Advertisement

BBMP: ರಜೆ ದಿನದಲ್ಲೂ ಗುಂಡಿ ಮುಚ್ಚಿದ ಪಾಲಿಕೆ ನೌಕರರು

12:39 PM Sep 15, 2024 | Team Udayavani |

ಬೆಂಗಳೂರು: ಸರ್ಕಾರಿ ಅಧಿಕಾರಿಗಳಿಗೆ ಸಾಲು ಸಾಲು ರಜೆ. ಆದರೆ, ಪಾಲಿಕೆ ಅಧಿಕಾರಿಗಳಿಗೆ ಮಾತ್ರ ರಜೆ ಭಾಗ್ಯವಿಲ್ಲ. ಕಾರಣ ಬಿಬಿಎಂಪಿ ಎಂಟೂ ವಲಯದಲ್ಲಿ ಬಾಯ್ತೆರೆದಿರುವ ರಸ್ತೆ ಗುಂಡಿಗಳು! ರಾಜಧಾನಿ ರಸ್ತೆ ಗುಂಡಿಗಳ ಬಗ್ಗೆ ಜನರಿಂದ ಆಕ್ರೋಶ ವ್ಯಕ್ತವಾಗುವ ಮೊದಲೇ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ರಸ್ತೆ ಗುಂಡಿಗಳನ್ನು ಮುಚ್ಚುವ ಗಡುವು ನೀಡಿದ್ದಾರೆ.

Advertisement

ಆ ಹಿನ್ನೆಲೆಯಲ್ಲಿ ಸರ್ಕಾರಿ ರಜಾ ದಿನಗಳಂದೂ ಕೂಡ ಸಿಲಿಕಾನ್‌ ಸಿಟಿಯ ರಸ್ತೆ ಗುಂಡಿಗಳನ್ನು ಮುಚ್ಚಿಸುವ ಕಾರ್ಯದಲ್ಲಿ ಬಿಬಿಎಂಪಿ ಅಧಿಕಾರಿಗಳ ತೊಡಗಲಿದ್ದಾರೆ. ಸೆ.14ರಂದು 2ನೇ ಶನಿವಾರ, ಸೆ.15ರಂದು ಭಾನುವಾರ, ಸೆ.16ರಂದು ಈದ್‌ ಮಿಲಾದ್‌ ರಜೆ ಇದೆ. ಆದರೆ ಈ ರಜೆ ಸವಿಯುವ ಭಾಗ್ಯ ಬಿಬಿಎಂಪಿ ಅಧಿಕಾರಿಗಳಿಗೆ ಇಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಹಗಲು- ರಾತ್ರಿ ಎನ್ನದೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದ್ದು, ಸರಿಯಾಗಿ ಕೆಲಸ ನಡೆಯುತ್ತಿದೆ ಎಂಬುವುದು ಮುಖ್ಯಮಂತ್ರಿಗಳ ಗಮನಕ್ಕೂ ಕೂಡ ಬಂದಿದೆ ಎಂದಿದ್ದಾರೆ. ಈ ಮಧ್ಯೆ ಯಲಹಂಕ ವಲಯ ವ್ಯಾಪ್ತಿಯ ಸಹಕಾರ ನಗರದ 20ನೇ ಕ್ರಾಸ್‌ ನಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಶನಿವಾರದಿಂದ ಸೋಮವಾರದ ವರೆಗೆ ರಜೆ ದಿನವಾಗಿದೆ. ಆ ದಿನಗಳಂದೂ ಕೂಡ ಗುಂಡಿ ಮುಚ್ಚುವ ಕೆಲಸ ಸಕ್ರಿಯವಾಗಿ ನಡೆಯಲಿದೆ. ಸೆ.17ರ ಒಳಗೆ ರಾಜಧಾನಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಪೂರ್ಣಗೊಳ್ಳಲಿದೆ. ರಸ್ತೆ ಗುಂಡಿ ಮುಚ್ಚುವ ಕೆಲಸ ಪೂರ್ಣಗೊಂಡ ನಂತರ ಹೊಸ ದಾಗಿ ಬೀಳುವ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮತ್ತೆ ನಡೆಯಲಿದೆ. ವಲಯ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಎಂಜಿನಿಯರ್‌ಗಳು ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸದಲ್ಲಿ ತೊಡಗಲಿದ್ದಾರೆ ಎಂದು ಹೇಳಿದರು.

ಈ ವರ್ಷ 1567 ಗುಂಡಿಗಳನ್ನು ಮುಚ್ಚಲಾಗಿದೆ: ವಲಯ ಆಯುಕ್ತರಾದ ಕರೀಗೌಡ ಮಾತ ನಾಡಿ, ಯಲಹಂಕ ವಲಯ ವ್ಯಾಪ್ತಿಯಲ್ಲಿ ಪ್ರಸ್ತುತ ವರ್ಷದಲ್ಲಿ 1567 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಬಾಕಿಯಿರುವ ಗುಂಡಿಗಳನ್ನು ಶೀಘ್ರ ಮುಚ್ಚಲಾಗುವುದೆಂದು ತಿಳಿಸಿದರು. ಯಲಹಂಕ ವಲಯ ವ್ಯಾಪ್ತಿಯಲ್ಲಿ 865 ಕಿ.ಮೀ. ಉದ್ದದ 5433 ರಸ್ತೆಗಳನ್ನು ಡಾಂಬರೀಕರಣ ನಡೆಸಲು ಯೋಜನೆ ರೂಪಿಸಿದ್ದು, ಶೀಘ್ರ ಡಾಂಬರೀಕರಣ ಕೆಲಸ ಕೈಗೆತ್ತಿಕೊಳ್ಳಲಾಗುತ್ತದೆ. ಪಾಲಿಕೆಯ 110 ಹಳ್ಳಿಗಳ ಪೈಕಿ ಯಲಹಂಕ ವಲಯಕ್ಕೆ 14 ಹಳ್ಳಿಗಳು ಸೇರಲಿದ್ದು 89 ಕಿ.ಮೀ ಉದ್ದದ 499 ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಪಾಲಿಕೆ ವಲಯ ಜಂಟಿ ಆಯುಕ್ತರಾದ ಮೊಹ್ಮದ್‌ ನಯೀಮ್‌ ಮೊಮಿನ್‌, ಮುಖ್ಯ ಅಭಿಯಂತರರಾದ ರಂಗನಾಥ್‌, ಕಾರ್ಯಪಾಲಕ ಅಭಿಯಂತರ ರಾದ ಪ್ರದೀಪ್‌, ನಾಗಪ್ಪ ಕಮತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು.

3-4 ದಿನಗಳಲ್ಲಿ ಎಲ್ಲ ಗುಂಡಿಗಳಿಗೆ ಮುಕ್ತಿ: ಆಯುಕ್ತ: ಈಗಾಗಲೇ ಬೆಂಗಳೂರು ಬೃಹತ್‌ ಮಹಾ ನಗರ ಪಾಲಿಕೆಯ ವಲಯ ಆಯುಕ್ತರು, ಅಧಿಕಾರಿ ಗಳು, ಸಿಬ್ಬಂದಿ ಸೇರಿದಂತೆ ಎಲ್ಲರೂ ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸದಲ್ಲಿ ತೊಡಗಿದ್ದಾರೆ. ಆ ಹಿನ್ನೆಲೆಯಲ್ಲಿ ರಸ್ತೆಗುಂಡಿ ಗಮನ ಪೋರ್ಟಲ್‌ ಇನ್ನೂ ರಿಪ್ರಷ್‌ ಮಾಡಿಲ್ಲ. ಆ ಹಿನ್ನೆಲೆಯಲ್ಲಿ ರಸ್ತೆ ಗುಂಡಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 1800 ಗುಂಡಿಗಳು ಇರುವ ನಿರೀಕ್ಷೆಯಿದ್ದು, ಮೂರ್ನಾಲ್ಕು ದಿನಗಳಲ್ಲಿ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಲಾಗುವುದು. ರಾಜಧಾನಿಯಲ್ಲಿ ಪ್ರಸ್ತುತ ಮಳೆ ಬರುವುದು ನಿಂತಿದ್ದು, ಗುತ್ತಿಗೆದಾರರಿಂದ ಹೆಚ್ಚು ಹೆಚ್ಚು ಹಾಟ್‌ ಮಿಕ್ಸ್‌ ಪಡೆದು ಹಗಲು-ರಾತ್ರಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುವುದು. ಬಾಕಿಯಿರುವ ರಸ್ತೆ ಗುಂಡಿಗಳನ್ನು ಶೀಘ್ರದಲ್ಲೇ ಮುಚ್ಚುವ ಕಲಸ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.