೇ ಉತ್ತಮ ದರ್ಜೆ ಬೆಲ್ಲ ಎಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಗೆ ಬೆಲ್ಲವನ್ನು ಬೆಲ್ಲವಾಗಿಯೇ ನೀಡಬೇಕೆಂಬ ಉದ್ದೇಶದೊಂದಿಗೆ ರಾಸಾಯನಿಕ-ಸಕ್ಕರೆ ಮುಕ್ತ ಬೆಲ್ಲ ನೀಡುವ ಕಾಯಕದಲ್ಲಿ ತೊಡಗಿದ್ದೇನೆ.
-ಮಹಾಲಿಂಗಪ್ಪ ಇಟ್ನಾಳ
-ಅಮರೇಗೌಡ ಗೋನವಾರ