Advertisement
ರೆಗ್ಯುಲರ್ ನಟ, ನಟಿಯೂ ಇಲ್ಲ. ಎಲ್ಲದರಲ್ಲೂ ಫ್ರೆಶ್ ಎನಿಸುವ, ಬರೀ ಯೂಥ್ಸ್ ಅಷ್ಟೇ ಅಲ್ಲ, ಕುಟುಂಬ ಸಮೇತ ನೋಡಬಹುದಾದ ಅಪ್ಪಟ ಅಭಿಮಾನಿಯ ಅಭಿಮಾನದ ಸಿನಿಮಾ ಎಂದು ಮುಲಾಜಿಲ್ಲದೆ ಹೇಳಬಹುದು.ಮೊದಲೇ ಹೇಳಿದಂತೆ, ಇಲ್ಲಿ ಗಾಂಧಿನಗರದ ಸಿದ್ಧಸೂತ್ರಗಳಿಲ್ಲ. ಬದಲಾಗಿ ನಮ್ಮ ನಡುವೆ ನಡೆಯೋ ಕಥೆ ಎನಿಸುವಷ್ಟರ ಮಟ್ಟಿಗೆ ನಿರೂಪಿಸಿರುವ ನಿರ್ದೇಶಕರ ಪ್ರಯತ್ನ ಸಾರ್ಥಕ.
Related Articles
Advertisement
ಯಾರನ್ನೋ ಮೆಚ್ಚಿಸಬೇಕೆಂಬ ಕಾರಣಕ್ಕೆ ಐಟಂ ಡ್ಯಾನ್ಸ್, ನಂಬರ್ ಒನ್ ಸಾಂಗ್ ಕೂಡ ಬಯಸಲ್ಲ. ಇಲ್ಲೂ ಹಾಡುಗಳಿವೆ. ಆ ಪೈಕಿ ಎರಡು ಕೇಳಬೇಕೆನಿಸುತ್ತದೆ. ಒಂದು ಫೈಟೂ ಇದೆ. ಅದು ಕಥೆಗೆ ಪೂರಕ ಎನಿಸುತ್ತದೆ. ಉಳಿದಂತೆ ಬೇಕು ಅಂತಾನೇ ಹಾಸ್ಯ ದೃಶ್ಯವಾಗಲಿ, ಸಂಭಾಷಣೆಯಾಗಲಿ ಇಲ್ಲ. ಎಲ್ಲವೂ ದೃಶ್ಯಕ್ಕನುಗುಣವಾಗಿಯೇ ನಗಿಸುತ್ತಲೇ ಹೋಗುವ ಗುಣ ಚಿತ್ರದಲ್ಲಿದೆ. ಈ ಕಾರಣಕ್ಕೆ ಅಭಿಮಾನಿಯೊಬ್ಬಳ ಕಥೆ ಮತ್ತು ವ್ಯಥೆ ಇಷ್ಟವಾಗದೇ ಇರದು.
ಮೊದಲೇ ಹೇಳಿದಂತೆ ಇದು ಸೀರಿಯಲ್ ಹೀರೋ ಅಭಿಮಾನಿಯೊಬ್ಬಳ ಅಭಿಮಾನದ ಕಥೆ. ಧಾರಾವಾಹಿ ಹೀರೋನನ್ನು ಅತಿಯಾಗಿ ಇಷ್ಟಪಡುವ ಕಾಲೇಜು ಹುಡುಗಿಗೆ ಅವನಂದ್ರೆ ಅಚ್ಚುಮೆಚ್ಚು. ಧಾರಾವಾಹಿ ಶುರುವಾಗುವ ಮೊದಲೇ ಟಿವಿ ಮುಂದೆ ಕೂರುವ ಹುಚ್ಚು ಅಭಿಮಾನ ಆಕೆಯದು. ಹೇಗೋ ಆ ಹೀರೋನ ಫೇಸ್‌ಬುಕ್ ಫ್ರೆಂಡ್ ಆಗಿ, ಚಾಟಿಂಗ್ ಶುರುಮಾಡಿ, ವಾಟ್ಸಾಪ್‌ನಲ್ಲೂ ಮಾತುಕತೆ ಬೆಳೆಸುವ ಹಂತಕ್ಕೆ ಹೋಗುವ ಆಕೆಯ ಖುಷಿಗೆ ಪಾರವೇ ಇರಲ್ಲ.
ಅತ್ತ, ಆ ಧಾರಾವಾಹಿ ಚಿತ್ರೀಕರಣ ಹಳ್ಳಿಯೊಂದಕ್ಕೆ ಅದರಲ್ಲೂ ಕರಾವಳಿ ಭಾಗದಲ್ಲಿ ಚಿತ್ರೀಕರಿಸುವ ಹಂತ ತಲುಪಿದಾಗ, ಅವಳ ಕರಾವಳಿ ಊರು, ಅಲ್ಲಿನ ಪರಿಸರ, ಆಕೆಯ ದೊಡ್ಡ ಮನೆಯನ್ನೇ ಧಾರಾವಾಹಿ ತಂಡ ಆಯ್ಕೆ ಮಾಡುತ್ತೆ. ತಾನು ಇಷ್ಟಪಡುವ ಹೀರೋನ ಧಾರಾವಾಹಿ ತನ್ನ ಮನೆಯಲ್ಲೇ ಚಿತ್ರೀಕರಣ ಆಗುತ್ತೆ ಅಂದಾಗ, ಆಕೆಗೆ ಸ್ವರ್ಗ ಮೂರೇ ಗೇಣು. ಇಂತಿಪ್ಪ, ಆಕೆಗೂ ಆ ಹೀರೋ ಮೇಲೆ ಮೆಲ್ಲನೆ ಪ್ರೀತಿ ಶುರುವಾಗುತ್ತೆ. ಅವನಿಗೂ ಲವ್ ಆಗುತ್ತೆ. ಈ ನಡುವೆ ಅಲ್ಲಲ್ಲಿ ಟ್ವಿಸ್ಟ್‌ಗಳು ಬರುತ್ತವೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ ಚಿತ್ರದ ಸಾರಾಂಶ.
ಆರ್ಯನ್ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಬಾಡಿ ಲಾಂಗ್ವೇಜ್‌ನತ್ತ ಸ್ವಲ್ಪ ಗಮನಿಸಿದರೆ, ಒಳ್ಳೆಯ ಭವಿಷ್ಯವಿದೆ. ಇನ್ನು ಅದ್ವೀತಿ ಶೆಟ್ಟಿ ಪಾತ್ರದ ತೂಕ ಹೆಚ್ಚಿಸಿದ್ದಾರೆ. ಇಡೀ ಚಿತ್ರದ ಕಥೆಯನ್ನೇ ತನ್ನ ಮೇಲೆ ಹೊತ್ತಿಕೊಂಡಿದ್ದರೂ, ಎಲ್ಲೂ ಭಾರ ಎನಿಸದಂತೆ ಲವಲವಿಕೆಯಲ್ಲೇ ಕೊಟ್ಟ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಸಮೀಕ್ಷಾ, ವಿಜಯ ಕಾಶಿ, ರವಿಭಟ್, ಮಂಡ್ಯ ರಮೇಶ್, ಸ್ವಾತಿ, ನವೀನ್ ಡಿ. ಪಡೀಲ್ ಪಾತ್ರಗಳಿಗೆ ಮೋಸ ಮಾಡಿಲ್ಲ. ವಿಕ್ರಮ್, ಚಂದನ ಸಂಗೀತದ ಎರಡು ಹಾಡು ಚೆನ್ನಾಗಿವೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಚಿತ್ರದ ಇನ್ನೊಂದು ಪ್ಲಸ್. ಪವನ್‌ಕುಮಾರ್ ಛಾಯಾಗ್ರಹಣದಲ್ಲಿ ಕರಾವಳಿ ಸೊಬಗಿದೆ.
ಚಿತ್ರ: ಫ್ಯಾನ್ನಿರ್ಮಾಣ: ಸವಿತ ಈಶ್ವರ್, ಶಶಿಕಿರಣ್, ರಾಜಮುಡಿ ದತ್ತ
ನಿರ್ದೇಶನ: ದರ್ಶಿತ್ ಭಟ್
ತಾರಾಗಣ: ಆರ್ಯನ್, ಅದ್ವೀತಿ ಶೆಟ್ಟಿ, ಸಮೀಕ್ಷಾ, ವಿಜಯ ಕಾಶಿ, ರವಿಭಟ್, ಮಂಡ್ಯ ರಮೇಶ್, ಸ್ವಾತಿ, ನವೀನ್ ಡಿ. ಪಡೀಲ್ ಇತರರು. * ವಿಜಯ್ ಭರಮಸಾಗರ