ಗದಗ: ಮಕ್ಕಳಿಲ್ಲದ ದಂಪತಿಗಳ ಮಡಿಲಿಗೆ ಮಗುವನ್ನು ನೀಡುವುದು ಪುಣ್ಯದ ಕೆಲಸ. ಇಂತಹ ಕಾರ್ಯದಲ್ಲಿ ಸಮರ್ಪಿಸಿಕೊಂಡ ಸೇವಾ ಭಾರತಿ ಟ್ರಸ್ಟ್‌ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಸಮಾಜಮುಖೀ ಕಾರ್ಯ ಶ್ಲಾಘನೀಯ ಎಂದು ಹರ್ಲಾಪುರ-ಹಳ್ಳಿಗುಡಿಯ ಕೊಟ್ಟೂರೇಶ್ವರ ಮಠದ ಅಭಿನವ ಡಾ| ಕೊಟ್ಟೂರೇಶ್ವರ ಸಾಮೀಜಿ ಹೇಳಿದರು.
ಬೆಟಗೇರಿಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಏರ್ಪಡಿಸಿದ್ದ ದತ್ತು ಪೂರ್ವ ಪೋಷಕತ್ವದಡಿ ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಹಸ್ತಾಂತರಿಸುವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಮಕ್ಕಳಿಲ್ಲದ ದಂಪತಿಗಳು ದತ್ತು ಪಡೆದ ಮಗುವಿಗೆ ತಾವೇ ಜನ್ಮ ನೀಡಿದ ಮಗುವಿನಂತೆ ಪ್ರೀತಿ, ಮಮತೆ, ಕಕ್ಕುಲತೆಯಿಂದ ಪೋಷಿಸಿ ಉತ್ತಮ ಸಂಸ್ಕಾರ, ಶಿಕ್ಷಣ ನೀಡಿ ಮಗುವಿನ ಉತ್ತಮ ಭವಿಷ್ಯ ನಿರ್ಮಿಸಬೇಕು ಎಂದರು.
ಹೆತ್ತವರಿಗೆ ಬೇಡವಾದ ಮಕ್ಕಳನ್ನು ಪೋಷಿಸಿ ಮಕ್ಕಳಿಲ್ಲದ ದಂಪತಿಗೆ ಕಾನೂನಿನ ಚೌಕಟ್ಟಿಗೆ ಒಳಪಟ್ಟು ದತ್ತು ಪೋಷಕತ್ವದಡಿ ಹಸ್ತಾಂತರಿಸುವ ಗುರುತರವಾದ ಜವಾಬ್ದಾರಿ ನಿಭಾಯಿಸುತ್ತಿರುವ ಸಂಸ್ಥೆ ಪುಣ್ಯದ ಕೆಲಸ ಮಾಡುತ್ತಿದೆ. ಇಲ್ಲಿನ ಆಯಾಗಳು ತಾಯಿ ಇಲ್ಲದ ಮಗುವಿಗೆ ತಾಯಿ ಸ್ಥಾನ ಕೊಟ್ಟು ಅಂತಹ ಮಕ್ಕಳನ್ನು ಲಾಲನೆ, ಪಾಲನೆ, ಪೋಷಣೆಯಲ್ಲಿ ಹಗಲಿರುಳು ಸಮರ್ಪಣಾ ಭಾವದಿಂದ ತಮ್ಮನ್ನು ತೊಡಗಿಸಿಕೊಂಡಿರುವುದೂ ಪುಣ್ಯಪ್ರಾಪ್ತಿಯ ಕಾರ್ಯ ಎಂದರು.
ಉದ್ಯಮಿ ಡಾ| ವಿಜಯ ಸಂಕೇಶ್ವರ ಮಾತನಾಡಿ, ಹೆತ್ತ ಮಗುವನ್ನು ತ್ಯಜಿಸಿವುದು, ಮಗು ಮಾರಾಟದಂತಹ ಘಟನೆಗಳನ್ನು ತಡೆಗಟ್ಟಬೇಕು. ಸಮಾಜ ಮತ್ತು ಸರಕಾರ ಜಾಗೃತವಾಗಬೇಕು. ವ್ಯಾಮೋಹ, ಸರಿಯಾದ ವಯಸ್ಸಿನಲ್ಲಿ ಮದುವೆ ಆಗದೇ, ಅನ್ಯ ಕಾರಣದಿಂದ ಜನಿಸುವ ಮಕ್ಕಳು, ಹೆಣ್ಣು ಮಗು ಬೇಡವೆಂದು ಹೆತ್ತ ಮಗುವನ್ನು ಬೇಕಾದಲ್ಲಿ ಬಿಟ್ಟು ಹೋಗುವುದು ಮುಗ್ಧ ಕಂದಮ್ಮಗಳ ಅನಾಥ ಸ್ಥಿತಿಗೆ ಕಾರಣವಾಗಲಿದೆ. ಪ್ರಜ್ಞಾವಂತರು ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು.
ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ್‌ನ ಅಧ್ಯಕ್ಷ ರಘು ಅಕಮಂಚಿ ಮಾತನಾಡಿ, ಟ್ರಸ್ಟ್‌ನ ಸಮಾಜಮುಖೀ ಕಾರ್ಯವನ್ನು ವಿವರಿಸಿದರು. ಬೆಟಗೇರಿಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ| ಶೇಖರ ಸಜ್ಜನರ, ಡಾ| ರಾಜಶೇಖರ ಬಳ್ಳಾರಿ, ವಿಜಯಕುಮಾರ ಗಡ್ಡಿ, ಸುಧೀಂದ್ರ ಘೋರ್ಪಡೆ, ಶ್ರೀಧರ ಸುಲ್ತಾನಪುರ, ಬಸವರಾಜ ನಾಗಲಾಪುರ, ಬಾಲಕೃಷ್ಣ ಕಾಮತ, ಪಟ್ಟಣಶೆಟ್ಟಿ, ಬೂದೇಶ ಬ್ಯಾಹಟ್ಟಿ, ಚನ್ನಯ್ಯ ಬೊಮ್ಮನಹಳ್ಳಿ, ರಾಜೇಶ ಖಟವಟೆ, ನಾಗವೇಣಿ ಕಟ್ಟಿಮನಿ, ಶ್ರೀಧರ ಉಡುಪಿ, ಲಲಿತಾಬಾಯಿ ಮೇರವಾಡೆ, ಪ್ರಲಾದರಾಜ ಕಾರ್ಕಳ
ಇದ್ದರು. ಪ್ರಾಚಾರ್ಯ ಮಾರುತಿ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಗಾಣಿಗೇರ ನಿರೂಪಿಸಿದರು. ಕಾರ್ಯದರ್ಶಿ ಸುಭಾಸ ಬಬಲಾದಿ ವಂದಿಸಿದರು.