ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಬಿಬಿಎಂಪಿಯಲ್ಲಿ ಉದ್ಯೋಗ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಬಿಎಂಟಿಎಫ್ ಪೊಲೀಸರು, “ಡಿ’ ಗ್ರೂಪ್ ನೌಕರ ಅಶೋಕ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ನಕಲಿ ದಾಖಲೆಗಳನ್ನು ನೀಡಿ ಬಿಬಿಎಂಪಿಯಲ್ಲಿ ಅನುಕಂಪದ ಆಧಾರದಲ್ಲಿ ಅಶೋಕ ಕುಮಾರ್ ಉದ್ಯೋಗ ಪಡೆದಿದ್ದಾರೆ ಎಂದು ಅಮರೇಶ್‌ಗೌಡ ಎಂಬುವವರು ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಅಶೋಕ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಬಿಎಂಟಿಎಫ್ ಪೊಲೀಸರಿಗೆ ಸೂಚಿಸಿತ್ತು. ಅದರಂತೆ ಸಬ್‌ಇನ್‌ಸ್ಪೆಕ್ಟರ್ ಶಿವಕುಮಾರ್ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿದ್ದ ನಾರಿ ಎಂಬುವರು ಕರ್ತವ್ಯದ ವೇಳೆ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಪುತ್ರ ಬಾಬುಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಲು ನಿರ್ಧರಿಸಲಾಗಿತ್ತು. ಆದರೆ, ನಾರಿ ಅವರ ಮಗ ಬಾಬು ಕೂಡ ಅದಾಗಲೇ ಮೃತಪಟ್ಟಿದ್ದರು. ಇದನ್ನು ದುರುಪಯೋಗಪಡಿಸಿಕೊಂಡ ಅಶೋಕಕುಮಾರ್ ಎಂಬಾತ ತಾನೇ ಬಾಬು ಎಂದು ನಕಲಿ ದಾಖಲೆ ಸೃಷ್ಟಿಸಿ ಬಿಬಿಎಂಪಿಯಲ್ಲಿ “ಡಿ’ ಗ್ರೂಪ್ ನೌಕರನಾಗಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣದ ಹಿನ್ನೆಲೆ
ನ್ಯಾಯಾಲಯದ ನಿರ್ದೇಶನದಂತೆ ಈಗಾಗಲೇ ತನಿಖೆ ನಡೆಸುತ್ತಿರುವ ಬಿಎಂಟಿಎಫ್ ಪೊಲೀಸರು, ಪ್ರಾಥಮಿಕ ವರದಿ ಸಿದ್ಧಪಡಿಸುತ್ತಿದೆ. ಅಶೋಕ್ ಕುಮಾರ್ ಬಿಬಿಎಂಪಿಯಲ್ಲೇ ಪೌರಕಾರ್ಮಿಕರಾಗಿದ್ದ ಟಿ.ಎಂ. ವೇಲು ಎಂಬುವರ ಪುತ್ರನಾಗಿದ್ದು, ವೇಲು ಕೂಡ ಕರ್ತವ್ಯದ ಸಮಯದಲ್ಲಿಯೇ ಮೃತಪಟ್ಟಿದ್ದರು. ಆಗ ತಂದೆ ಕೆಲಸವನ್ನು ಹಿರಿಯ ಮಗ ಅಶೋಕ ಕುಮಾರ್‌ಗೆ ನೀಡಬೇಕಿತ್ತು.
ಆದರೆ, ಅಷ್ಟರಲ್ಲಾಗಲ್ಲೇ ಅಶೋಕ ಕುಮಾರ್ ಬಾಬು ಎಂಬ ಹೆಸರಿನಲ್ಲಿ ನೌಕರಿಯಲ್ಲಿರುವುದು ಗೊತ್ತಾಗಿದೆ ಎಂದು ಬಿಎಂಟಿಎಫ್ ಮೂಲಗಳು ತಿಳಿಸಿವೆ. ಈ ಮಧ್ಯೆ ಬಿಎಂಟಿಎಫ್ ಪೊಲೀಸರು ಹೆಚ್ಚಿನ ತನಿಖೆಗಾಗಿ ನಾರಿ ಮತ್ತು ಟಿ.ಎಂ. ವೇಲು ಅವರ ಸೇವಾ ಪುಸ್ತಕ ಸಲ್ಲಿಸುವಂತೆ ಬಿಬಿಎಂಪಿ ಆಡಳಿತ ವಿಭಾಗದ ಅಪರ ಆಯುಕ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.