Advertisement

ಮಂಜೂರಾದ 86 ಹುದ್ದೆಗಳಲ್ಲಿ ಶೇ. 75ಕ್ಕೂ ಹೆಚ್ಚು ಖಾಲಿ

09:38 PM Jan 01, 2020 | mahesh |

ಬಂಟ್ವಾಳ: ಜಾನುವಾರುಗಳು ಸಹಿತ ಇತರ ಸಾಕು ಪ್ರಾಣಿಗಳ ಸೇವೆಯಲ್ಲಿ ತೊಡಗಿರುವ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಖಾಲಿ ಹುದ್ದೆಗಳೇ ಹೆಚ್ಚಿದ್ದು, ಬಂಟ್ವಾಳ ತಾಲೂಕಿನಲ್ಲಿ ಇಲಾಖೆಗೆ ಮಂಜೂರಾದ 86 ಹುದ್ದೆಗಳಲ್ಲಿ ಶೇ. 75ಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿ ಇವೆ.

Advertisement

ಅಂದರೆ ಒಟ್ಟು 86 ಹುದ್ದೆಗಳಲ್ಲಿ 21 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, 65 ಹುದ್ದೆಗಳು ಖಾಲಿ ಇವೆ. ಇಲಾಖೆಯ ಸಿಬಂದಿಯ ಒತ್ತಡ ತಗ್ಗಿಸುವ ದೃಷ್ಟಿ ಯಿಂದ ಗ್ರೂಪ್‌ ಡಿ ನೌಕರರನ್ನು ಮಾತ್ರ ಹೊರ ಗುತ್ತಿಗೆಯ ಆಧಾರದಲ್ಲಿ ತೆಗೆದುಕೊಳ್ಳಲು ಅವಕಾಶವಿದ್ದು, ಪ್ರಸ್ತುತ ಬಂಟ್ವಾಳದಲ್ಲಿ 15 ಮಂದಿ ಹೊರಗುತ್ತಿಗೆಯ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಹಾಲಿ ಕರ್ತವ್ಯ ನಿರ್ವಹಿಸು ತ್ತಿರುವ ಸಿಬಂದಿ ಎರಡೆರಡು ಹುದ್ದೆ ಗಳನ್ನು ನಿಭಾಯಿಸುವ ಪರಿಸ್ಥಿತಿ ಇದ್ದು, ವಿವಿಧ ಸಭೆ ಗಳು, ಫೀಲ್ಡ್‌ ವರ್ಕ್‌ಗಳನ್ನು ಒತ್ತಡದಲ್ಲೇ ನಿಭಾಯಿಸಬೇಕಾದ ಸ್ಥಿತಿ ಇದೆ. ಗ್ರಾಮೀಣ ಭಾಗಗಳಲ್ಲಿ ಪಶು ಚಿಕಿತ್ಸಾಲಯಗಳು, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿದ್ದು, ಅಲ್ಲಿಗೆ ತೆರಳಿ ಕರ್ತವ್ಯ ನಿರ್ವಹಿಸಬೇಕಿದೆ.

ಆಸ್ಪತ್ರೆ, ಕೇಂದ್ರಗಳು
ಬಂಟ್ವಾಳ ತಾ|ನಲ್ಲಿ ಬಂಟ್ವಾಳ, ಕಲ್ಲಡ್ಕ, ಮಾಣಿ, ವಿಟ್ಲದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಯಿದ್ದು, ರಾಯಿ, ಸಿದ್ದಕಟ್ಟೆ, ಮೂರ್ಜೆ, ವಗ್ಗ, ಮಾವಿನಕಟ್ಟೆ, ವಾಮದಪದವು, ಬೆಂಜನಪದವು, ಕುರ್ನಾಡು, ಮೂರ್ಜೆ, ಅಡ್ಯನಡ್ಕ ಹಾಗೂ ಸಂಚಾರಿ ಪಶು ಚಿಕಿತ್ಸಾಲಯಗಳಿವೆ. ಕನ್ಯಾನ, ಪರಿಯಲ್ತಡ್ಕ, ಪೆರ್ನೆ, ಸಜೀಪಮೂಡ, ಪಂಜಿಕಲ್ಲು, ಮೇರಮಜಲು, ಕಕ್ಯಪದವು, ಕುಡ್ತಮುಗೇರುಗಳಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

6 ತಿಂಗಳಲ್ಲಿ ಶೇ. 50 ಭರ್ತಿ?
ಪಶುಪಾಲನ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಗಳು ಹುದ್ದೆಗಳ ಭರ್ತಿಗಾಗಿ ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದು, 6 ತಿಂಗಳೊಳಗಾಗಿ ಶೇ. 50ರ‌ಷ್ಟು ಹುದ್ದೆ ಭರ್ತಿಯಾಗುವ ಕುರಿತು ಮಾಹಿತಿ ಲಭಿಸಿದೆ ಎಂದು ಇಲಾಖೆ ಮೂಲ ತಿಳಿಸಿದೆ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುವ ಸಹಾ ಯಕ ಹುದ್ದೆ ಮುಂಭಡ್ತಿ ಮೂಲಕ ಭರ್ತಿಯಾದರೆ, ಉಳಿದ ಹುದ್ದೆಗಳು ಹೊಸ ನೇಮಕಾತಿ / ವರ್ಗಾವಣೆ ಮೂಲಕ ಭರ್ತಿಯಾಗಬೇಕಿದೆ.

ಎಷ್ಟೆಷ್ಟು ಹುದ್ದೆಗಳಿವೆ?
ಒಟ್ಟು 4 ಸಹಾಯಕ ನಿರ್ದೇಶಕರ ಹುದ್ದೆಗಳಲ್ಲಿ 4 ಕೂಡಾ ಭರ್ತಿಯಾಗಿವೆ. ಒಟ್ಟು 12 ಪಶು ವೈದ್ಯಾಧಿಕಾರಿ ಹುದ್ದೆಗಳಲ್ಲಿ 5 ಮಾತ್ರ ಭರ್ತಿಯಾಗಿದ್ದು, 7 ಹುದ್ದೆಗಳು ಖಾಲಿ ಇವೆ. ಜಾನುವಾರು ಅಭಿವೃದ್ಧಿ ಅಧಿಕಾರಿ ಒಂದು ಹುದ್ದೆ ಭರ್ತಿ ಇದೆ. 20 ಪಶು ವೈದ್ಯಕೀಯ ಪರೀಕ್ಷಕ ಹುದ್ದೆಗಳಲ್ಲಿ 6 ಮಾತ್ರ ಭರ್ತಿಯಿದ್ದು, 14 ಖಾಲಿ ಇವೆ. ಪಶು ವೈದ್ಯಕೀಯ ಸಹಾಯಕರ 12 ಹುದ್ದೆಗಳಲ್ಲಿ ಯಾವುದೂ ಭರ್ತಿಯಿಲ್ಲ. ಡಿ ದರ್ಜೆ ನೌಕರರ 35 ಹುದ್ದೆಗಳಲ್ಲಿ 3 ಭರ್ತಿಯಿದ್ದು, 32 ಖಾಲಿ ಇವೆ. ದ್ವಿತೀಯ ದರ್ಜೆ ಸಹಾಯಕ ಹಾಗೂ ವಾಹನ ಚಾಲಕರ ತಲಾ ಒಂದು ಹುದ್ದೆಗಳು ಭರ್ತಿ ಇವೆ.

Advertisement

 ಸರಕಾರಕ್ಕೆ ಮನವಿ
ಇಲಾಖೆಯಲ್ಲಿ ಸಿಬಂದಿ ಕೊರತೆ ಇರುವ ಕುರಿತು ಶಾಸಕರು ಹಾಗೂ ಸರಕಾರಕ್ಕೆ ಮನವಿ ನೀಡಿದ್ದೇವೆ. ಹೊಸ ನೇಮಕಾತಿ ಮತ್ತು ವರ್ಗಾವಣೆಯಿಂದ ಹುದ್ದೆಗಳನ್ನು ಭರ್ತಿ ಮಾಡಬಹುದಾಗಿದ್ದು, ಪ್ರಸ್ತುತ ಬಹುತೇಕ ಮಂದಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಇಲಾಖೆಯ ಕೆಲಸವನ್ನು ನಿರ್ವಹಿಸಲಾಗುತ್ತಿದೆ.
 - ಡಾ| ಹೆನ್ರಿ, ಸಹಾಯಕ ನಿರ್ದೇಶಕರು, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಬಂಟ್ವಾಳ

-  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next