ನವದೆಹಲಿ:ನಕಲಿ ವೀಸಾ (Fake Visa) ಉತ್ಪಾದನಾ ಫ್ಯಾಕ್ಟರಿಯೊಂದನ್ನು ದೆಹಲಿಯ ವಿಮಾನ ನಿಲ್ದಾಣ (Air port) ಘಟಕದ ಪೊಲೀಸರು ತಿಲಕ್ ನಗರದಲ್ಲಿ ಪತ್ತೆಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 51 ವರ್ಷದ ವ್ಯಕ್ತಿ ಸೇರಿದಂತೆ ಐದು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಕ್ಕೆ ತೆರಳುವ ಪ್ರಯಾಣಿಕರನ್ನು ವಂಚಿಸುವ ನಿಟ್ಟಿನಲ್ಲಿ ಭಾರೀ ಪ್ರಮಾಣದಲ್ಲಿ ನಕಲಿ ವೀಸಾಗಳನ್ನು ಫ್ಯಾಕ್ಟರಿಯಲ್ಲಿ ಉತ್ಪಾದನೆ ಮಾಡಲಾಗುತ್ತಿತ್ತು ಎಂದು ವರದಿ ವಿವರಿಸಿದೆ. ಕಳೆದ ವಾರ ನಕಲಿ ಫ್ಯಾಕ್ಟರಿಯೊಂದರ ಮೇಲೆ ದಾಳಿ ನಡೆಸಿದ್ದ ಪೊಲೀಸರು ನಕಲಿ ದಾಖಲೆ ಉತ್ಪಾದಿಸುವ ಭಾರೀ ಪ್ರಮಾಣದ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ 30 ನಕಲಿ ವೀಸಾಗಳ ಸ್ಟಿಕ್ಕ್ ರ್ಸ್, ವಿವಿಧ ದೇಶಗಳ 23 ರಬ್ಬರ್ ಸ್ಟ್ಯಾಂಪ್ಸ್, ಇಟಲಿ ನಿವಾಸದ ನಕಲಿ ವಿಳಾಸದ ಕಾರ್ಡ್ಸ್ ಸೇರಿದಂತೆ ಹಲವಾರು ಉಪಕರಣಗಳನ್ನು ಜಪ್ತಿ ಮಾಡಿರುವುದಾಗಿ ಡಿಸಿಪಿ(IGI) ಉಷಾ ರಂಗಾನಿ ತಿಳಿಸಿರುವುದಾಗಿ ವರದಿಯಾಗಿದೆ.
ನಕಲಿ ಫ್ಯಾಕ್ಟರಿಯಲ್ಲಿ ಭಾರೀ ಪ್ರಮಾಣದಲ್ಲಿ ನೇಪಾಳದ ಪಾಸ್ ಪೋರ್ಟ್ಸ್ ಗಳು, ಎರಡು ಭಾರತದ ಪಾಸ್ ಪೋರ್ಟ್ಸ್, ಲ್ಯಾಮಿನೇಷನ್ ಶೀಟ್ಸ್, ವಾಟರ್ ಮಾರ್ಕ್ ಪ್ರಿಂಟ್ಸ್, ಪ್ರಿಂಟೆಡ್ ಎನ್ವಲಪ್ಸ್ ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.