Advertisement

Delhi 5 ಸಾವಿರ ನಕಲಿ ವೀಸಾ ಸೃಷ್ಟಿ: 300 ಕೋ. ರೂ. ಸಂಪಾದನೆ!

01:09 AM Sep 16, 2024 | Team Udayavani |

ಹೊಸದಿಲ್ಲಿ: ಪ್ರತೀ ತಿಂಗಳು 30ರಿಂದ 60 ನಕಲಿ ವೀಸಾಗಳ ತಯಾರಿ, 8ರಿಂದ 10 ಲಕ್ಷ ರೂ.ಗಳಿಗೆ ಪ್ರತೀ ವೀಸಾ ಮಾರಾಟ… ಹೀಗೆ ಐದು ವರ್ಷಗಳಿಂದ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಕಲಿ ವೀಸಾ ದಂಧೆ ನಡೆಸಿ ಖದೀಮರು ಸೃಷ್ಟಿ ಸಿದ್ದು 5 ಸಾವಿರ ನಕಲಿ ವೀಸಾ; ಸಂಪಾದಿಸಿದ್ದು 300 ಕೋಟಿ ರೂ!

Advertisement

ಹೌದು, ವಿದೇಶಗಳಿಗೆ ಹೋಗಿ ಉತ್ತಮ ಆದಾಯದೊಂದಿಗೆ ಐಷಾರಾಮಿ ಜೀವನ ನಡೆಸಬೇಕು ಎಂದುಕೊಂಡವರಿಗೆ ಅರ್ಹತೆ, ನಿಯಮ ಯಾವುದೂ ಇಲ್ಲದೆಯೇ ವಿದೇಶ ಪ್ರಯಾಣ ಸುಲಭಗೊಳಿಸುವಂಥ ದಂಧೆಯೊಂದು ಇತ್ತೀಚೆಗಿನ ವರ್ಷಗಳಲ್ಲಿ ತೀವ್ರಗೊಂಡಿತ್ತು. ಹೊಸದಿಲ್ಲಿಯ ತಿಲಕ್‌ನಗರದ ಕಾರ್ಖಾನೆಯೇ ಇದರ ಕೇಂದ್ರ ಜಾಲ. ಈ ಜಾಲವನ್ನೇ ಇಂದಿರಾ ಗಾಂಧಿ ಅಂ.ರಾ. ವಿಮಾನ ನಿಲ್ದಾಣ (ಐಜಿಐಎ)ದ ಪೊಲೀಸರು ಭೇದಿಸಿದ್ದು, 6 ಮಂದಿಯನ್ನು ಬಂಧಿಸಿದ್ದಾರೆ.

ಈ ಕುರಿತು ಐಜಿಐಎ ಡಿಸಿಪಿ
ಮಾಹಿತಿ ನೀಡಿದ್ದು, 6 ಮಂದಿ ಯನ್ನು ಬಂಧಿಸಲಾಗಿದೆ. 16 ನೇಪಾಲಿ, 2 ಭಾರತೀಯ ಪಾಸ್‌ಪೋರ್ಟ್‌ಗಳ ಜತೆಗೆ ಕೆಲವು ನಕಲಿ ಶೆಂಜೆನ್‌ ವೀಸಾ ವಶಪಡಿಸಿಕೊಂಡಿದ್ದೇವೆ ಎಂದಿದ್ದಾರೆ. ಕೃತ್ಯಕ್ಕೆ ಬಳಸುತ್ತಿದ್ದ 23 ಸ್ಟಾಂಪ್‌, 30 ವೀಸಾ ಸ್ಟಿಕರ್‌, ಲ್ಯಾಮಿನೇಟಿಂಗ್‌ ಹಾಳೆ, ಲ್ಯಾಪ್‌ಟಾಪ್‌ ಸಹಿತ ಹಲವು ವಸ್ತುಗಳನ್ನು ವಶಪಡಿಸಿಕೊಂಡಿ ರುವುದಾಗಿ ತಿಳಿಸಿದ್ದಾರೆ.

ಸೆ. 2ರಿಂದಲೇ ಬೇಟೆ ಆರಂಭ!
ಹರಿಯಾಣ ಮೂಲದ ಸಂದೀಪ್‌ ಎಂಬಾತ ಸೆ. 2ರಂದು ಸ್ವೀಡನ್‌ ನಕಲಿ ವೀಸಾ ಬಳಸಿ ಇಟಲಿಗೆ ತೆರಳಲು ಮುಂದಾಗಿದ್ದ ವೇಳೆ ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ. ಆತನ ಬೆನ್ನು ಹತ್ತಿದ ಪೊಲೀಸರಿಗೆ ಈ ಜಾಲದ ಸುಳಿವು ಸಿಕ್ಕಿತ್ತು. ಬಳಿಕ ವೀಸಾ ಏಜೆಂಟ್‌ ಆಸಿಫ್ ಅಲಿ ಹಾಗೂ ಆತನ ಸಹಚರ ಶಿವ ಗೌತಮ್‌, ನವೀನ್‌ ರಾಣಾರನ್ನು ಬಂಧಿಸಿದ್ದರು. ಬಳಿಕ ಇದೇ ಗ್ಯಾಂಗ್‌ನ ಬಲ್ಬಿರ್‌ ಸಿಂಗ್‌, ಜಸ್ವೀಂದರ್‌ ಸಿಂಗ್‌ನನ್ನು ಬಂಧಿಸಿದಾಗ ತಿಲಕ್‌ನಗರ ಫ್ಯಾಕ್ಟರಿಯ ಕರಾಳ ಮುಖ ಬಯಲಾಗಿದೆ. ಅನಂತರ ಪೊಲೀಸರು ಫ್ಯಾಕ್ಟರಿ ನಡೆಸುತ್ತಿರುವ ಮನೋಜ್‌ ಮೋಂಗಾನನ್ನು ಬಂಧಿಸಿದಾಗ 5 ವರ್ಷಗಳಿಂದ ನಡೆಯುತ್ತಿದ್ದ ದಂಧೆಯ ಸಂಪೂರ್ಣ ವಿವರ ಬಹಿರಂಗವಾಯಿತು. ಗ್ರಾಫಿಕ್‌ ಡಿಸೈನರ್‌ ಆಗಿದ್ದ ಮನೋಜ್‌ ತನ್ನ ಕೈಚಳವನ್ನೆಲ್ಲ ಈ ದಂಧೆಗೆ ಬಳಸಿದ್ದು, ಕೇವಲ 20 ನಿಮಿಷಗಳಲ್ಲಿ ವೀಸಾ ಸ್ಟಿಕರ್‌ ದುರಸ್ತಿ ಮಾಡುವ ಚಾಕಚಕ್ಯತೆಯನ್ನು ಈ ಖದೀಮರು ಮೈಗೂಡಿಸಿಕೊಂಡಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next