ಚಾಮರಾಜನಗರ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಕೋವಿಡ್-19 ಆತಂಕದ ನಡುವೆಯೂ ಶೇ. 96ರಷ್ಟು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಜಿಲ್ಲೆಯಲ್ಲಿ ಇಂಗ್ಲಿಷ್ ವಿಷಯದ ಪರೀಕ್ಷೆಯನ್ನು 10,977 ತೆಗೆದುಕೊಂಡಿದ್ದರು.
ಇವರಲ್ಲಿ 10,564 ಮಂದಿ ಹಾಜರಾಗಿದ್ದು, 413 ಮಕ್ಕಳು ಗೈರಾಗಿದ್ದರು. ಒಟ್ಟು 56 ಪರೀಕ್ಷಾ ಕೇಂದ್ರಗಳಿದ್ದು, ಎಲ್ಲ ಕೇಂದ್ರಗಳಲ್ಲೂ ವಿದ್ಯಾರ್ಥಿಗಳ ತಾಪಮಾನ ಪರೀಕ್ಷಿಸಿ, ಕೈಗೆ ಸ್ಯಾನಿಟೈಸರ್ ಹಾಕಿ ಮಾಸ್ಕ್ ನೀಡಲಾಯಿತು. ಗ್ರಾಮೀಣ ವಿದ್ಯಾರ್ಥಿಗಳಿಗೆ 85 ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಪೋಷಕರು ತಮ್ಮ ವಾಹನಗಳಲ್ಲಿ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರತ್ಯೇಕ ಕೊಠಡಿ: ಕಂಟೈನ್‌ಮೆಂಟ್ ವಲಯದಿಂದ ಬಂದ ನಾಲ್ವರು ವಿದ್ಯಾರ್ಥಿಗಳು, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಐವರಿಗೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಯಿತು.
ಕುಸಿದ ವಿದ್ಯಾರ್ಥಿನಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರದಲ್ಲಿ ಸುಸ್ತಾಗಿ ಕುಸಿದು ಬಿದ್ದ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ನಗರದಲ್ಲಿ ನಡೆಯಿತು. ನಗರದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯೋರ್ವಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡುವಾಗ ಸುಸ್ತಾಗಿ ಕುಸಿದಳು.
ಅದೇ ಸಮಯಕ್ಕೆ ಡೀಸಿ ಡಾ.ಎಂ.ಆರ್.ರವಿ, ಎಸ್ಪಿ ಎಚ್.ಡಿ. ಆನಂದಕುಮಾರ್ ಅವರು ಕೇಂದ್ರಕ್ಕೆ ಭೇಟಿ ನೀಡಿದ್ದರು. ಏನಾಯಿತು ಎಂದು ಡಾ.ರವಿ ಪ್ರಶ್ನಿಸಿದರು. ಮನೆಯಿಂದ ಬರುವಾಗ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದಾಳೆ ಎಂದು ಪೋಷಕರು ತಿಳಿಸಿದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಎಂದು ಸೂಚಿಸಿದ ಡೀಸಿ, ವಿದ್ಯಾರ್ಥಿನಿಗೆ ಧೈರ್ಯ ಹೇಳಿದರು.